ಎಚ್-1ಬಿ ವೀಸಾ ನೀತಿಯಲ್ಲಿ ಬದಲಾವಣೆಯಿಲ್ಲ: ಅಮೆರಿಕ

Update: 2018-08-31 15:29 GMT

ಶಿಂಗ್ಟನ್, ಆ. 31: ಅಮೆರಿಕದ ಎಚ್-1ಬಿ ವೀಸಾ ನೀತಿಯಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಡೊನಾಲ್ಡ್ ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಎಚ್-1ಬಿ ವೀಸಾವು ಅಮೆರಿಕದ ಉದ್ಯೋಗಿಗಳು ಅಥವಾ ಅವರ ವೇತನಗಳ ಮೇಲೆ ದುಷ್ಪರಿಣಾಮ ಬೀರದಂತೆ ಖಾತರಿಪಡಿಸಲು ಅದನ್ನು ಪ್ರಸಕ್ತ ಮರುಪರಿಶೀಲನೆಗೆ ಒಳಪಡಿಸಲಾಗುತ್ತಿದೆ.

ಮುಂದಿನ ವಾರ ಭಾರತದಲ್ಲಿ ಭಾರತ ಮತ್ತು ಅಮೆರಿಕದ ರಾಜತಾಂತ್ರಿಕರ ನಡುವೆ ನಡೆಯಲಿರುವ 2+2 ಮಾತುಕತೆಗೆ ಮುನ್ನ ಅಮೆರಿಕದ ಅಧಿಕಾರಿ ಈ ವಿಷಯವನ್ನು ಸ್ಪಷ್ಟಪಡಿಸಿದ್ದಾರೆ.

ಭಾರತೀಯ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳಲ್ಲಿ ಜನಪ್ರಿಯವಾಗಿರುವ ಈ ವೀಸಾದ ಮೇಲೆ ವಿಧಿಲಾಗಿರುವ ನಿರ್ಬಂಧಗಳ ಬಗ್ಗೆ ಈ ಮಾತುಕತೆಯ ವೇಳೆ ಭಾರತ ಪ್ರಸ್ತಾಪಿಸುವ ನಿರೀಕ್ಷೆಯಿದೆ.

ಅಮೆರಿಕದ ತಂತ್ರಜ್ಞಾನ ಕಂಪೆನಿಗಳು ಪ್ರತಿ ವರ್ಷ ಭಾರತ ಮತ್ತು ಚೀನಾಗಳಂಥ ದೇಶಗಳಿಂದ ಲಕ್ಷಾಂತರ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಈ ವೀಸಾಗಳನ್ನು ಬಳಸಿಕೊಳ್ಳುತ್ತಿವೆ.

ಕೆಲವು ಮಾಹಿತಿ ತಂತ್ರಜ್ಞಾನ ಕಂಪೆನಿಗಳು ಅಮೆರಿಕದ ಪ್ರಜೆಗಳಿಗೆ ಕೆಲಸ ನಿರಾಕರಿಸಲು ಎಚ್-1ಬಿ ವೀಸಾ ವ್ಯವಸ್ಥೆಯನ್ನು ದುರುಪಯೋಗಗೊಳಿಸುತ್ತಿವೆ ಎಂದು ಆರೋಪಿಸಿರುವ ಟ್ರಂಪ್ ಆಡಳಿತ ಅದರ ಮರುಪರಿಶೀಲನೆಗೆ ಮುಂದಾಗಿರುವುದನ್ನು ಸ್ಮರಿಸಬಹುದಾಗಿದೆ.

ನೂತನ ಎಚ್-1ಬಿ ವೀಸಾ ನೀತಿಯು ಭಾರತೀಯರ ಉದ್ಯೋಗಾವಕಾಶಗಳನ್ನು ಕಡಿತಗೊಳಿಸಲಿದೆ.

2+2 ಮಾತುಕತೆ

ಹೊಸದಿಲ್ಲಿಯಲ್ಲಿ ಸೆಪ್ಟಂಬರ್ 6ರಂದು ಅಮೆರಿಕ ಮತ್ತು ಭಾರತದ ರಾಜತಾಂತ್ರಿಕರ ನಡುವೆ 2+2 ಮಾತುಕತೆ ನಡೆಯಲಿದೆ.

ಭಾರತದ ವಿದೇಶ ಸಚಿವೆ ಸುಶ್ಮಾ ಸ್ವರಾಜ್ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅಮೆರಿಕದ ವಿದೇಶ ಕಾರ್ಯದರ್ಶಿ ಮೈಕ್ ಪಾಂಪಿಯೊ ಮತ್ತು ರಕ್ಷಣಾ ಕಾರ್ಯದರ್ಶಿ ಜೇಮ್ಸ್ ಮ್ಯಾಟಿಸ್ ಜೊತೆ ಮಾತುಕತೆ ನಡೆಸಲಿದ್ದಾರೆ.

ಉಭಯ ದೇಶಗಳಿಗೆ ಸಂಬಂಧಿಸಿದ ಹಲವಾರು ವಿಷಯಗಳ ಬಗ್ಗೆ ವ್ಯಾಪಕ ಮಾತುಕತೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News