ಅಫ್‌ಸ್ಪಾ ಸಡಿಲೀಕರಣದ ವಿರುದ್ಧ ಮತ್ತೆ 400 ಯೋಧರಿಂದ ಸುಪ್ರೀಂ ಕೋರ್ಟ್‌ನಲ್ಲಿ ದಾವೆ

Update: 2018-08-31 14:28 GMT

ಹೊಸದಿಲ್ಲಿ, ಆ.31: ಬಂಡುಕೋರಪೀಡಿತ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಭದ್ರತಾ ಸಿಬ್ಬಂದಿ ವಿರುದ್ಧ ಪ್ರಕರಣಗಳನ್ನು ದಾಖಲಿಸಿರುವುದರ ವಿರುದ್ಧ ಶುಕ್ರವಾರದಂದು ಮತ್ತೆ 400 ಯೋಧರು ಸರ್ವೋಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ.

ಈ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ಯೋಧರ ವಿರುದ್ಧ ಕೇಂದ್ರದ ಅನುಮತಿಯಿಲ್ಲದೆ ಪ್ರಕರಣ ದಾಖಲಿಸುವುದನ್ನು ತಡೆಯುವ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯ್ದೆ (ಎಎಫ್‌ಎಸ್‌ಪಿಎ)ಯನ್ನು ದುರ್ಬಲಗೊಳಿಸಿರುವುದರ ವಿರುದ್ಧ ಶ್ರೇಷ್ಠ ನ್ಯಾಯಾಲಯದಲ್ಲಿ ದಾವೆ ಹೂಡಿರುವ ಯೋಧರ ಎರಡನೇ ಗುಂಪು ಇದಾಗಿದೆ. ಈ ತಿಂಗಳ ಆರಂಭದಲ್ಲಿ ಸುಮಾರು 350ರಷ್ಟು ಯೋಧರಿದ್ದ ಗುಂಪು ಇದೇ ಮಾದರಿಯ ಮನವಿಯನ್ನು ಮಾಡಿ ಸರ್ವೋಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಿತ್ತು. ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ಮುಂದಿನ ವಾರ ಈ ಕುರಿತು ವಿಚಾರಣೆ ನಡೆಸುವ ನಿರೀಕ್ಷೆಯಿದೆ.

ಮಣಿಪುರದಲ್ಲಿ ಭದ್ರತಾ ಸಿಬ್ಬಂದಿಯಿಂದ ನಡೆದಿರುವ ಮಾನವಹಕ್ಕುಗಳ ಉಲ್ಲಂಘನೆಯ ಬಗ್ಗೆ ತನಿಖೆ ನಡೆಸಲು ಕಳೆದ ವರ್ಷ ತ್ರಿಸದಸ್ಯ ನ್ಯಾಯಪೀಠ ವಿಶೇಷ ತಂಡವನ್ನು ರಚಿಸಿತ್ತು ಮತ್ತು ಪ್ರಾಥಮಿಕ ತನಿಖೆಯಲ್ಲಿ ನಿಜವೆಂದು ಸಾಬೀತಾದ ಪ್ರಕರಣಗಳ ತನಿಖೆಯನ್ನು ಸಿಬಿಐ ನಡೆಸುವಂತೆ ಆದೇಶಿಸಿತ್ತು.

ಈ ತೀರ್ಪು, ಪೀಡಿತ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಭದ್ರತಾ ಪಡೆಗಳ ಮೇಲೆ ತೀವ್ರ ಹೊಡೆತ ನೀಡಿತ್ತು ಮತ್ತು ಈ ಕ್ರಮವನ್ನು ಅಫ್‌ಸ್ಪಾ ಕಾಯ್ದೆಯಡಿ ಯೋಧರಿಗೆ ಇರುವ ಸುರಕ್ಷತೆಯನ್ನು ಸಡಿಲಗೊಳಿಸಿದಂತೆ ಎಂದು ವ್ಯಾಖ್ಯಾನಿಸಲಾಗಿತ್ತು. ನಾಗಾ ಬಂಡುಕೋರರ ಹಾವಳಿಯ ಹಿನ್ನೆಲೆಯಲ್ಲಿ 1958ರಲ್ಲಿ ಜಾರಿಗೆ ತರಲಾದ ಆಫ್‌ಸ್ಪಾ ಕಾನೂನು, ಗೃಹ ಸಚಿವಾಲಯ ಪೀಡಿತ ಎಂದು ಘೋಷಿಸುವ ಪ್ರದೇಶಗಳಲ್ಲಿ ಬಂಡುಕೋರರು ಉಪಯೋಗಿಸುವರು ಎನ್ನಲಾದ ಆಸ್ತಿಗಳನ್ನು ನಾಶ ಮಾಡುವ, ಮನೆಗಳ ಶೋಧ ನಡೆಸುವ ಮತ್ತು ಶಂಕಿತರನ್ನು ಗುಂಡಿಟ್ಟು ಹತ್ಯೆ ಮಾಡುವ ಅಧಿಕಾರವನ್ನು ಸೇನೆ, ರಾಜ್ಯ ಮತ್ತು ಕೇಂದ್ರ ಪೊಲೀಸ್ ಪಡೆಗೆ ನೀಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News