ಮಸೀದಿಯೊಳಗೆ ಭಾಷಣ ಮಾಡಿದ ಕ್ರೈಸ್ತ ಪಾದ್ರಿ

Update: 2018-09-02 15:53 GMT

ತಿರುವನಂತಪುರ, ಸೆ.2: ತನ್ನ ಚರ್ಚ್‌ನಲ್ಲಿ ಆಶ್ರಯ ಪಡೆದಿದ್ದ ನೆರೆಸಂತ್ರಸ್ತರಿಗೆ ನಿಸ್ವಾರ್ಥ ಸೇವೆಯನ್ನು ಸಲ್ಲಿಸಿದ್ದ ಮುಸ್ಲಿಮರಿಗೆ ತನ್ನ ಕೃತಜ್ಞತೆಗಳನ್ನು ಸಲ್ಲಿಸಲು ಕೈಸ್ತ ಧರ್ಮಗುರು ಮಸೀದಿಯ ವೇದಿಕೆಯನ್ನು ಬಳಸಿಕೊಂಡ ಅತ್ಯಪರೂಪದ ಘಟನೆ ಕೊಟ್ಟಾಯಂ ಜಿಲ್ಲೆಯ ವೆಚ್ಚೂರಿನಲ್ಲಿ ನಡೆದಿದ್ದು, ಕೋಮು ಸಾಮರಸ್ಯಕ್ಕೆ ಕನ್ನಡಿ ಹಿಡಿದಿದೆ.

ಮೌಲ್ವಿಯವರು ಮುಸ್ಲಿಮ್‌ರನ್ನುದ್ದೇಶಿಸಿ ಪ್ರವಚನ ನೀಡುವ ವೇದಿಕೆಯನ್ನು ಕ್ರೈಸ್ತ ಧರ್ಮಗುರುವಿಗೆ ಬಿಟ್ಟುಕೊಡುವ ಮೂಲಕ ಮಸೀದಿಯ ಅಧಿಕಾರಿಗಳು ಅಪರೂಪದ ಒಗ್ಗಟ್ಟನ್ನು ಮೆರೆದಿದ್ದಾರೆ. ಸೈರೊ ಮಲಬಾರ್ ಚರ್ಚ್‌ನ ಫಾ.ಶಾನು ಪುತ್ತುಶ್ಶೇರಿ ಅವರು ಶುಕ್ರವಾರ ನಮಾಝ್ ಸಂದರ್ಭ ವೆಚ್ಚೂರಿನ ಜುಮಾ ಮಸೀದಿಗೆ ಭೇಟಿ ನೀಡಿ ಅಲ್ಲಿಯ ಪ್ರಾರ್ಥಣ ಹಾಲ್‌ನಲ್ಲಿ ಭಾಷಣ ಮಾಡಿದ್ದಾರೆ.

580ಕ್ಕೂ ಅಧಿಕ ನೆರೆ ಸಂತ್ರಸ್ತರು ಫಾ.ಪುತ್ತುಶ್ಶೆರಿ ಅವರು ಕರ್ತವ್ಯ ನಿರ್ವಹಿಸುತ್ತಿರುವ ಅಚಿನಕೋಮ್‌ನ ಸಂತ ಅಂತೋನಿಯವರ ಚರ್ಚ್‌ನಲ್ಲಿ ಆಶ್ರಯ ಪಡೆದುಕೊಂಡಿದ್ದರು. ಮರುದಿನ ಅವರಿಗೆ ಆಹಾರ ಮತ್ತು ಕುಡಿಯುವ ನೀರಿನ ಕೊರತೆ ಎದುರಾದಾಗ ಫಾ.ಪುತ್ತುಶ್ಶೇರಿ ಅವರು ನೇರವಾಗಿ ಮಸೀದಿಗೆ ತೆರಳಿ ಮೌಲ್ವಿಯರಿಗೆ ಸಂಕಷ್ಟವನ್ನು ವಿವರಿಸಿ ನೆರವು ಕೋರಿದ್ದರು. ಮೌಲ್ವಿಯವರ ನಿರ್ದೇಶದ ಮೇರೆಗೆ ಅಂದಿನ ನಮಾಝ್‌ನ ಬಳಿಕ ಮುಸ್ಲಿಮರು ಭಾರೀ ಪ್ರಮಾಣದಲ್ಲಿ ಆಹಾರ ಮತ್ತು ನೀರಿನೊಂದಿಗೆ ಚರ್ಚ್ ತಲುಪಿದ್ದರು. ಮುಸ್ಲಿಂ ಯುವಕರು ಜೊತೆಗೆ ಅಗತ್ಯ ಔಷಧಿಗಳನ್ನೂ ಹೊತ್ತೊಯ್ದಿದ್ದರು. ನಂತರವೂ ಅವರು ಚರ್ಚ್‌ಗೆ ಪರಿಹಾರ ಸಾಮಗ್ರಿಗಳ ಪೂರೈಕೆಯನ್ನು ಮುಂದುವರಿಸಿದ್ದರು.

ಮೌಲ್ವಿ ಮತ್ತು ಇತರ ಅಧಿಕಾರಿಗಳಿಗೆ ವೈಯಕ್ತಿಕವಾಗಿ ಕೃತಜ್ಞತೆಗಳನ್ನು ಸಲ್ಲಿಸಲು ತಾನು ಮಸೀದಿಗೆ ತೆರಳಿದ್ದೆ. ಆದರೆ ಅವರು ತನ್ನನ್ನು ಪ್ರೇಯರ್ ಹಾಲ್‌ಗೆ ಆಹ್ವಾನಿಸಿ ಮಾತನಾಡಲು ತಮ್ಮ ವೇದಿಕೆಯನ್ನು ಒದಗಿಸಿದ್ದರು. ಇದು ಒಗ್ಗಟ್ಟಿನ ಅಪರೂಪದ ನಡೆಯಾಗಿದೆ ಎಂದು ಫಾ.ಪುತ್ತುಶ್ಶೇರಿ ಹೇಳಿದರು. ಅಂದಿನ ಶುಕ್ರವಾರದ ನಮಾಝ್‌ಗೆ ಸೇರಿದ್ದ 250ಕ್ಕೂ ಅಧಿಕ ಜನರಿಗೆ ಇದು ವಿಭಿನ್ನ ಅನುಭವ ನೀಡಿತ್ತು.

ಸುಮಾರು 10 ನಿಮಿಷಗಳ ಕಾಲ ಭಾಷಣ ಮಾಡಿದ ಫಾ.ಪುತ್ತುಶ್ಶೇರಿ ಅವರು, ಪ್ರವಾಹವು ಜನರ ಹಲವಾರು ಬೆಲೆಬಾಳುವ ಸೊತ್ತುಗಳನ್ನು ಕಿತ್ತುಕೊಂಡಿದೆಯಾದರೂ ಅದು ಅವರ ನಡುವಿನ ಮತಭೇದದ ಗೋಡೆಗಳನ್ನೂ ನಿರ್ನಾಮಗೊಳಿಸಿದೆ. ಸೇತುವೆಗಳನ್ನು ನಿರ್ಮಿಸಿ,ಗೋಡೆಗಳನ್ನಲ್ಲ ಎಂದು ಪೋಪ್ ಫ್ರಾನ್ಸಿಸ್ ಹೇಳಿದ್ದಾರೆ. ವಿನಾಶಕಾರಿ ನೆರೆಯು ಈಗ ನಮಗೆ ಗೋಡೆಗಳನ್ನು ಧ್ವಂಸಗೊಳಿಸುವ ಮತ್ತು ಒಗ್ಗಟ್ಟಿನ ಸೇತುವೆಗಳನ್ನು ನಿರ್ಮಿಸುವ ಅವಕಾಶವನ್ನು ಒದಗಿಸಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News