ಪಡುಬಿದ್ರೆ: ಹೆಜಮಾಡಿ ಒಳರಸ್ತೆಗೂ ಟೋಲ್ ಆರಂಭ

Update: 2018-09-01 14:32 GMT

ಪಡುಬಿದ್ರೆ, ಸೆ. 1: ಟೋಲ್ ಸೋರಿಕೆಯಾಗುತ್ತಿದೆ ಎಂದು ಹೆಜಮಾಡಿಯ ಒಳರಸ್ತೆಯಲ್ಲಿ ಸಂಚರಿಸುವ ವಾಹನಗಳಿಗೆ ಶನಿವಾರದಿಂದ ಟೋಲ್‍ ಸಂಗ್ರಹ ಆರಂಭವಾಗಿದೆ.

ನವಯುಗ ಕಂಪೆನಿ ಅವೈಜ್ಞಾನಿಕವಾಗಿ ಹೆಜಮಾಡಿ ಬಸ್ತಿಪಡ್ಪು ಕ್ರೀಡಾಂಗಣದ ಬಳಿ ಟೋಲ್ ಸಂಗ್ರಹ ಕೇಂದ್ರ ಆರಂಭಿಸಿದೆ ದೂರಲಾಗುತ್ತಿತ್ತು. ಹೆಚ್ಚಿನ ವಾಹನಗಳು ಹೆಜಮಾಡಿ ಒಳ ರಸ್ತೆಯಲ್ಲಿ ಸಾಗುವ ಮೂಲಕ ಟೋಲ್ ಸೋರಿಕೆಯಾಗುತ್ತಿದೆ ಎಂದು ಗುತ್ತಿಗೆದಾರ ನವಯುಗ ಕಂಪೆನಿ, ಹೆಜಮಾಡಿ ಗುಡ್ಡೆಯಂಗಡಿ ಬಳಿ ಒಳರಸ್ತೆಗೂ ಟೋಲ್ ಸಂಗ್ರಹಕ್ಕೆ ಮುಂದಾಗಿತ್ತು. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿ ಹೆಜಮಾಡಿ ಗ್ರಾಮಸ್ಥರು ಹಲವಾರು ಬಾರಿ ಕಾಮಗಾರಿಗೆ ತಡೆಯೊಡ್ಡಿದ್ದರು.

ಲೋಕೋಪಯೋಗಿ ರಸ್ತೆಗೆ ಟೋಲ್ ಆರಂಭಿಸಿರುವುದರ ಬಗ್ಗೆ ಇತ್ತೀಚೆಗೆ ನಡೆದ ಹೆಜಮಾಡಿ ಗ್ರಾಮಸಭೆಯಲ್ಲಿ ಇಲಾಖೆ ಅಧಿಕಾರಿಯನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡಿದ್ದರು. ಅಂತಿಮವಾಗಿ ಇದೀಗ ಅಪೂರ್ಣ ಕಾಮಗಾರಿಯಲ್ಲಿಯೇ ಪೊಲೀಸ್ ಬಲದೊಂದಿಗೆ ಟೋಲ್ ಸಂಗ್ರಹ ಆರಂಭಿಸಲಾಗಿದೆ. ಒಳ ರಸ್ತೆಯಲ್ಲಿ ಟೋಲ್ ಅರಂಭವಾಗಿದ್ದರಿಂದ ಕೆಲ ವಾಹನ ಚಾಲಕರು ಟೋಲ್ ಸಿಬ್ಬಂದಿಯೊಂದಿಗೆ ಮಾತಿನ ಚಕಮಕಿಯೂ ನಡೆಸಿದರು.  

ಸ್ಥಳೀಯ ಬೇಡಿಕೆಗಳನ್ನು ಈಡೇರಿಸುವ ತನಕ ಟೋಲ್ ಸಂಗ್ರಹ ಮಾಡಕೂಡದು. ತಕ್ಷಣ ಒಳ ರಸ್ತೆಯ ಟೋಲ್ ಸಂಗ್ರಹ ಸ್ಥಗಿತಗೊಳಿಸಬೇಕು. ಜಿಲ್ಲಾಡಳಿತದ ಆದೇಶದಂತೆ ಪೊಲೀಸರ ಸಹಕಾರದೊಂದಿಗೆ ಟೋಲ್ ಸಂಗ್ರಹ ಮಾಡಲಾಗುತ್ತಿದೆ. ಹೆಜಮಾಡಿಯ ಒಳ ರಸ್ತೆ ಲೋಕೋಪಯೋಗಿ ಇಲಾಖೆ ಅಧೀನದಲ್ಲಿದ್ದು, ನವಯುಗ್ ಕಂಪನಿಯು ಟೋಲ್ ಸಂಗ್ರಹಿಸುವಂತಿಲ್ಲ ಈ ಬಗ್ಗೆ ಹೋರಾಟ ಸಮಿತಿಯ ಪದಾಧಿಕಾರಿಗಳೊಂದಿಗೆ ಸಮಾಲೋಚಿಸಲಾಗಿದ್ದು, ಎಲ್ಲರ ಅಭಿಪ್ರಾಯದಂತೆ ರವಿವಾರ ಬೆಳಗ್ಗೆ ಟೋಲ್ ಸ್ಥಗಿತಗೊಳಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಲಾಗುವುದು.

- ಶೇಖರ ಹೆಜ್ಮಾಡಿ, ರಾ.ಹೆ. ಹೋರಾಟ ಸಮಿತಿ ಸಂಚಾಲಕ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News