ಎ.ಜೆ. ಆಸ್ಪತ್ರೆಯಲ್ಲಿ ಕ್ಯಾನ್ಸರ್‌ಗೆ ಹೈಪೆಕ್ ಶಸ್ತ್ರಚಿಕಿತ್ಸೆ

Update: 2018-09-01 05:24 GMT

ಮಂಗಳೂರು, ಸೆ.1: ಸಂಕೀರ್ಣ ಶಸ್ತ್ರಚಿಕಿತ್ಸೆಗಳ ಯಶಸ್ವಿ ನಿರ್ವಹಣೆಯ ಮೂಲಕ ಹೆಸರುವಾಸಿಯಾಗಿರುವ ಕುಂಟಿಕಾನದಲ್ಲಿರುವ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಇನ್ನೊಂದು ಸಾಧನೆಯ ಮೂಲಕ ಮತ್ತೆ ಅಗ್ರಣಿಯಾಗಿದೆ.

ತುಮಕೂರಿನ 59 ವರ್ಷದ ವ್ಯಕ್ತಿಯೋರ್ವರು 4 ವರ್ಷದ ಹಿಂದೆ ಸೂಡೋಮಿಸ್ಸೋಮ ಗೆಡ್ಡೆಗಾಗಿ ಬೆಂಗಳೂರಿನ ಹೆಸರಾಂತ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು, ಕಾಯಿಲೆ ಮರುಕಳಿಸಿ ನೋವಿನಿಂದ ಬಳಲುತ್ತಿದ್ದರು. ಅವರನ್ನು ಸಿ.ಟಿ. ಸ್ಕ್ಯಾನ್ ಮೂಲಕ ಶೋಧಿಸಿದಾಗ ಅವರಿಗೆ ಬಹು ಅಂಗಾಂಗಗಳ ಶಸ್ತ್ರಚಿಕಿತ್ಸೆಯ ಅಗತ್ಯ ಕಂಡುಬಂತು. ಶಸ್ತ್ರಚಿಕಿತ್ಸಾ ಪೂರ್ವ ತಪಾಸಣೆ ಮತ್ತು ಪೂರ್ವ ತಯಾರಿಯ ಬಳಿಕ ರೋಗಿಯನ್ನು ಆ.14ರಂದು ಎ.ಜೆ.ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು. ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಜ್ಞ ಡಾ.ವಿಶ್ವನಾಥರವರ ನೇತೃತ್ವದಲ್ಲಿ ವೈದ್ಯರ ತಂಡ 18 ಗಂಟೆಗಳ ಕಾಲ ನಡೆಸಿದ ಶಸ್ತ್ರಚಿಕಿತ್ಸೆ ಮೂಲಕ ಗೆಡ್ಡೆಯನ್ನು ತೆಗೆದು ಹಾಕಲಾಯಿತು.

ಶಸ್ತ್ರಚಿಕಿತ್ಸಕರ ತಂಡ ಕನ್ಸಲ್ಟೆಂಟ್ ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿಸ್ಟ್ ಡಾ.ರೋಹನ್ ಶೆಟ್ಟಿ, ಡಾ.ಅಶ್ವಿನ್ ಆಳ್ವಾ, ಮೆಡಿಕಲ್ ಒಂಕಾಲೊಜಿಸ್ಟ್ ಡಾ.ರಚನ್ ಶೆಟ್ಟಿ, , ಅರಿವಳಿಕೆ ತಜ್ಞ ಡಾ.ತ್ರಿವಿಕ್ರಮ್ ತಂತ್ರಿಯವರನ್ನು ಒಳಗೊಂಡಿತ್ತು.

ಈ ಶಸ್ತ್ರಚಿಕಿತ್ಸೆಯ ವಿಶೇಷತೆ:  

ದೇಹದ ಪ್ರಮುಖ ಅಂಗಾಂಗಗಳಿಗೆ ರೋಗ ವ್ಯಾಪಿಸಿದ್ದರಿಂದ ಬಹು ಅಂಗಾಂಗಗಳ ಶಸ್ತ್ರಚಿಕಿತ್ಸೆಯನ್ನು ಅಳವಡಿಸಲಾಯಿತು. ಈ ಮೂಲಕ ಜಠರದ ಒಂದು ಅಂಶ, ಸಣ್ಣ ಕರುಳು, ದೊಡ್ಡ ಕರುಳು ಹಾಗೂ ಸ್ಪ್ಲೀನ್ ಅನ್ನು ತೆಗೆಯೋದಲ್ಲದೆ ಯಕೃತ್ತು ಮತ್ತು ಮೇದೋಜೀರಕ ಗ್ರಂಥಿಯ ಹೊರಗಿನ ಭಾಗವನ್ನು ಪರಿಪೂರ್ಣವಾಗಿ ತೆಗೆಯಬೇಕಾಗಿ ಬಂತು. ಅಲ್ಲದೆ, ಪೆರಿಟೋನಿಯಂ ಅನ್ನು ಕೂಡ ಸಂಪೂರ್ಣವಾಗಿ ತೆಗೆಯಲಾಯಿತು. ಇದೊಂದು ಸಂಕೀರ್ಣ ಶಸ್ತ್ರಚಿಕಿತ್ಸೆ ಆಗಿರೋದರಿಂದ 18 ಗಂಟೆಗಳ ಕಾಲ ನಿಖರ ಶಸ್ತ್ರಚಿಕಿತ್ಸೆ ಮಾಡಬೇಕಾಗಿ ಬಂತು ಎನ್ನುತ್ತಾರೆ ಡಾ.ವಿಶ್ವನಾಥ್.

ತದನಂತರ ಹೈಪರ್ ತರ್ಮಿಕ್ ಇಂಟ್ರಾಪೆರಿಟೋನಿಯಾಲ್ ಕಿಮೊಥೆರಪಿ(ಹೈಪೆಕ್) ಯಂತ್ರದ ಮೂಲಕ ಕಿಮೊಥೆರಪಿಯನ್ನು 90 ನಿಮಿಷಗಳ ಕಾಲ 42ಡಿಗ್ರಿ ತಾಪಮಾನದಲ್ಲಿ ಹೊಟ್ಟೆಯೊಳಗೆ ನಿರ್ವಹಿಸಲಾಯಿತು. ಬಿಸಿಯಾದ ಕಿಮೊಥೆರಪಿಯನ್ನು ನೇರವಾಗಿ ಪೆರಿಟೊನಿಯಲ್ ಕುಳಿಯಲ್ಲಿ ನಿಯಂತ್ರಿಸುವುದರಿಂದ ಮಾನವ ಕಣ್ಣಿಗೆ ಗೋಚರಿಸದ ಕ್ಯಾನ್ಸರ್ ಕೋಶಗಳನ್ನು ನಾಶಪಡಿಸುವಲ್ಲಿ ನೆರವಾಗುತ್ತದೆ. ಹೈಪೆಕ್ ಮೂಲಕ ಕಿಮೊಥೆರಪಿ ಕೊಡುವುದರಿಂದ ಔಷಧವು ಕ್ಯಾನ್ಸರ್ ಜೀವಕೋಶಗಳೊಂದಿಗೆ ನೇರ ಸಂಪರ್ಕದಲ್ಲಿ ಇರುತ್ತದೆ ಹಾಗೂ ಕಿಮೊಥೆರಪಿಯಿಂದಾಗುವ ಅಡ್ಡಪರಿಣಾಮಗಳನ್ನು ಕಡಿಮೆಮಾಡಬಹುದಾಗಿದೆ.

ಹೈಪೆಕ್ ಕಿಮೊಥೆರಪಿ ಮಂಗಳೂರಿನಲ್ಲಿ ಮೊತ್ತಮೊದಲ ಬಾರಿಗೆ ನೀಡಲಾಗಿದ್ದು, ಅನಸ್ತೇಸಿಯಾ ವಿಭಾಗದ ಮುಖ್ಯಸ್ಥ ಡಾ.ತ್ರಿವಿಕ್ರಮ ತಂತ್ರಿ ಅವರ ನೇತೃತ್ವದ ವೈದ್ಯರ ತಂಡ ರೋಗಿಯ ದೇಹ ಸ್ಥಿತಿಯ ಮೇಲೆ ನಿರಂತರ ನಿಗಾ ಇರಿಸಿತ್ತು. ರೋಗಿಯನ್ನು ಸ್ಥಿರ ಸ್ಥಿತಿಯಲ್ಲಿ 12ನೇ ದಿನದಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.

ಕರಾವಳಿ ಭಾಗದಲ್ಲಿ ಹೈಪೆಕ್ ಸಲಕರಣೆಯ ಮೂಲಕ ಶಸ್ತ್ರಚಿಕಿತ್ಸಾ ಪ್ರಕ್ರಿಯೆಯನ್ನು ಮೊತ್ತಮೊದಲ ಬಾರಿಗೆ ನೀಡಲಾಗಿದ್ದು, ಇನ್ನು ಮುಂದೆ ಇಂತಹ ತಂತ್ರಜ್ಞ್ಞಾನವನ್ನು ಬಳಸಿ ರೋಗಿಗಳಿಗೆ ಅನುಕೂಲವಾಗುವಂತೆ ಚಿಕಿತ್ಸೆ ನೀಡುವ ಉದ್ದೇಶವಿದೆ. ಎ.ಜೆ.ಆಸ್ಪತ್ರೆಯು ಇಂತಹ ದೇಹಾರೋಗ್ಯ ಸಂಬಂಧಿ ತೊಂದರೆಗಳಿಗೆ ಚಿಕಿತ್ಸೆ ಒದಗಿಸಲು ಸೂಕ್ತವಾದ ಎಲ್ಲ ತಂತ್ರಜ್ಞಾನ ಮತ್ತು ಪರಿಣಿತ ತಜ್ಞ ವೈದ್ಯರನ್ನು ಹೊಂದಿದೆ.

ಇಂತಹ ತೊಂದರೆಗಳಿಗೆ ಇನ್ನು ಮುಂದೆ ದೂರದ ಊರುಗಳಿಗೆ ಹೋಗಬೇಕಾದ ಆವಶ್ಯಕತೆ ಇರುವುದಿಲ್ಲ. ಕೇರಳ ಮತ್ತು ಕರಾವಳಿ ಭಾಗದ ರೋಗಿಗಳಿಗೆ ಮಂಗಳೂರಿನಲ್ಲಿಯೇ ಚಿಕಿತ್ಸೆ ಲಭ್ಯವಾಗಲಿದೆ.

ಈ ಶಸ್ತ್ರ ಚಿಕಿತ್ಸೆ ಕುರಿತ ಹೆಚ್ಚಿನ ವಿವರಗಳಿಗೆ ಆಸ್ಪತ್ರೆಯ ಕ್ಯಾನ್ಸರ್ ಶಸ್ತ್ರಚಿಕಿತ್ಸಾ ತಜ್ಞ ಡಾ.ವಿಶ್ವನಾಥ್ ದೂರವಾಣಿ ಸಂಖ್ಯೆ: 8123567396 ಅನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News