ಸೆಪ್ಟಂಬರ್ ಒಂದರಿಂದ ದುಬಾರಿಯಾಗಲಿವೆ ಕಾರು, ಬೈಕ್‌ಗಳು

Update: 2018-08-31 14:32 GMT

ಹೊಸದಿಲ್ಲಿ, ಆ.31: ಸರ್ವೋಚ್ಚ ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್‌ಡಿಎ) ದೀರ್ಘಾವಧಿ ಮೂರನೇ ಪಕ್ಷದ ವಿಮೆ (ಥರ್ಡ್ ಪಾರ್ಟಿ ಇನ್ಶೂರೆನ್ಸ್)ಯನ್ನು ಕಡ್ಡಾಯಗೊಳಿಸಿರುವ ಪರಿಣಾಮ ಸೆಪ್ಟಂಬರ್ ಒಂದರಿಂದ ಕಾರು ಮತ್ತು ಬೈಕ್‌ಗಳು ದುಬಾರಿಯಾಗಲಿವೆ.

 ಕಾರುಗಳಿಗೆ ಮೂರು ವರ್ಷಗಳ ಅವಧಿಯ ಥರ್ಡ್ ಪಾರ್ಟಿ ವಿಮೆ ಕ್ರಮವಾಗಿ, 1,000 ಸಿಸಿಗಿಂತ ಕಡಿಮೆ ಸಾಮರ್ಥ್ಯದ ಇಂಜಿನ್‌ಗೆ 5,286 ರೂ., 1,000ದಿಂದ 1,500ಕ್ಕೆ 9,534 ರೂ. ಮತ್ತು 1,500ಕ್ಕಿಂತ ಮೇಲ್ಪಟ್ಟ ಸಾಮರ್ಥ್ಯದ ಇಂಜಿನ್ ಹೊಂದಿರುವ ಕಾರುಗಳಿಗೆ 24,305 ರೂ. ಆಗಿದೆ. ಇದೇ ವೇಳೆ, ದ್ವಿಚಕ್ರ ವಾಹನಗಳ ಐದು ವರ್ಷಗಳ ಥರ್ಡ್ ಪಾರ್ಟಿ ವಿಮೆಗೆ ಕ್ರಮವಾಗಿ, 75 ಸಿಸಿಗಿಂತ ಕಡಿಮೆ ಸಾಮರ್ಥ್ಯದ ಇಂಜಿನ್ ಹೊಂದಿರುವ ವಾಹನಕ್ಕೆ 1,045 ರೂ., 75ರಿಂದ 150 ಸಿಸಿ ಇಂಜಿನ್‌ನ ವಾಹನಕ್ಕೆ 3,285 ರೂ. ಹಾಗೂ 350 ಸಿಸಿಗಿಂತ ಅಧಿಕ ಸಾಮರ್ಥ್ಯದ ಇಂಜಿನ್ ಹೊಂದಿರುವ ವಾಹನಕ್ಕೆ 13,034 ರೂ. ಆಗಿದೆ.

 ಕಾರು ಮತ್ತು ದ್ವಿಚಕ್ರ ವಾಹನ ಕೊಳ್ಳುವವರು ಥರ್ಡ್ ಪಾರ್ಟಿ ವಿಮೆ ಮಾಡಿಸುವುದನ್ನು ಸರ್ವೋಚ್ಚ ನ್ಯಾಯಾಲಯ ಈ ವರ್ಷದ ಜೂನ್‌ನಲ್ಲಿ ಕಡ್ಡಾಯಗೊಳಿಸಿ ಆದೇಶ ನೀಡಿತ್ತು. ನ್ಯಾಯಾಲಯದ ಆದೇಶದಿಂದ ರಸ್ತೆ ಅಪಘಾತದ ಸಂತ್ರಸ್ತರಿಗೆ ನೆರವಾಗಲಿದ್ದು, ಅಪಘಾತ ನಡೆಸಿದ ವಾಹನದ ಮಾಲಕರ ಹಿಂದೆ ಓಡುವುದು ತಪ್ಪುತ್ತದೆ ಮತ್ತು ನೇರವಾಗಿ ವಿಮಾ ಸಂಸ್ಥೆಗಳಿಂದ ಪರಿಹಾರ ಪಡೆಯಲು ಸಾಧ್ಯವಾಗಲಿದೆ ಎಂದು ವಿಮಾ ಅಧಿಕಾರಿಗಳು ತಿಳಿಸಿದ್ದಾರೆ. ಮೋಟಾರು ವಾಹನ ಕಾಯ್ದೆಯನ್ವಯ ಥರ್ಡ್ ಪಾರ್ಟಿ ವಿಮೆ ಕಡ್ಡಾಯವಾಗಿದ್ದು ಕಳ್ಳತನ ಮತ್ತು ಹಾನಿ ಮುಂತಾದ ಸಂದರ್ಭಗಳಲ್ಲೂ ವಿಮೆ ಪರಿಹಾರ ಒದಗಿಸುತ್ತದೆ. ಸದ್ಯ ಸೆಪ್ಟಂಬರ್ ಒಂದರಿಂದ ಈ ಆದೇಶವನ್ನು ಜಾರಿಗೆ ತರುವಂತೆ ಐಆರ್‌ಡಿಎ ಸೂಚಿಸಿದೆ. ಸಾಮಾನ್ಯ ವಿಮಾ ಸಂಸ್ಥೆಗಳು, ಹೊಸ ಕಾರುಗಳಿಗೆ ಕೇವಲ ಮೂರು ವರ್ಷ ಮತ್ತು ಹೊಸ ಬೈಕ್‌ಗಳಿಗೆ ಐದು ವರ್ಷಗಳ ಥರ್ಡ್ ಪಾರ್ಟಿ ವಿಮೆ ನೀಡಬೇಕು ಎಂದು ಐಆರ್‌ಡಿಎ ತನ್ನ ಆದೇಶದಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News