ಪರಮಾಣು ಒಪ್ಪಂದದ ಶರತ್ತುಗಳನ್ನು ಪಾಲಿಸುತ್ತಿರುವ ಇರಾನ್: ಐಎಇಎ ವರದಿ

Update: 2018-08-31 14:37 GMT

ವಿಯೆನ್ನಾ, ಆ. 31: ಮುಂದುವರಿದ ದೇಶಗಳೊಂದಿಗೆ ಇರಾನ್ ಮಾಡಿಕೊಂಡಿರುವ ಪರಮಾಣು ಒಪ್ಪಂದ ಕುರಿತ ಅನಿಶ್ಚಿತತೆಗಳ ಹೊರತಾಗಿಯೂ, ಒಪ್ಪಂದದ ಶರತ್ತುಗಳನ್ನು ಇರಾನ್ ಪಾಲಿಸಿಕೊಂಡು ಬರುತ್ತಿದೆ ಎಂದು ವಿಶ್ವಸಂಸ್ಥೆಯ ಪರಮಾಣು ನಿಗಾ ಘಟಕ ‘ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ’ (ಐಎಇಎ)ಯು ಗುರುವಾರ ಬಿಡುಗಡೆ ಮಾಡಿದ ವರದಿಯೊಂದು ತಿಳಿಸಿದೆ.

2015ರ ಜಂಟಿ ಸಮಗ್ರ ಕ್ರಿಯಾ ಯೋಜನೆ (ಪರಮಾಣು ಒಪ್ಪಂದದ ಅಧಿಕೃತ ಹೆಸರು)ಯ ಪ್ರಮುಖ ಮಾನದಂಡಗಳನ್ನು ಇರಾನ್ ಈಗಲೂ ಪಾಲಿಸುತ್ತಿದೆ ಎಂದು ವರದಿ ಹೇಳಿದೆ.

ಅಮೆರಿಕ ಮೇ ತಿಂಗಳಲ್ಲಿ ಈ ಒಪ್ಪಂದದಿಂದ ಹೊರಬಂದು ಇರಾನ್ ವಿರುದ್ಧ ಆರ್ಥಿಕ ದಿಗ್ಬಂಧನಗಳನ್ನು ಮರುಹೇರಿರುವುದನ್ನು ಸ್ಮರಿಸಬಹುದಾಗಿದೆ. ಅಂದಿನಿಂದ ಒಪ್ಪಂದದ ಭವಿಷ್ಯ ಅನಿಶ್ಚಿತವಾಗಿದೆ.

ಇರಾನ್ ಜೊತೆಗಿನ ಒಪ್ಪಂದದಲ್ಲಿ ರಶ್ಯ, ಫ್ರಾನ್ಸ್, ಜರ್ಮನಿ, ಬ್ರಿಟನ್ ಮತ್ತು ಚೀನಾ ಇತರ ಭಾಗೀದಾರ ದೇಶಗಳಾಗಿವೆ.

ಒಪ್ಪಂದದ ನಿಯಮಗಳಂತೆ, ಇರಾನ್‌ನಲ್ಲಿ ಯಾವುದೆಲ್ಲ ಸ್ಥಳಗಳು ಮತ್ತು ಸ್ಥಾವರಗಳಿಗೆ ಐಎಇಎ ಭೇಟಿ ನೀಡಬೇಕಾಗಿದೆಯೋ, ಆ ಎಲ್ಲ ಸ್ಥಳಗಳಿಗೆ ಅದು ಭೇಟಿ ನೀಡಿರುವುದಾಗಿ ವರದಿ ತಿಳಿಸಿದೆ.

ಆದಾಗ್ಯೂ, ಭೇಟಿಗೆ ಅವಕಾಶಗಳನ್ನು ಕಲ್ಪಿಸುವಾಗ ಇರಾನ್ ಸ್ವಯಂಪ್ರೇರಿತ ಹಾಗೂ ಸಾಂದರ್ಭಿಕ ಸಹಕಾರ ನೀಡಬೇಕಾದುದು ಅಗತ್ಯವಾಗಿದೆ ಎಂಬುದಾಗಿಯೂ ವರದಿಯಲ್ಲಿ ಹೇಳಲಾಗಿದೆ.

ಇದೇ ಅಭಿಪ್ರಾಯವನ್ನು ಐಎಇಎ ತನ್ನ ಹಿಂದಿನ ವರದಿಯಲ್ಲೂ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News