ವಿಶ್ವಸಂಸ್ಥೆಯ ಫೆಲೆಸ್ತೀನ್ ನಿರಾಶ್ರಿತ ಸಂಸ್ಥೆಗೆ ಇನ್ನು ನೆರವಿಲ್ಲ: ಅಮೆರಿಕ

Update: 2018-09-01 16:42 GMT

ವಾಶಿಂಗ್ಟನ್, ಸೆ. 1: ವಿಶ್ವಸಂಸ್ಥೆಯ ಫೆಲೆಸ್ತೀನ್ ನಿರಾಶ್ರಿತ ಸಂಸ್ಥೆ (ಯುಎನ್‌ಆರ್‌ಡಬ್ಲುಎ)ಗೆ ನೀಡುತ್ತಿದ್ದ ಎಲ್ಲ ನೆರವನ್ನು ನಿಲ್ಲಿಸುವುದಾಗಿ ಅಮೆರಿಕದ ಟ್ರಂಪ್ ಆಡಳಿತ ಘೋಷಿಸಿದೆ.

ಈ ಸಂಸ್ಥೆಯು ಸರಿಪಡಿಸಲಾಗದಷ್ಟು ಕೆಟ್ಟುಹೋಗಿದೆ ಎಂದು ಅದು ಬಣ್ಣಿಸಿದೆ.

‘‘ಈ ವಿಷಯವನ್ನು ಸರಕಾರ ಎಚ್ಚರಿಕೆಯಿಂದ ಪರಿಶೀಲಿಸಿದೆ ಹಾಗೂ ಯುಎನ್‌ಆರ್‌ಡಬ್ಲುಎಗೆ ಇನ್ನು ಯಾವುದೇ ದೇಣಿಗೆ ನೀಡುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದೆ’’ ಎಂದು ಅಮೆರಿಕದ ವಿದೇಶಾಂಗ ಇಲಾಖೆ ವಕ್ತಾರೆ ಹೆದರ್ ನೋವರ್ಟ್ ಶುಕ್ರವಾರ ತಿಳಿಸಿದರು.

‘‘ಈ ಸಂಸ್ಥೆಯ ಪ್ರಾಥಮಿಕ ವ್ಯವಹಾರ ಮಾದರಿ ಮತ್ತು ಆರ್ಥಿಕ ವ್ಯವಹಾರಗಳು ಸರಿಯಿಲ್ಲ. ಅದು ನಿರಂತರವಾಗಿ ಅಗಾಧ ಸಂಖ್ಯೆಯ ಫಲಾನುಭವಿಗಳನ್ನು ಗುರುತಿಸುತ್ತಾ ಹೋಗುತ್ತದೆ. ಇದು ಕಾರ್ಯಸಾಧುವಲ್ಲ. ಹಾಗಾಗಿ, ಅದು ಹಲವು ವರ್ಷಗಳಿಂದ ಬಿಕ್ಕಟ್ಟಿನಲ್ಲಿದೆ’’ ಎಂದು ಹೆದರ್ ನೋವರ್ಟ್ ಹೇಳಿದರು.

‘‘ಈ ಸರಿಪಡಿಸಲಾಗದಷ್ಟು ಕೆಟ್ಟು ಹೋದ ಕಾರ್ಯಕ್ಕೆ ಅಮೆರಿಕ ಇನ್ನು ಆರ್ಥಿಕ ನೆರವು ನೀಡಲು ಸಾಧ್ಯವಿಲ್ಲ’’ ಎಂದು ಅವರು ತಿಳಿಸಿದರು.

ಅಮೆರಿಕ ಜನವರಿಯಲ್ಲಿ ಯುಎನ್‌ಆರ್‌ಡಬ್ಲುಎಗೆ 60 ಮಿಲಿಯ ಡಾಲರ್ (ಸುಮಾರು 425 ಕೋಟಿ ರೂಪಾಯಿ) ದೇಣಿಗೆ ನೀಡಿತ್ತು.

ಅಮಾಯಕ ಫೆಲೆಸ್ತೀನಿಯರ ಬಗ್ಗೆ ಕಾಳಜಿ

ಯುಎನ್‌ಆರ್‌ಡಬ್ಲುಎಯ ವೈಫಲ್ಯವು ಅಮಾಯಕ ಫೆಲೆಸ್ತೀನಿಯರ ಮೇಲೆ, ಅದರಲ್ಲೂ ಮುಖ್ಯವಾಗಿ ಶಾಲಾ ಮಕ್ಕಳ ಮೇಲೆ ಬೀರುವ ಪರಿಣಾಮದ ಬಗ್ಗೆ ಅಮೆರಿಕ ತೀವ್ರ ಕಳವಳ ಹೊಂದಿದೆ ಎಂದು ಹೆದರ್ ನೋವರ್ಟ್ ಹೇಳಿದರು.

ಈ ಸಂಸ್ಥೆಯಲ್ಲಿ ಸುಧಾರಣೆ ತರಲು ಹಾಗೂ ಹೊಸ ರೂಪ ನೀಡಲು ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ದೇಣಿಗೆದಾರರ ಸಮುದಾಯದ ಮಹತ್ವದ ಸದಸ್ಯರು ವಿಫಲರಾಗಿದ್ದಾರೆ ಎಂದು ಅವರು ನುಡಿದರು.

ಈ ನಿಟ್ಟಿನಲ್ಲಿ, ಅಮೆರಿಕವು ವಿಶ್ವಸಂಸ್ಥೆ ವಿವಿಧ ದೇಶಗಳ ಸರಕಾರಗಳು ಮತ್ತು ಅಂತಾರಾಷ್ಟ್ರೀಯ ಭಾಗೀದಾರರೊಂದಿಗೆ ಮಾತುಕತೆ ನಡೆಸುವುದು ಹಾಗೂ ನೂತನ ಮಾದರಿಗಳು ಮತ್ತು ನೂತನ ವಿಧಾನಗಳ ಬಗ್ಗೆ ಚರ್ಚಿಸುವುದು ಎಂದರು.

ವಿಶ್ವಸಂಸ್ಥೆ ವಿಷಾದ

ವಿಶ್ವಸಂಸ್ಥೆಯ ಫೆಲೆಸ್ತೀನ್ ನಿರಾಶ್ರಿತ ಸಂಸ್ಥೆಗೆ ಇನ್ನು ದೇಣಿಗೆ ನೀಡದಿರುವ ಅಮೆರಿಕದ ನಿರ್ಧಾರಕ್ಕೆ ವಿಶ್ವಸಂಸ್ಥೆ ವಿಷಾದ ವ್ಯಕ್ತಪಡಿಸಿದೆ.

‘‘ಫೆಲೆಸ್ತೀನ್ ನಿರಾಶ್ರಿತರಿಗೆ ಪ್ರಾಥಮಿಕ ಸೇವೆಗಳನ್ನು ನೀಡುತ್ತಿದ್ದ ಹಾಗೂ ವಲಯದಲ್ಲಿ ಸ್ಥಿರತೆ ತರಲು ಶ್ರಮಿಸುತ್ತಿದ್ದ ಯುಎನ್‌ಆರ್‌ಡಬ್ಲುಎಗೆ ನೀಡುತ್ತಿದ್ದ ಆರ್ಥಿಕ ನೆರವನ್ನು ನಿಲ್ಲಿಸಲು ಅಮೆರಿಕ ನಿರ್ಧರಿಸಿರುವುದು ದುರದೃಷ್ಟಕರ. ಅಮೆರಿಕವು ಸಾಂಪ್ರದಾಯಿಕವಾಗಿ ಯುಎನ್‌ಆರ್‌ಡಬ್ಲುಎಯ ಏಕೈಕ ಅತಿ ದೊಡ್ಡ ದೇಣಿಗೆದಾರನಾಗಿತ್ತು. ಇಲ್ಲಿಯವರೆಗೆ ಅದು ನೀಡಿದ ಬೆಂಬಲಕ್ಕೆ ಧನ್ಯವಾದಗಳು’’ ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟರಸ್‌ರ ವಕ್ತಾರ ಸ್ಟೀಫನ್ ಡುಜರಿಕ್ ಹೇಳಿದ್ದಾರೆ.

ಇಸ್ರೇಲ್ ಸಂಭ್ರಮ

ಫೆಲೆಸ್ತೀನ್ ನಿರಾಶ್ರಿತ ಸಂಸ್ಥೆಗೆ ದೇಣಿಗೆ ನೀಡುವುದನ್ನು ನಿಲ್ಲಿಸುವ ಅಮೆರಿಕದ ನಿರ್ಧಾರವನ್ನು ಇಸ್ರೇಲ್ ಶನಿವಾರ ಸ್ವಾಗತಿಸಿದೆ.

ಈ ಸಂಸ್ಥೆಯು ಮಧ್ಯಪ್ರಾಚ್ಯ ಸಂಘರ್ಷ ನಿರಂತರವಾಗಿ ಜಾರಿಯಲ್ಲಿರುವಂತೆ ನೋಡಿಕೊಳ್ಳುತ್ತಿದೆ ಎಂದು ಅದು ಆರೋಪಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News