ಪಡುಬಿದ್ರೆ: ಭದ್ರತಾ ಸಿಬ್ಬಂದಿಯನ್ನು ಕಟ್ಟಿ ಹಾಕಿ ಚಿನ್ನಾಭರಣ ಕಳವು

Update: 2018-09-02 06:03 GMT

ಪಡುಬಿದ್ರೆ, ಸೆ. 2: ಇಲ್ಲಿನ ಕೆಳಗಿನ ಪೇಟೆಯಲ್ಲಿರುವ ಬ್ಯಾಂಕೊಂದರ ಭದ್ರತಾ ಸಿಬ್ಬಂದಿಯನ್ನು ಕಟ್ಟಿ ಹಾಕಿ ಚಿನ್ನದ ಅಂಗಡಿ ಹಾಗೂ ಮೊಬೈಲ್ ಅಂಗಡಿಗೆ ನುಗ್ಗಿದ ದುಷ್ಕರ್ಮಿಗಳು  ಮೊಬೈಲ್ ಹಾಗೂ  ಚಿನ್ನಾಭರಣ ದೋಚಿದ ಘಟನೆ ಶನಿವಾವಾರ ರಾತ್ರಿ 1 ಗಂಟೆಯ ಸುಮಾರಿಗೆ ನಡೆದಿದೆ.

ಕೆಳಗಿನ ಪೇಟೆಯ ರಾಜೇಶ್ ಎಂಬವರಿಗೆ ಸೇರಿದ ಎವರ್‌ಗ್ರೀನ್ ಮೊಬೈಲ್ ಅಂಗಡಿಗೆ ನುಗ್ಗಿದ ಕಳ್ಳರು 1.80 ಲಕ್ಷ ರೂ. ಬೆಲೆಯ ಒಟ್ಟು 22 ಮೊಬೈಲ್‌ಗಳನ್ನು ಕಳವುಗೈದಿದ್ದಾರೆ. ಸಮೀಪದ ಇನ್ನೊಂದು ಕಟ್ಟಡದಲ್ಲಿರುವ ನಾರಾಯಣ ಆಚಾರ್ಯ ಎಂಬವರಿಗೆ ಸೇರಿದ ಶ್ರೀ ಧನಲಕ್ಷ್ಮೀ ಜ್ಯುವೆಲ್ಲರ್ಸ್‌ಗೆ ನುಗ್ಗಿದ ಕಳ್ಳರು 8 ಗ್ರಾಂ ಚಿನ್ನ ಹಾಗೂ  10ಸಾವಿರ ರೂ. ನಗದು ಕಳವುಗೈದಿದ್ದಾರೆ.

ಭದ್ರತಾ ಸಿಬ್ಬಂದಿಗೆ ಬೆದರಿಕೆ: ಚಿನ್ನದ ಅಂಗಡಿಗೆ ನುಗ್ಗುವ ವೇಳೆ ಸಮೀಪ ಕರ್ನಾಟಕ ಬ್ಯಾಂಕ್‌ನ ಎಟಿಎಂನಲ್ಲಿದ್ದ ಭದ್ರತಾ ಸಿಬ್ಬಂದಿ ಲಕ್ಷ್ಮಣ್ ಎಂಬವರನ್ನು  ಕಟ್ಟಿ ಹಾಕಿ ಕಟ್ಟಡದ ಹಿಂಬದಿಯಲ್ಲಿರುವ ಪೊದೆಗೆ ಎಸೆದು ಪರಾರಿಯಾಗಿದ್ದಾರೆ.

ಸುಮಾರು 4ರಿಂದ 5ಮಂದಿ ಇದ್ದು, ಟೀ ಶರ್ಟ್ ಹಾಗೂ ಚಡ್ಡಿ ಧರಿಸಿದ್ದ ಅವರು ನನ್ನ ಕೈ, ಮುಖಕ್ಕೆ ಬಟ್ಟೆಯಿಂದ ಕಟ್ಟಿ ಚಾಕು ತೋರಿಸಿ ಬೊಬ್ಬೆ ಹಾಕಿದರೆ ಜಾಗೃತೆ ಎಂದು ಬೆದರಿಸಿ, ನನ್ನನ್ನು ಪೊದೆಗೆ ಎಸೆದು ಹೋಗಿದ್ದಾರೆ. ಮುಂಜಾನೆ ಸುಮಾರು 5ಗಂಟೆಯ ವೇಳೆಗೆ ಕಾರು ನಿಲ್ಲಿಸಲು ಬಂದಿದ್ದ ಚಾಲಕರೊಬ್ಬರು ನಾನು ನರಳುತ್ತಿರುವುದನ್ನು ನೋಡಿ ಬಾಯಿ ಹಾಗೂ ಕೈಗಳನ್ನು ಬಿಡಿಸಿದರು ಎಂದು ಲಕ್ಷ್ಮಣ್ ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಡಿವೈಎಸ್‌ಪಿ ಬೆಳ್ಳಿಯಪ್ಪ, ಸರ್ಕಲ್ ಇನ್ಸ್‌ಪೆಕ್ಟರ್ ಹಾಲಮೂರ್ತಿ ರಾವ್, ಎಸ್‌ಐ ಸತೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಕರೆಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News