ಇಲಿಗಳನ್ನು ಕೊಲ್ಲಲು ಬುಲೆಟ್ ಏಕೆ ಬೇಕು ?: ಪ್ರಕಾಶ್ ಅಂಬೇಡ್ಕರ್

Update: 2018-09-02 14:41 GMT

ಮುಂಬೈ, ಸೆ. 2: ಮಾವೋವಾದಿಗಳೊಂದಿಗೆ ನಂಟಿನ ಆರೋಪದಲ್ಲಿ ಬಂಧಿತರಾಗಿರುವ ಎಡಪಂಥೀಯರ ವಿರುದ್ಧದ ಪೊಲೀಸರ ಆರೋಪದ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್, “ಇಲಿಗಳನ್ನು ಕೊಲ್ಲಲು ಪೊಲೀಸರು ಬುಲೆಟ್ ಯಾಕೆ ಉಪಯೋಗಿಸಿದ್ದಾರೆ ಎಂದು ಗೊತ್ತಾಗುತ್ತಿಲ್ಲ. ಅವುಗಳನ್ನು ಕೊಲ್ಲಲು ಕ್ರಿಮಿನಾಶಕ ಸಾಕಾಗುತ್ತಿತ್ತು” ಎಂದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಲಾಗಿದೆ ಎಂದು ಪತ್ರಗಳ ಕೆಲವು ಭಾಗಗಳನ್ನು ಮಹಾರಾಷ್ಟ್ರ ಪೊಲೀಸರು ಬಹಿರಂಗಗೊಳಿಸಿದ ಒಂದು ದಿನದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ. ‘‘ಈ ಪತ್ರಗಳು ಎಲ್ಲಾದರೂ ಪ್ರಧಾನಿ ನರೇಂದ್ರ ಮೋದಿ ಹತ್ಯೆ ಬಗ್ಗೆ ಹೇಳಿದೆಯೇ ?, ಆ ಪತ್ರಗಳು ಕೇವಲ ರಾಜೀವ್ ಗಾಂಧಿ ಅವರ ಶೈಲಿ (ಘಟನೆ) ಬಗ್ಗೆ ಮಾತ್ರ ಹೇಳುತ್ತದೆ. ಆದರೆ, ನೀವು ಅದಕ್ಕೆ ಪ್ರಧಾನಿ ಅವರ ಹೆಸರನ್ನು ಸೇರಿಸಿದಿರಿ. ಇಲಿಗಳನ್ನು ಕೊಲ್ಲಲು ಬುಲೆಟ್ ಬೇಕಾಗಿಲ್ಲ. ಕೇವಲ ಟಿಕ್ 20 ಸಾಕು’’ ಎಂದು ಪ್ರಕಾಶ್ ಅಂಬೇಡ್ಕರ್ ಹೇಳಿದ್ದಾರೆ.

ಇಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಪೊಲೀಸ್ ಪ್ರಧಾನ ನಿರ್ದೇಶಕ ಪರಮ್ ವೀರ್ ಸಿಂಗ್, ಆರೋಪಿಗಳು ಹಾಗೂ ಮಾವೋವಾದಿಗಳ ನಡುವೆ ವಿನಿಮಯವಾಗಿದೆ ಎಂದು ಹೇಳಲಾದ ಪತ್ರಗಳನ್ನು ಓದಿದ್ದಾರೆ. ಜೂನ್‌ನಲ್ಲಿ ಬಂಧಿತರಾಗಿರುವ ರೋನಾ ವಿಲ್ಸನ್ ಹಾಗೂ ಮಾವೋವಾದಿ ನಾಯಕನ ನಡುವಿನ ಈ ಮೇಲ್‌ನಲ್ಲಿ ರಾಜೀವ್ ಗಾಂಧಿ ಮಾದರಿಯ ಕಾರ್ಯಕ್ರಮ ಮೋದಿ-ರಾಜ್ ಅಂತ್ಯಕ್ಕೆ ಅಗತ್ಯ ಎಂದು ಹೇಳಲಾಗಿದೆ ಎಂದು ಸಿಂಗ್ ತಿಳಿಸಿದ್ದರು. ‘‘ಮೋದಿ-ರಾಜ್ ಅನ್ನು ಅಂತ್ಯಗೊಳಿಸಲು ದೃಢ ಕ್ರಮ ಅಗತ್ಯದ ಬಗ್ಗೆ ಕಾಮ್ರೆಡ್ ಕಿಷನ್ ಹಾಗೂ ಇತರ ಕೆಲವು ಕಾಮ್ರೆಡ್‌ಗಳು ಶಿಫಾರಸು ಮಾಡಿದ್ದಾರೆ’’ ಎಂದು ಇಮೇಲ್ ಅನ್ನು ಉಲ್ಲೇಖಿಸಿ ಸಿಂಗ್ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News