ನೋಟು ಆಮಾನ್ಯದಿಂದ ಭಾರತದ ಆರ್ಥಿಕತೆಯ ಕಗ್ಗೊಲೆ: ಶಿವಸೇನೆ

Update: 2018-08-31 15:25 GMT

ಮುಂಬೈ, ಆ. 31: 1,000 ಹಾಗೂ 500 ರೂ. ನೋಟುಗಳನ್ನು ಅಮಾನ್ಯೀಕರಣಗೊಳಿಸಿರುವುದರ ಬಗ್ಗೆ ಬಿಜೆಪಿಯನ್ನು ಶುಕ್ರವಾರ ತರಾಟೆಗೆ ತೆಗೆದುಕೊಂಡಿರುವ ಶಿವಸೇನೆ, ಈ ಕ್ರಮ ಭಾರತದ ಆರ್ಥಿಕತೆಯನ್ನು ಕಗ್ಗೊಲೆ ಮಾಡಿದೆ ಎಂದಿದೆ. ಈ ಆತುರದ ಹಾಗೂ ಅವಿವೇಕದ ನಡೆ ದೇಶಪ್ರೇಮವಲ್ಲ. ಬದಲಾಗಿ ಇದರಿಂದ ‘ಆರ್ಥಿಕ ಅರಾಜಕತೆ’ ಉಂಟಾಗಿದೆ ಎಂಬುದನ್ನು ಅನಂತರದ ಬೆಳವಣಿಗೆಗಳು ಸಾಬೀತುಪಡಿಸಿವೆ ಎಂದು ಶಿವಸೇನೆ ಪಕ್ಷದ ಮುಖವಾಣಿ ‘ಸಾಮ್ನಾ’ ಹಾಗೂ ‘ದೊಪಹಾರ್ ಕಾ ಸಾಮ್ನಾ’ದ ಸಂಪಾದಕೀಯದಲ್ಲಿ ಹೇಳಿದೆ.

ನೋಟು ಅಮಾನ್ಯೀಕರಣವನ್ನು ಘೋಷಿಸುವಾಗ ಪ್ರಧಾನಿ ನರೇಂದ್ರ ಮೋದಿ ಅವರು ಇದರಿಂದ ಭ್ರಷ್ಟಾಚಾರ, ಕಪ್ಪುಹಣ, ನಕಲಿ ನೋಟು, ಭಯೋತ್ಪಾದನೆ ನಿರ್ಮೂಲನೆಗೊಳ್ಳಲಿದೆ ಎಂದು ಭರವಸೆ ನೀಡಿದ್ದರು. ಆದರೆ, ಇದರಿಂದ ಕಳೆದ ಎರಡು ವರ್ಷಗಳಿಂದ ದುಷ್ಪರಿಣಾಮ ಉಂಟಾಗಿದೆ ಎಂದು ಶಿವಸೇನೆ ಹೇಳಿದೆ. ನಿಷೇಧಿತ ನೋಟುಗಳಲ್ಲಿ 1.47 ಲಕ್ಷ ಕೋಟಿ ಅಥವಾ ಶೇ. 99.30 ಬ್ಯಾಂಕ್‌ಗೆ ಹಿಂದೆ ಬಂದಿವೆ ಎಂದು ಆರ್‌ಬಿಐಯ ಇತ್ತೀಚೆಗಿನ ವಾರ್ಷಿಕ ವರದಿ ಹೇಳಿದೆ. ಚಲಾವಣೆಯಲ್ಲಿ ಇದ್ದ ಸುಮಾರು 10,000 ಕೋಟಿ ರೂ. ಹಿಂದೆ ಬಂದಿಲ್ಲ. ಇದರ ಅರ್ಥ ಬೆಟ್ಟ ಅಗೆದರೂ ಇಲಿಯನ್ನೂ ಹಿಡಿಯಲಾಗದಂತಾಗಿದೆ. ಭ್ರಮಾತ್ಮಕ ಇಲಿಯನ್ನು ಹಿಡಿಯಲು ಹೋದ ಪರಿಣಾಮ ದೇಶದ ಆರ್ಥಿಕತೆ ಛಿದ್ರವಾಗಿದೆ ಎಂದು ಸೇನೆ ಹೇಳಿದೆ.

ನೋಟು ಅಮಾನ್ಯೀಕರಣದ ಪರಿಣಾಮ ಭಾರತದ ಆರ್ಥಿಕತೆ ಅವ್ಯವಸ್ಥೆ ಎದುರಿಸುತ್ತಿದೆ. ಸಣ್ಣ ಹಾಗೂ ಮಧ್ಯಮ ಉದ್ಯಮಗಳು ಧ್ವಂಸವಾಗಿವೆ. ಸೇವಾ ವಲಯ ಬಿಕ್ಕಟ್ಟಿನಲ್ಲಿದೆ. ಗೃಹ ನಿರ್ಮಾಣ ಉದ್ದಿಮೆಗಳು ದುರ್ಬಲಗೊಂಡಿವೆ. ಸಣ್ಣ ಹಾಗೂ ಮಧ್ಯಮ ರೈತರು ಸಂಕಷ್ಟಕ್ಕೀಡಾಗಿದ್ದಾರೆ. ನೋಟು ಅಮಾನ್ಯೀಕರಣದ ಬಳಿಕ ಎಟಿಎಂ ಹಾಗೂ ಬ್ಯಾಂಕ್‌ಗಳ ಮುಂದೆ ಸರದಿ ಸಾಲಲ್ಲಿ ನಿಂತು ಹಲವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಶಿವಸೇನೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News