ಚರ್ಚ್‌ನಲ್ಲಿ ತಪ್ಪೊಪ್ಪಿಗೆ ನಿಷೇಧಕ್ಕೆ ಆಗ್ರಹ ಅಸಮಂಜಸ: ನ್ಯಾಯಪೀಠ

Update: 2018-08-31 14:35 GMT

ಹೊಸದಿಲ್ಲಿ, ಆ.31: ಮಹಿಳೆಯರನ್ನು ಬೆದರಿಸಲು ಕಾರಣವಾಗಬಹುದು ಎಂಬ ನೆಲೆಯಲ್ಲಿ ಚರ್ಚ್‌ನಲ್ಲಿ ತಪ್ಪೊಪ್ಪಿಗೆ ಕ್ರಿಯೆಯನ್ನು ನಿಷೇಧಿಸಬೇಕು ಎಂದು ಆಗ್ರಹಿಸುವುದು ಸಮಂಜಸವಲ್ಲ ಎಂದು ಶುಕ್ರವಾರ ಕಾನೂನು ಪೀಠ ತಿಳಿಸಿದೆ. ತಪ್ಪೊಪ್ಪಿಗೆಯನ್ನು ಒಂದು ಅಪರಾಧಿ ನಡೆ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ತನ್ನ ಕುಟುಂಬ ಕಾನೂನು ಸುಧಾರಣೆ ಕುರಿತ ಸಮಾಲೋಚನಾ ಪತ್ರದಲ್ಲಿ ಅಭಿಪ್ರಾಯಿಸಿದೆ.

ಕೆಲವು ಪಾದ್ರಿಗಳು ತಪ್ಪೊಪ್ಪಿಗೆ ಕ್ರಿಯೆಯನ್ನು ದುರ್ಬಳಕೆ ಮಾಡುವುದರ ಮೇಲೆ ತಡೆ ಹೇರಬೇಕಿದೆ. ತಪ್ಪೊಪ್ಪಿಗೆಯನ್ನು ಆಲಿಸಲು ಅರ್ಹ ನನ್‌ಗಳನ್ನು ನೇಮಿಸುವುದೂ ಹೆಚ್ಚು ಪ್ರಗತಿಪರ ಮತ್ತು ಒಪ್ಪಬಹುದಾದ ಸಲಹೆ. ಇದನ್ನು ಕಾನೂನು ಮೂಲಕವೇ ಜಾರಿಗೆ ತರಬೇಕೆಂದೇನೂ ಇಲ್ಲ. ಆದರೆ ಸಮುದಾಯದ ಒಳಗೆಯೇ ಒಮ್ಮತ ಮೂಡಿಸಿ ಜಾರಿಗೆ ತರಬೇಕಿದೆ ಎಂದು ನ್ಯಾಯಪೀಠ ತಿಳಿಸಿದೆ.

ಮಹಿಳೆಯರ ಬ್ಲಾಕ್‌ಮೇಲ್‌ಗೆ ದಾರಿ ಮಾಡಿಕೊಡುತ್ತದೆ ಎಂಬ ನೆಲೆಯಲ್ಲಿ ತಪ್ಪೊಪ್ಪಿಗೆಯನ್ನು ನಿಷೇಧಿಸುವಂತೆ ರಾಷ್ಟ್ರೀಯ ಮಹಿಳಾ ಆಯೋಗ ಕಳೆದ ತಿಂಗಳು ಸಲಹೆ ನೀಡಿತ್ತು. ವಿವಾಹಿತ ಮಹಿಳೆಯ ತಪ್ಪೊಪ್ಪಿಗೆಯನ್ನೇ ದಾಳವಾಗಿ ಬಳಸಿ ಕೇರಳದ ಮಲಂಕರ ಓರ್ಥೊಡಾಕ್ಸ್ ಸಿರಿಯನ್ ಚರ್ಚ್‌ನ ನಾಲ್ವರು ಪಾದ್ರಿಗಳು ಆಕೆಯನ್ನು ಲೈಂಗಿಕ ಶೋಷಣೆಗೆ ಗುರಿಪಡಿಸಿದ ಪ್ರಕರಣ ಜೂನ್‌ನಲ್ಲಿ ಬೆಳಕಿಗೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಆಯೋಗದ ಮುಖ್ಯಸ್ಥೆ ರೇಖಾ ಶರ್ಮಾ ತಪ್ಪೊಪ್ಪಿಗೆಯನ್ನು ನಿಷೇಧಿಸುವಂತೆ ಸಲಹೆ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News