ಸರಕಾರಿ ಜಾಹೀರಾತು ಪ್ರಕಟನೆಯಲ್ಲಿ ಮಾರ್ಗದರ್ಶನ ಉಲ್ಲಂಘನೆ: ಬಿಜೆಪಿ, ಕೇಂದ್ರ, 6 ರಾಜ್ಯ ಸರಕಾರಗಳಿಗೆ ಸುಪ್ರೀಂ ನೋಟಿಸ್

Update: 2018-08-31 15:30 GMT

ಹೊಸದಿಲ್ಲಿ, ಆ. 31: ಸರಕಾರಿ ಜಾಹೀರಾತು ಪ್ರಕಟಣೆ ಕುರಿತು ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನವನ್ನು ಕೇಂದ್ರ ಸರಕಾರ, ಬಿಜೆಪಿ ಹಾಗೂ 6 ರಾಜ್ಯಗಳು ಉಲ್ಲಂಘಿಸಿವೆ ಎಂದು ಆರೋಪಿಸಿ ಸಲ್ಲಿಸಲಾದ ಮನವಿ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರಕಾರ, ಆರು ರಾಜ್ಯ ಸರಕಾರಗಳು ಹಾಗೂ ಬಿಜೆಪಿಯಿಂದ ಪ್ರತಿಕ್ರಿಯೆ ಕೋರಿದೆ.

ದಿಲ್ಲಿಯ ಆಪ್ ಶಾಸಕ ಸಲ್ಲಿಸಿದ ಮನವಿ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಹಾಗೂ ಬಿಜೆಪಿ ಅಲ್ಲದೆ ಉತ್ತರಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ, ಜಾರ್ಖಂಡ್, ಚತ್ತೀಸ್‌ಗಢ ಹಾಗೂ ತೆಲಂಗಾಣ ರಾಜ್ಯಗಳಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ತೆಲಂಗಾಣ ಹೊರತುಪಡಿಸಿ ಉಳಿದ ಎಲ್ಲ ರಾಜ್ಯಗಳಲ್ಲಿ ಬಿಜೆಪಿ ಆಡಳಿತವಿದೆ. ಇಲ್ಲಿನ ಬುರಾರಿ ಶಾಸಕ ಸಂಜೀವ್ ಝಾ ಸಲ್ಲಿಸಿದ ಮನವಿಯ ಹಿನ್ನೆಲೆಯಲ್ಲಿ ಒಂದು ವಾರಗಳಲ್ಲಿ ಪ್ರತಿಕ್ರಿಯೆ ದಾಖಲಿಸುವಂತೆ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಪೀಠ ಸೂಚಿಸಿದೆ. ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ ನಿರ್ದೇಶನಗಳನ್ನು ಉಲ್ಲಂಘಿಸಿ ಕೇಂದ್ರ ಸರಕಾರ, ಬಿಜೆಪಿ ಹಾಗೂ ರಾಜ್ಯಗಳು ಜಾಹೀರಾತು ಪ್ರಕಟಸಿವೆ ಎಂದು ದೂರುದಾರರು ಆರೋಪಿಸಿದ್ದಾರೆ.

ಉಲ್ಲಂಘನೆಯನ್ನು ಪರಿಶೀಲಿಸುವಂತೆ ಹಾಗೂ ಅವರ ವಿರುದ್ಧ ಸೂಕ್ತ ಕಾನೂನು ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರ ಸರಕಾರ ರೂಪಿಸಿದ ಸಮಿತಿಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡುವಂತೆ ಅವರು ಕೋರಿದ್ದಾರೆ. ಸಾರ್ವಜನಿಕ ಜಾಹೀರಾತು ಪ್ರಕಟಿಸುವುದನ್ನು ನಿಯಂತ್ರಿಸಲು ಪ್ರಶ್ನಾತೀತ ತಟಸ್ಥ ಹಾಗೂ ಪಕ್ಷಾತೀತ ವ್ಯಕ್ತಿಗಳನ್ನು ಒಳಗೊಂಡ ಮೂವರು ಸದಸ್ಯರ ಸಮಿತಿ ರೂಪಿಸಲು ಕೇಂದ್ರ ಸರಕಾರಕ್ಕೆ ಆದೇಶ ಸೇರಿದಂತೆ ಹಲವು ನಿರ್ದೇಶನಗಳನ್ನು ಸುಪ್ರೀಂ ಕೋರ್ಟ್ 2015 ಮೇ 13ರಂದು ನೀಡಿತ್ತು. ಆದಾಗ್ಯೂ, 2016 ಮಾರ್ಚ್ 18ರಂದು ಸುಪ್ರೀಂ ಕೋರ್ಟ್ ತನ್ನ ಆದೇಶಕ್ಕೆ ತಿದ್ದುಪಡಿ ತಂದಿತ್ತು ಹಾಗೂ ಕೇಂದ್ರ ಸಚಿವರು, ಮುಖ್ಯಮಂತ್ರಿ, ರಾಜ್ಯಪಾಲರು ಹಾಗೂ ರಾಜ್ಯ ಸಚಿವರ ಚಿತ್ರಗಳು ಸರಕಾರದ ಜಾಹೀರಾತಿನಲ್ಲಿ ಕಾಣಿಸಿಕೊಳ್ಳಬಹುದು ಎಂದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News