1,300 ಮಂದಿಗೆ ವಂಚಿಸಿದ ಗಡ್ಕರಿ ಕಂಪೆನಿ: ದೂರು

Update: 2018-09-01 15:56 GMT

ಪಾಲಿಸ್ಯಾಕ್ ಕೈಗಾರಿಕಾ ಸಹಕಾರ ಸಂಘದ ಇಬ್ಬರು ಮಾಜಿ ಷೇರುದಾರರಾದ ಭಗವಾನ್‍ ದಾಸ್ ರಾಠಿ ಮತ್ತು ಅಜಯ್ ಎಂಬವರು ನಾಗ್ಪುರ ನ್ಯಾಯಾಲಯದಲ್ಲಿ ದಾವೆ ಹೂಡಿ, ಕೇಂದ್ರ ಸಚಿವ ನಿತಿನ್ ಗಡ್ಕರಿಯವರು 1300ಕ್ಕೂ ಅಧಿಕ ಷೇರುದಾರರಿಗೆ ವಂಚಿಸಿದ್ದಾರೆ ಎಂದು ಆಪಾದಿಸಿದ್ದಾರೆ. ವಂಚಿತರಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹಾಗೂ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೂ ಸೇರಿದ್ದಾರೆ ಎಂದು ಆಪಾದಿಸಲಾಗಿದೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ ಸಹಕಾರ ಸಂಸ್ಥೆಯೊಂದರ ನಿವೇಶನವನ್ನು ಮೋಸದಿಂದ ವರ್ಗಾಯಿಸಿಕೊಂಡು 42 ಕೋಟಿ ರೂಪಾಯಿ ಸಾಲ ಪಡೆಯಲು ಅದನ್ನು ಒತ್ತೆ ಇಟ್ಟಿದ್ದಾರೆ ಎಂದು ದೂರಿ ನಾಗ್ಪುರ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಸಹಕಾರ ಸಂಘಕ್ಕೆ ಸೇರಿದ ನಿವೇಶನವನ್ನು ಗಡ್ಕರಿಯವರು 2012ರಲ್ಲಿ ನಾಗ್ಪುರ ಮೂಲದ ಸಾರಸ್ವತ್ ಕೋ ಅಪರೇಟವ್ ಬ್ಯಾಂಕಿನಿಂದ 42 ಕೋಟಿ ರೂಪಾಯಿ ಸಾಲ ಪಡೆಯಲು ಒತ್ತೆ ಇಟ್ಟಿದ್ದಾರೆ ಎಂದು ಅರ್ಜಿಯಲ್ಲಿ ಆಪಾದಿಸಲಾಗಿದೆ.

ಈ ನಿವೇಶನವನ್ನು ಮೋಸದಿಂದ ಗಡ್ಕರಿ ಮಾಲಕತ್ವದ ಕಂಪನಿಗೆ ವರ್ಗಾಯಿಸಿದ್ದಾರೆ. ಬಳಿಕ ಷೇರುದಾರರ ಒಪ್ಪಿಗೆ ಪಡೆಯದೇ ಸಹಕಾರ ಸಂಘವನ್ನು ಮುಚ್ಚಿಲಾಗಿದ್ದು, ನಂತರ ಗಡ್ಕರಿ ಮಾಲೀಕತ್ವದ ಕಂಪನಿಗೆ ಸಾಲ ಪಡೆಯಲು ಅದನ್ನು ಒತ್ತೆ ಇಡಲಾಗಿದೆ ಎಂದು ಅರ್ಜಿದಾರರು ದೂರಿದ್ದಾರೆ. ಯಾವ ಷೇರುದಾರರ ಗಮನಕ್ಕೂ ತಾರದೇ ಸಹಕಾರ ಸಂಘದ ನಿವೇಶನವನ್ನು ಮೊದಲು ಪೂರ್ತಿ ಸೋಲಾರ್ ಸಿಸ್ಟಮ್ಸ್‍ಗೆ ವರ್ಗಾಯಿಸಲಾಗಿದೆ. ಇದಾದ ಬಳಿಕ ಕಂಪನಿಯ ಸಹ ಸಂಸ್ಥೆಯಾದ ಜಿಎಂಟಿ ಮೈನಿಂಗ್‍ಗೆ ಸಾಲ ಪಡೆಯಲು ಭದ್ರತಾ ಆಸ್ತಿಯಾಗಿ ಇಡಲಾಗಿದೆ. ಗಡ್ಕರಿಯವರ ಪುತ್ರರಾದ ನಿಖಿಲ್ ಮತ್ತು ಸಾರಂಗ್ ಜಿಎಂಟಿ ಮೈನಿಂಗ್ ಕಂಪನಿಯ ನಿರ್ದೇಶಕರು.

ಅರ್ಜಿದಾರರಲ್ಲೊಬ್ಬರಾದ ಭಗವಾನ್‍ದಾಸ್ ರಾಠಿಯವರು ಮಾಡೆಲ್ಸ್ ಮಿಲ್ಸ್‍ನ ಎಂಜಿನಿಯರಿಂಗ್ ಇಲಾಖೆಯಲ್ಲಿ ಇಲಾಖಾ ಸಹಾಯಕರಾಗಿ ಕಾರ್ಯನಿರ್ವಹಿಸಿದ್ದಾರೆ. ಮತ್ತೊಬ್ಬ ಅರ್ಜಿದಾರ ಅಜಯ್ ಸಾಮಾಜಿಕ ಕಾರ್ಯಕರ್ತ ಎನ್ನಲಾಗಿದೆ. ಸರ್ಕಾರಿ ಅಧಿಕಾರಿಗಳ ಜತೆ ಷಾಮೀಲಾಗಿ ನಕಲಿ ದಾಖಲೆಯನ್ನು ಬಳಸಲಾಗಿದೆ. ನಂತರ ಪುರಾವೆಯಾಗಿ ಸಲ್ಲಿಸಬಹುದಾಗಿದ್ದ ಅಡವಿಟ್ಟ ಎಲ್ಲ ಭದ್ರತಾ ಆಸ್ತಿ ದಾಖಲೆಗಳನ್ನು ನಾಶಪಡಿಸಲಾಗಿದೆ ಎಂದು ಅರ್ಜಿದಾರರು ದೂರಿದ್ದಾರೆ.

ಪಾಲಿಸ್ಯಾಕ್ ಕೈಗಾರಿಕಾ ಸೊಸೈಟಿ 1989ರ ಏಪ್ರಿಲ್‍ನಲ್ಲಿ ಅಸ್ತಿತ್ವಕ್ಕೆ ಬಂದಿದೆ. ಆದರೆ ಕುತೂಹಲದ ಅಂಶವೆಂದರೆ, ಈ ಸೊಸೈಟಿ ನೋಂದಣಿಯಾಗಿ ಕಾರ್ಯಾರಂಭ ಮಾಡುವ ಎರಡು ವರ್ಷ ಮೊದಲೇ ಅಂದರೆ 1987ರಲ್ಲೇ ಮಹಾರಾಷ್ಟ್ರ ಸರ್ಕಾರ 4950 ಚದರ ಮೀಟರ್‍ನ ಜಮೀನು ಹಾಗೂ 25 ಲಕ್ಷ ರೂಪಾಯಿಯನ್ನು ಈ ಸೊಸೈಟಿಗೆ ನೀಡಿದೆ. nationalheraldindia.comಗೆ ಲಭ್ಯವಾಗಿರುವ ದಾಖಲೆಗಳ ಪ್ರಕಾರ, ಪಾಲಿಸ್ಯಾಕ್ ಇಂಡಸ್ಟ್ರಿಯಲ್ ಸೊಸೈಟಿ ನೋಂದಣಿಯಾಗಿರುವುದು 1989ರ ಏಪ್ರಿಲ್ 4ರಂದು. ಆದರೆ ಈ ಸೊಸೈಟಿಗೆ 99 ವರ್ಷಕ್ಕೆ ಲೀಸ್ ಆಧಾರದಲ್ಲಿ 99 ಸಾವಿರ ರೂಪಾಯಿ ಪಾವತಿಸಿಕೊಂಡು 1987ರ ಜನವರಿ 14ರಂದು ನಿವೇಶನ ಹಂಚಿಕೆ ಮಾಡಲಾಗಿದೆ.

ನೋಂದಣಿ ಸಂಖ್ಯೆ ಎನ್‍ಜಿಪಿ/ಸಿಟಿವೈ/ಪಿಆರ್‍ಡಿ/1/518/88-99 ಇರುವ ಪಾಲಿಸ್ಯಾಕ್ ಕೈಗಾರಿಕಾ ಸಹಕಾರ ಸಂಘದ ಕಚೇರಿ ವಾಸ್ತವವಾಗಿ 2003ರವರೆಗೆ ಗಡ್ಕರಿಯವರ ಮನೆಯಿಂದ ಕಾರ್ಯ ನಿರ್ವಹಿಸುತ್ತಿತ್ತು. 2003ರಲ್ಲಿ ಸೊಸೈಟಿಯನ್ನು ಸಚಿವರು ಏಕಪಕ್ಷೀಯವಾಗಿ ಮುಚ್ಚಿದರು ಹಾಗೂ ಕಚೇರಿ ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸಿತು.

ಈ ಪ್ರಕರಣ ದಾಖಲಿಸಲು ವಿಳಂಬವಾಗಿರುವ ಬಗ್ಗೆ ರಾಠಿಯವರನ್ನು ಸಂಪರ್ಕಿಸಿ ಸ್ಪಷ್ಟನೆ ಕೇಳಿದಾಗ, "ಎಲ್ಲ ದಾಖಲೆಗಳನ್ನು ನಾಶಪಡಿಸಲಾಗಿದೆ. ಈ ಮೊದಲು ಪ್ರಕರಣ ದಾಖಲಿಸಲು ಯಾವುದೇ ಆಧಾರ ಇರಲಿಲ್ಲ. ಆದಾಗ್ಯೂ, ಕಳೆದ ಕೆಲ ವರ್ಷಗಳಲ್ಲಿ, ಹಲವು ಆರ್‍ಟಿಐ ಅರ್ಜಿಗಳ ಮೂಲಕ ಮಾಹಿತಿಗಳನ್ನು ಸಂಗ್ರಹಿಸಿದೆ" ಎಂದು ಉತ್ತರಿಸಿದರು.

"ಇದು ನಿಯಮಾವಳಿಗಳ ಸ್ಪಷ್ಟ ಉಲ್ಲಂಘನೆ. ಆದರೆ ಈ ಸೊಸೈಟಿಯ ಷೇರುದಾರರಾಗಿರುವ (ಸದಸ್ಯ ಸಂಖ್ಯೆ 923) ಮೋಹನ್ ಭಾಗವತ್, ದೇವೇಂದ್ರ ಫಡ್ನವೀಸ್ (ಸದಸ್ಯ ಸಂಖ್ಯೆ 741) ಸೇರಿದಂತೆ ಯಾರೂ ಅವರನ್ನು ಪ್ರಶ್ನಿಸಲಿಲ್ಲ. ದೇವೇಂದ್ರ ಫಡ್ನವೀಸ್ ಅವರ ಸಹೋದರ, ಆಶೀಶ್ ಫಡ್ನವೀಸ್ ಕೂಡಾ ಕೈಗಾರಿಕಾ ಸೊಸೈಟಿಯ ಷೇರುದಾರರಾಗಿದ್ದು, ಅವರು ಕೂಡಾ ಮೌನವಾಗಿದ್ದಾರೆ" ಎಂದು ರಾಠಿ ಹೇಳುತ್ತಾರೆ.

ಸಹಕಾರ ಸಂಸ್ಥೆಗಳ ಕಾಯ್ದೆ- 1960ರಲ್ಲಿ ಸ್ಪಷ್ಟವಾಗಿ ಹೇಳಿರುವಂತೆ, ಸಹಕಾರ ಸಂಘಗಳ ಆಸ್ತಿಗಳನ್ನು ಯಾವುದೇ ವ್ಯಕ್ತಿಗಳಿಗೆ ಅಥವಾ ಕಂಪನಿಗಳಿಗೆ ವರ್ಗಾಯಿಸುವಂತಿಲ್ಲ ಎಂದು ಉಲ್ಲೇಖಿಸುತ್ತಾರೆ.

"ಆದ್ದರಿಂದ ಅವರು ಭಾರತೀಯ ದಂಡಸಂಹಿತೆಯ ಸೆಕ್ಷನ್ 420 (ವಂಚನೆ) 467 (ನಕಲಿ ದಾಖಲೆ), 468 (ಮೋಸದ ಉದ್ದೇಶಕ್ಕಾಗಿ ನಕಲಿ ದಾಖಲೆ ಸೃಷ್ಟಿ), 471 (ನಕಲಿ ದಾಖಲೆಯನ್ನು ನೈಜ ದಾಖಲೆಯಾಗಿ ಬಳಸುವುದು) ಮತ್ತು 472 (ನಕಲಿ ಮುದ್ರೆಯನ್ನು ಸೃಷ್ಟಿಸುವುದು ಅಥವಾ ಹೊಂದುವುದು) ಅನ್ವಯ ಅವರು ಅಪರಾಧ ಎಸಗಿದ್ದಾರೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.

ನಿತಿನ್ ಗಡ್ಕರಿಯವರ ನಿಕಟ ಸಂಬಂಧಿ ಕಮಲಾಕರ ತೋಟದ್ ಅವರನ್ನೂ ಪ್ರತಿವಾದಿಯಾಗಿ ಮಾಡಲಾಗಿದೆ.

ಭಗವಾನ್‍ದಾಸ್ ರಾಠಿಯವರು ಆರ್ಥಿಕ ಅಪರಾಧಗಳ ವಿಭಾಗ ಸೇರಿದಂತೆ ಹಲವು ಸರ್ಕಾರಿ ಇಲಾಖೆಗಳಿಗೆ ಹತ್ತುಹಲವು ಪತ್ರಗಳನ್ನು ಬರೆದಿದ್ದಾರೆ. ಆದರೆ ಇದಕ್ಕೆ ಯಾವ ಸ್ಪಂದನೆಯೂ ಸಿಕ್ಕಿಲ್ಲ.

ಭಗವಾನ್‍ ದಾಸ್ ಅವರ ಪ್ರತಿಪಾದನೆಗಳು ಹೀಗಿವೆ:

►ನಾಗ್ಪುರದ ಹಿಂಗ್ಮಾದಲ್ಲಿರುವ ಪ್ಲಾಟ್ ಸಂಖ್ಯೆ ಜೆ-17 ಎಂಐಡಿಸಿಯ ವರ್ಗಾವಣೆಗೆ ಸಂಬಂಧಿಸಿದಂತೆ ಸರ್ಕಾರಿ ದಾಖಲೆಗಳಲ್ಲಿ ಯಾವ ಮಾಹಿತಿಯೂ ಲಭ್ಯವಿಲ್ಲ ಅಥವಾ ನಾಗ್ಪುರದ ಸಾರಸ್ವತ್ ಕೋ ಅಪರೇಟಿವ್ ಬ್ಯಾಂಕ್‍ಗೆ ಒತ್ತೆ ಇಟ್ಟಿರುವ ಬಗ್ಗೆಯೂ ದಾಖಲೆ ಇಲ್ಲ.

►ಈ ನಿವೇಶನವನ್ನು ಒತ್ತೆ ಇಡಲು ಸೊಸೈಟಿ, ಸಹಕಾರಿ ಇಲಾಖೆಯಿಂದ ಅನುಮತಿ ಕೋರಿದ ಬಗ್ಗೆ ಕೂಡಾ ಯಾವ ದಾಖಲೆಯೂ ಇಲ್ಲ.

►ಮಹಾರಾಷ್ಟ್ರ ಸರ್ಕಾರದಿಂದ ಸೊಸೈಟಿ ಸಂಗ್ರಹಿಸಿದ 25 ಲಕ್ಷ ರೂಪಾಯಿ ಷೇರು ಬಂಡವಾಳ ಬಾಕಿ ಇದ್ದು, ಇದಕ್ಕೆ ಸಂಬಂಧಿಸಿದಂತೆ ಅಗತ್ಯ ಮಾಹಿತಿಗಳೂ ಲಭ್ಯವಿಲ್ಲ.

►ಮಹಾರಾಷ್ಟ್ರ ಸರ್ಕಾರ ಸಹಕಾರ ಸಮಘಗಳ ರಿಜಿಸ್ಟ್ರಾರ್ ಅವರ ಮೇಲೆ ಗೂಬೆ ಕೂರಿಸಿ, ಕೈ ತೊಳೆದುಕೊಂಡಿದೆ.

ನ್ಯಾಷನಲ್ ಹೆರಾಲ್ಡ್, ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಗೆ ಈ ಕೆಳಗಿನ ಪ್ರಶ್ನೆಗಳನ್ನು ಇ-ಮೇಲ್ ಮೂಲಕ ಕಳುಹಿಸಿ ಅವರಿಂದ ಪ್ರತಿಕ್ರಿಯೆ ಕೋರಿದೆ

►ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ಯಾವುದಾದರೂ ಮಾಹಿತಿ ಬಂದಿದೆಯೇ?

►ಹೌದಾದಲ್ಲಿ, ನಿಮ್ಮ ಅಭಿಪ್ರಾಯವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದೀರಾ?

►ನಿಮ್ಮ ವಿರುದ್ಧ ಅರ್ಜಿಯಲ್ಲಿ ಮಾಡಲಾದ ಆರೋಪಗಳನ್ನು ನೀವು ನಿರಾಕರಿಸಿದ್ದೀರಾ? ಹೌದಾದಲ್ಲಿ

►ಅರ್ಜಿಯಲ್ಲಿ ಹೇಳಿರುವ ನಿವೇಶವನ್ನು ಒತ್ತೆ ಇಡುವ ಮುನ್ನ ಷೇರುದಾರರ ಸಲಹೆಯನ್ನು ಪಡೆದಿದ್ದೀರಾ?

►ನಿವೇಶವನ್ನು ಒತ್ತೆ ಇಡುವ ಮುನ್ನ ಮೋಹನ್ ಭಾಗ್ವತ್ ಮತ್ತು ದೇವೇಂದ್ರ ಫಡ್ನವೀಸ್ ಅವರ ಸಲಹೆ ಪಡೆದಿದ್ದೀರಾ?

Writer - ವಿಶ್ವದೀಪಕ್, nationalheraldindia.com

contributor

Editor - ವಿಶ್ವದೀಪಕ್, nationalheraldindia.com

contributor

Similar News