ಇದ್ಲಿಬ್ ಸಂಘರ್ಷ ತಪ್ಪಿಸಲು ವಿಶ್ವಸಂಸ್ಥೆ ಕರೆ

Update: 2018-08-31 14:48 GMT

ಜಿದ್ದಾ, ಆ. 31: ಸಿರಿಯದ ಇದ್ಲಿಬ್ ಪ್ರಾಂತದಲ್ಲಿ ನಡೆಯಬಹುದಾದ ಯುದ್ಧವನ್ನು ಮುಂಚಿತವಾಗಿಯೇ ತಡೆಯಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ವಿಶ್ವಸಂಸ್ಥೆಯು ರಶ್ಯ, ಇರಾನ್ ಮತ್ತು ಟರ್ಕಿಗಳಿಗೆ ಕರೆ ನೀಡಿದೆ.

ಸಂಭಾವ್ಯ ಯುದ್ಧವು ಲಕ್ಷಾಂತರ ನಾಗರಿಕರ ಮೇಲೆ ವ್ಯತಿರಿಕ್ತ ಪರಿಣಾಮಗಳನ್ನು ಬೀರುತ್ತದೆ ಹಾಗೂ ಬಂಡುಕೋರರು ಮತ್ತು ಸರಕಾರ ಕ್ಲೋರಿನ್ ಅನಿಲವನ್ನು ರಾಸಾಯನಿಕ ಅಸ್ತ್ರವನ್ನಾಗಿ ಬಳಸಲು ಸಾಧ್ಯವಿದೆ ಎಂದು ಅದು ಅಭಿಪ್ರಾಯಪಟ್ಟಿದೆ.

ಇದ್ಲಿಬ್‌ನಲ್ಲಿ ಭಾರೀ ಸಂಖ್ಯೆಯಲ್ಲಿ ವಿದೇಶಿ ಹೋರಾಟಗಾರರಿದ್ದಾರೆ ಎಂದು ಹೇಳಿರುವ ಸಿರಿಯಕ್ಕೆ ವಿಶ್ವಸಂಸ್ಥೆಯ ರಾಯಭಾರಿ ಸ್ಟಾಫನ್ ಡಿ ಮಿಸ್ತುರ, ಆ ಪೈಕಿ 10,000 ಮಂದಿಯನ್ನು ಭಯೋತ್ಪಾದಕರು ಎಂಬುದಾಗಿ ವಿಶ್ವಸಂಸ್ಥೆ ಘೋಷಿಸಿದೆ ಎಂದಿದ್ದಾರೆ.

ಇದ್ಲಿಬ್‌ನಲ್ಲಿ ಪೂರ್ಣ ಪ್ರಮಾಣದ ಯುದ್ಧ ಆರಂಭಗೊಳ್ಳಬಹುದು ಎಂಬ ಭೀತಿಯ ಹಿನ್ನೆಲೆಯಲ್ಲಿ, ನಾಗರಿಕರು ಅಲ್ಲಿಂದ ಹೊರಹೋಗಲು ‘ಮಾನವ ಕಾರಿಡಾರ್ (ಮಾರ್ಗ)’ ನಿರ್ಮಿಸಬೇಕೆಂದು ಅವರು ಕರೆ ನೀಡಿದ್ದಾರೆ ಹಾಗೂ ಇದರ ಉಸ್ತುವಾರಿ ನೋಡಿಕೊಳ್ಳಲು ಅಲ್ಲಿಗೆ ತೆರಳಲು ತಾನು ಸಿದ್ಧ ಎಂದಿದ್ದಾರೆ.

ಪ್ರಸ್ತಾಪಕ್ಕೆ ಬಂಡುಕೋರರ ವಿರೋಧ

ಆದರೆ, ವಿಶ್ವಸಂಸ್ಥೆ ರಾಯಭಾರಿಯ ಪ್ರಸ್ತಾಪವನ್ನು ಸಿರಿಯ ಪ್ರತಿಪಕ್ಷಗಳು ತಿರಸ್ಕರಿಸಿವೆ.

‘‘ಕಾರಿಡಾರ್‌ಗಳ ಬಗ್ಗೆ ಡಿ ಮಿಸ್ತುರ ನೀಡಿರುವ ಸಲಹೆ ನನಗೆ ಅರ್ಥವಾಗುತ್ತಿಲ್ಲ. ಹಿಂದೆ ಯುದ್ಧಗಳಿಂದ ನಿರ್ವಸಿತರಾದವರಿಗೆ ಇದ್ಲಿಬ್‌ನಲ್ಲಿ ಮರುವಸತಿ ಕಲ್ಪಿಸಲಾಗಿತ್ತು. ಜನರನ್ನು ಬೇರೆ ಕಡೆ ಕಳುಹಿಸಲಾಗುವುದಿಲ್ಲ ಎಂಬುದಾಗಿ ಸ್ವತಃ ಮಿಸ್ತುರ ಹೇಳಿದ್ದರು. ಈಗ ಅವರು ಕಾರಿಡಾರ್ ಬಗ್ಗೆ ಹೇಗೆ ಮಾತನಾಡಲು ಸಾಧ್ಯ? 30 ಲಕ್ಷಕ್ಕೂ ಅಧಿಕ ಜನರು ಎಲ್ಲಿಗೆ ಹೋಗುವುದು? ಟರ್ಕಿ ತನ್ನ ಬಾಗಿಲುಗಳನ್ನು ಮುಚ್ಚುತ್ತದೆ. ಅವರು ಇನ್ನೊಂದು ಗ್ರಹಕ್ಕೆ ಹೋಗಲು ಸಾಧ್ಯವೇ?’’ ಎಂದು ಪ್ರತಿಪಕ್ಷಗಳ ವಕ್ತಾರ ಯಾಹ್ಯಾ ಅಲ್-ಅರೀದಿ ‘ಅರಬ್ ನ್ಯೂಸ್’ನೊಂದಿಗೆ ಮಾತನಾಡುತ್ತಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News