ಸ್ಥಳೀಯಾಡಳಿತ ಸಂಸ್ಥೆಗಳಿಗೆ ಚುನಾವಣೆ: ದ.ಕ.ಜಿಲ್ಲೆ ಶೇ. 68.50, ಪುತ್ತೂರು 68.69, ಉಳ್ಳಾಲ 65.36 ಮತದಾನ

Update: 2018-08-31 18:52 GMT

ಮಂಗಳೂರು, ಆ.31: ದ.ಕ. ಜಿಲ್ಲೆಯ ಉಳ್ಳಾಲ ಮತ್ತು ಪುತ್ತೂರು ನಗರಸಭೆ ಹಾಗೂ ಬಂಟ್ವಾಳ ಪುರಸಭೆಗೆ ಶುಕ್ರವಾರ ಶಾಂತಿಯುತ ಮತದಾನ ನಡೆದಿದೆ. ಈ ಚುನಾವಣೆಯಲ್ಲಿ 1,17,979 ಮತದಾರರ ಪೈಕಿ ಒಟ್ಟು 80,820 ಮಂದಿ ಮತದಾನಗೈದಿದ್ದು, ಆ ಮೂಲಕ ಮೂರು ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಒಟ್ಟು ಶೇ.68.50 ಮತದಾನವಾಗಿದೆ. ಪುತ್ತೂರು ನಗರಸಭೆ ಶೇ.68.69, ಉಳ್ಳಾಲ ನಗರಸಭೆ ಶೇ.65.36, ಬಂಟ್ವಾಳ ಪುರಸಭೆ ಶೇ.72.36 ಮತದಾನ ನಡೆದಿದೆ.

ಬಂಟ್ವಾಳ ಪುರಸಭೆ ಚುನಾವಣೆಯಲ್ಲಿ ಶೇ.72.36 ಮತದಾನವಾಗಿದೆ. ಇಲ್ಲಿ ಒಟ್ಟು 34,102 ಮತದಾರರ ಪೈಕಿ 24,676 ಮಂದಿ ಹಕ್ಕು ಚಲಾಯಿಸಿದ್ದಾರೆ. ಪುತ್ತೂರು ನಗರಸಭೆಯಲ್ಲಿ ಶೇ.68.69 ಮತದಾನವಾಗಿದೆ. ಇಲ್ಲಿ ಒಟ್ಟು 39,745 ಮತದಾರರ ಪೈಕಿ 27,299 ಮಂದಿ ಮತ ಚಲಾಯಿಸಿದ್ದಾರೆ. ಇನ್ನೂ ಉಳ್ಳಾಲ ನಗರಸಭೆಯಲ್ಲಿ ಶೇ.65.36 ಹಕ್ಕು ಚಲಾವಣೆಯಾಗಿದೆ. ಒಟ್ಟು 44,132 ಮತದಾರರ ಪೈಕಿ 28,845 ಮಂದಿ ಮತ ಚಲಾಯಿಸಿದ್ದಾರೆ.

ಮೂರು ಕಡೆ ಮತ ಎಣಿಕೆ: ಉಳ್ಳಾಲದ 31 ವಾರ್ಡ್‌ಗಳಲ್ಲಿ 102, ಪುತ್ತೂರಿನ 31 ವಾರ್ಡ್‌ಗಳಲ್ಲಿ 77, ಬಂಟ್ವಾಳದ 27 ವಾರ್ಡ್‌ಗಳಲ್ಲಿ 71 ಮಂದಿ ಸ್ಪರ್ಧಿಸಿದ್ದರು. ಶುಕ್ರವಾರ ಬೆಳಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ನಡೆದ ಮತದಾನದ ಎಣಿಕೆ ಪ್ರಕ್ರಿಯೆಯು ಸೆ.3ರಂದು ಬೆಳಗ್ಗೆ 8ರಿಂದ ಆರಂಭಗೊಳ್ಳಲಿದೆ. ಅಂದರೆ ಉಳ್ಳಾಲ ನಗರಸಭೆಯ ಮತ ಎಣಿಕೆಯು ಭಾರತ್ ಹೈಸ್ಕೂಲ್ ಉಳ್ಳಾಲ, ಪುತ್ತೂರು ನಗರಸಭೆಯ ಮತ ಎಣಿಕೆಯು ಪುತ್ತೂರು ತಾಲೂಕು ಕಚೇರಿ, ಬಂಟ್ವಾಳ ಪುರಸಭೆಯ ಮತ ಎಣಿಕೆಯು ಬಂಟ್ವಾಳ ತಾಲೂಕು ಕಚೇರಿಯಲ್ಲಿ ನಡೆಯಲಿದ್ದು, ಅಂದು 89 ವಾರ್ಡ್‌ಗಳಲ್ಲಿ ಸ್ಪರ್ಧಿಸಿದ್ದ 250 ಅಭ್ಯರ್ಥಿಗಳ ಪೈಕಿ 89 ಜನಪ್ರತಿನಿಧಿಗಳು ಯಾರು ಎಂಬುದರ ಚಿತ್ರಣ ಲಭ್ಯವಾಗಲಿದೆ.

ಉಳ್ಳಾಲ ನಗರಸಭೆ ಮತ್ತು ಬಂಟ್ವಾಳ ಪುರಸಭೆ ಚುನಾವಣೆಗೆ ಶುಕ್ರವಾರ ಬೆಳಗ್ಗೆ 7ಗಂಟೆಯಿಂದಲೇ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸುತ್ತಿರುವುದು ಕಂಡು ಬಂತು. ಕೆಲವು ಮತಗಟ್ಟೆಗಳಲ್ಲಿ ಬೆಳಗ್ಗೆ ಮತದಾರರು ಹೆಚ್ಚಿದ್ದರೆ, ಹೊತ್ತು ಕರಗುತ್ತಿದ್ದಂತೆ ಸಂಖ್ಯೆ ಕಡಿಮೆಯಾಯಿತು.

ಮಧ್ಯಾಹ್ನದ ಬಳಿಕ ಮತ್ತೆ ಬಿರುಸು ಪಡೆಯಿತು. ಮುಸ್ಲಿಮರೇ ಅಧಿಕ ಸಂಖ್ಯೆಯಲ್ಲಿರುವ ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆಯೂ ಹೆಚ್ಚು ಕಂಡು ಬಂದಿತ್ತು. ಶುಕ್ರವಾರವಾದ ಕಾರಣ ಈ ಪರಿಸರದಲ್ಲಿ ಹಬ್ಬದ ವಾತಾವರಣವೇ ಕಂಡು ಬಂತು. ಉಳ್ಳಾಲದ ಭಾರತ್ ಪ್ರೌಢಶಾಲೆ, ಉಳ್ಳಾಲ ಮೇಲಂಗಡಿಯ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಒಂಭತ್ತುಕೆರೆ ಸರಕಾರಿ ಶಾಲೆ, ಪಾಣೆಮಂಗಳೂರು ಪೇಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸಹಿತ ವಿವಿಧ ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆ ಹೆಚ್ಚಿತ್ತು.

ಉಳ್ಳಾಲ 25ನೇ ವಾರ್ಡ್ ಸಂಖ್ಯೆ, ಮತದಾನ ಕೇಂದ್ರ 33-ಭಾರತ್ ಅನುದಾನಿತ ಪ್ರೌಢಶಾಲೆಯ ಮತಗಟ್ಟೆಯಲ್ಲಿ ಬೆಳಗ್ಗೆ 9.40ರ ವೇಳೆಗೆ ಮತದಾರರು ಸರತಿ ಸಾಲಿನಲ್ಲಿ ನಿಂತು ಮತ ಚಲಾಯಿಸಿರುವುದು ಕಂಡು ಬಂತು. ಬೆಳಗ್ಗೆ 10ರ ವೇಳೆಗೆ ಮೇಲಂಗಡಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಮತಕೇಂದ್ರದಲ್ಲಿ ಮತದಾರರ ಸಂಖ್ಯೆ ಕಡಿಮೆ ಇತ್ತು. ಹಾಗಾಗಿ ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪ್ರಮೇಯ ಬಾರಲಿಲ್ಲ. ಮತದಾನ ಕೇಂದ್ರ ಪ್ರವೇಶಿಸಿದವರು ತ್ವರಿತಗತಿಯಲ್ಲಿ ಮತದಾನಗೈಯ್ಯುತ್ತಿರುವುದು ಕಂಡು ಬಂತು.

ಉಳ್ಳಾಲದ ಮುಸ್ಲಿಮ್ ಬಾಹುಳ್ಯವಿರುವ ಪ್ರದೇಶದಲ್ಲಿ ಕಾಂಗ್ರೆಸ್, ಜೆಡಿಎಸ್,ಎಸ್‌ಡಿಪಿಐ ಪಕ್ಷಗಳ ಕಾರ್ಯಕರ್ತರು ಮತದಾರರನ್ನು ಓಲೈಸುವ ದೃಶ್ಯ ಸಾಮಾನ್ಯವಾಗಿತ್ತು. ಪೊಲೀಸ್ ಇಲಾಖೆಯೂ ಸೂಕ್ತ ಬಂದೋಬಸ್ತ್ ಏರ್ಪಡಿಸಿದೆ. ಮತದಾನವು ಶಾಂತಿಯುತವಾಗಿ ಮುಕ್ತಾಯ ಕಂಡಿದ್ದು, ಯಾವುದೇ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ.

‘ನಮಗೆ ಅಭಿವೃದ್ಧಿ ಮುಖ್ಯ. ಅದಕ್ಕಾಗಿ ನಾವು ಹಕ್ಕು ಚಲಾಯಿಸಲೇಬೇಕಿದೆ. ಈ ಚುನಾವಣೆಯನ್ನು ನಾವು ಲಘುವಾಗಿ ಪರಿಗಣಿಸಿದರೆ ಇದರ ಪರಿಣಾಮವನ್ನು ನಾವೇ ಎದುರಿಸಬೇಕಿದೆ. ಹಾಗಾಗಿ ನಾವು ತುಂಬಾ ಆಸಕ್ತಿಯಿಂದಲೇ ಮತದಾನದಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ಅದಕ್ಕಾಗಿ ಯುವ ಮತದಾರರಿಂದ ಹಿಡಿದು ಹಿರಿಯರನ್ನು ಕೂಡಾ ಮತದಾನ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಲು ಉತ್ತೇಜಿಸುತ್ತಿದ್ದೇವೆ’ ಎಂದು ಹೆಸರು ಹೇಳಲು ಇಚ್ಛಿಸದ ಉಳ್ಳಾಲ ಮೇಲಂಗಡಿಯ ಮತದಾರರೊಬ್ಬರು ಪತ್ರಿಕೆಯೊಂದಿಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಪಾಣೆಮಂಗಳೂರು ಪೇಟೆಯ ಸಹಿಪ್ರಾ ಶಾಲೆಯ ಮತಗಟ್ಟೆ ಸಂಖ್ಯೆ 27ರಲ್ಲಿ ಪೂರ್ವಾಹ್ನ 11:30ರ ವೇಳೆಗೆ ಸರತಿ ಸಾಲಿನಲ್ಲಿ ನಿಂತು ಮತದಾರರು ಮತ ಚಲಾಯಿಸುತ್ತಿರುವ ದೃಶ್ಯ ಕಂಡು ಬಂತು. ಈ ಮಧ್ಯೆ ವಯೋವೃದ್ಧರು, ಅನಾರೋಗ್ಯ ಪೀಡಿತರೂ ಕೂಡಾ ಆಸಕ್ತಿಯಿಂದ ಮತದಾನದಲ್ಲಿ ಪಾಲ್ಗೊಳ್ಳುತ್ತಿರುವುದು ಕಂಡು ಬಂತು.

ಬೆಳಗ್ಗೆ 9ರ ವೇಳೆಗೆ ಉಳ್ಳಾಲ ನಗರಸಭೆಯಲ್ಲಿ ಶೇ.13,ಪುತ್ತೂರು ನಗರಸಭೆಯಲ್ಲಿ ಶೇ.14 ಮತ್ತು ಬಂಟ್ವಾಳ ಪುರಸಭೆಯಲ್ಲಿ ಶೇ.15ರಷ್ಟು ಮತದಾನವಾಗಿತ್ತು. ಪೂರ್ವಾಹ್ನ 11ರ ವೇಳೆಗೆ ಉಳ್ಳಾಲದಲ್ಲಿ ಶೇ.28.70, ಪುತ್ತೂರಿನಲ್ಲಿ ಶೇ.30.89, ಬಂಟ್ವಾಳದಲ್ಲಿ ಶೇ.33.25 ಮತದಾನವಾಗಿತ್ತು. ಅಪರಾಹ್ನ 3ರ ವೇಳೆಗೆ ಉಳ್ಳಾಲದಲ್ಲಿ ಶೇ.50, ಪುತ್ತೂರಿನಲ್ಲಿ ಶೇ.56, ಬಂಟ್ವಾಳದಲ್ಲಿ ಶೇ.58 ಮತದಾನವಾಗಿತ್ತು.

ವೃದ್ಧ ತಂದೆಯನ್ನು ಎತ್ತಿಕೊಂಡರು...

ಒಂಭತ್ತ್ತುಕೆರೆ ಬೂತ್‌ನಲ್ಲಿ ವೃದ್ಧ ಮತ್ತು ಅನಾರೋಗ್ಯ ಪೀಡಿತ ತಂದೆಯನ್ನು ಪುತ್ರ ಎತ್ತಿಕೊಂಡು ಬಂದು ಹಕ್ಕು ಚಲಾವಣೆ ಮಾಡಿಸಿದ್ದು ವಿಶೇಷವಾಗಿತ್ತು. ಮುಕ್ಕಚ್ಚೇರಿ ನಿವಾಸಿ ಅಬ್ದುಲ್ ಖಾದರ್ ಅವರಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಇಲ್ಲಿಯವರೆಗೆ ಒಂದು ಬಾರಿಯೂ ಮತದಾನ ಮಾಡುವುದನ್ನು ತಪ್ಪಿಸದ ಅಬ್ದುಲ್ ಖಾದರ್, ಅನಾರೋಗ್ಯ ಮತ್ತು ವಯಸ್ಸಿನ ಕಾರಣ ಹೇಳಿ ಮತದಾನದಿಂದ ದೂರು ಉಳಿಯಲು ಇಷ್ಟಪಡಲಿಲ್ಲ. ಬದಲಾಗಿ ಪುತ್ರನ ಸಹಾಯದೊಂದಿಗೆ ಆಸಕ್ತಿಯಿಂದಲೇ ಮತದಾನ ಕೇಂದ್ರಕ್ಕೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿ ಗಮನ ಸೆಳೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News