ಶ್ರೀಕೃಷ್ಣ ದೇವರಾಯ ತಿರುಪತಿ ದೇಗುಲಕ್ಕೆ ನೀಡಿದ್ದ ಚಿನ್ನಾಭರಣಗಳೆಲ್ಲಿ?: ಕೇಂದ್ರ ಮಾಹಿತಿ ಆಯೋಗದ ಪ್ರಶ್ನೆ

Update: 2018-09-02 16:00 GMT

ಹೊಸದಿಲ್ಲಿ,ಸೆ.2: 16ನೇ ಶತಮಾನದಲ್ಲಿ ವಿಜಯನಗರವನ್ನು ಆಳುತ್ತಿದ್ದ ದೊರೆ ಶ್ರೀಕೃಷ್ಣ ದೇವರಾಯನು ತಿರುಪತಿಯ ಶ್ರೀವೆಂಕಟೇಶ್ವರ ದೇವಸ್ಥಾನಕ್ಕೆ ಕಾಣಿಕೆಯಾಗಿ ಅರ್ಪಿಸಿದ್ದ ಚಿನ್ನಾಭರಣಗಳು ಎಲ್ಲಿವೆ ಎಂದು ಕೇಂದ್ರ ಮಾಹಿತಿ ಆಯೋಗ(ಸಿಐಸಿ)ವು ಭಾರತೀಯ ಪುರಾತತ್ವ ಇಲಾಖೆ(ಎಎಸ್‌ಐ),ಸಂಸ್ಕೃತಿ ಸಚಿವಾಲಯ, ಆಂಧ್ರಪ್ರದೇಶ ಸರಕಾರ ಮತ್ತು ತಿರುಮಲ ತಿರುಪತಿ ದೇವಸ್ಥಾನಗಳ(ಟಿಟಿಡಿ) ಆಡಳಿತ ಮಂಡಳಿಯನ್ನು ಪ್ರಶ್ನಿಸಿದೆ.

ಕಠಿಣ ಆದೇಶವೊಂದರಲ್ಲಿ ಮಾಹಿತಿ ಆಯುಕ್ತ ಶ್ರೀಧರ ಆಚಾರ್ಯುಲು ಅವರು ತಿರುಮಲ ದೇವಸ್ಥಾನಗಳನ್ನು ರಾಷ್ಟ್ರೀಯ ಸ್ಮಾರಕಗಳನ್ನಾಗಿ ಘೋಷಿಸಲು ಕೇಂದ್ರ ಸರಕಾರವು ಕೈಗೊಳ್ಳಲು ಉದ್ದೇಶಿಸಿರುವ ಕ್ರಮವನ್ನು ಬಹಿರಂಗಗೊಳಿಸುವಂತೆ ಮತ್ತು ವಿಶ್ವ ಪರಂಪರೆ ಕಟ್ಟಡಗಳನ್ನು ಹಾಗೂ ಚಿನ್ನಾಭರಣಗಳನ್ನು ರಕ್ಷಿಸಲು ಅಂತರರಾಷ್ಟ್ರೀಯ ಬದ್ಧತೆಯನ್ನು ಅನುಷ್ಠಾನಿಸುವಂತೆ ಪ್ರಧಾನಿ ಕಚೇರಿಗೆ ಸೂಚಿಸಿದೆ.

ತಿರುಮಲ ದೇವಸ್ಥಾನಗಳನ್ನು ಐತಿಹಾಸಿಕ ಮತ್ತು ರಾಷ್ಟ್ರೀಯ ಪರಂಪರೆ ಸ್ಮಾರಕಗಳೆಂದು ಘೋಷಿಸುವಂತೆ ಕೋರಿ ತಾನು ಸಲ್ಲಿಸಿದ್ದ ಅರ್ಜಿಯ ಕುರಿತು ಸರಕಾರವು ತೆಗೆದುಕೊಂಡಿರುವ ಕ್ರಮದ ಬಗ್ಗೆ ಪ್ರಧಾನಿ ಕಚೇರಿಯಿಂದ ತಿಳಿಯಲು ಬಯಸಿದ್ದ ಬಿಕೆಎಸ್‌ಆರ್ ಅಯ್ಯಂಗಾರ್ ಅವರ ಅರ್ಜಿಯ ವಿಚಾರಣೆ ನಡೆಸಿದ ಸಿಐಸಿ ಈ ಆದೇಶವನ್ನು ಹೊರಡಿಸಿದೆ.

ಆರ್‌ಟಿಐ ಕಾಯ್ದೆಯಡಿ ಅಯ್ಯಂಗಾರ್ ಸಲ್ಲಿಸಿದ್ದ ಅರ್ಜಿಯನ್ನು ವಿವಿಧ ಪ್ರಾಧಿಕಾರಗಳಿಗೆ ವರ್ಗಾಯಿಸಲಾಗಿತ್ತು. ಆದರೆ ತೃಪ್ತಿದಾಯಕ ಉತ್ತರ ದೊರೆಯದ್ದರಿಂದ ವಿಷಯವನ್ನು ಬಹಿರಂಗಗೊಳಿಸುವಂತೆ ಕೋರಿ ಅಯ್ಯಂಗಾರ್ ಸಿಐಸಿ ಮೊರೆ ಹೋಗಿದ್ದರು.

ಟಿಟಿಡಿಯು 1500 ವರ್ಷಗಳಷ್ಟು ಹಳೆಯದಾದ ತಿರುಪತಿಯಲ್ಲಿನ ದೇವಸ್ಥಾನ ಕಟ್ಟಡಗಳನ್ನು ರಕ್ಷಿಸುತ್ತಿಲ್ಲ ಮತ್ತು 1958ರ ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ತಾಣಗಳು ಮತ್ತು ಅವಶೇಷಗಳ ಕಾಯ್ದೆಗನುಗುಣವಾಗಿ ಶ್ರೀವೆಂಕಟೇಶ್ವರ ಮತ್ತು ಸುತ್ತುಮುತ್ತಲಿನ ದೇವಸ್ಥಾನಗಳನ್ನು ಪ್ರಾಚೀನ ಸ್ಮಾರಕಗಳೆಂದು ಘೋಷಿಸುವ 2011ರ ಪ್ರಸ್ತಾವವನ್ನು ಮೂಲೆಗುಂಪು ಮಾಡಿದೆ ಎಂದು ಅಯ್ಯಂಗಾರ್ ವಿಚಾರಣೆ ವೇಳೆ ಆರೋಪಿಸಿದ್ದರು.

 ಹೈದರಾಬಾದ್‌ನ ಪುರಾತತ್ವ ಮತ್ತು ವಸ್ತುಸಂಗ್ರಹಾಲಯಗಳ ನಿರ್ದೇಶಕರು 2011ರಲ್ಲಿ ಸಲ್ಲಿಸಿದ್ದ ವರದಿಯನ್ನು ಉಲ್ಲೇಖಿಸಿರುವ ಮಾಹಿತಿ ಆಯುಕ್ತರು,20 ಸದಸ್ಯರ ತಜ್ಞತಂಡವೊಂದು ಶ್ರೀಕೃಷ್ಣದೇವರಾಯನು ಕಾಣಿಕೆಯಾಗಿ ನೀಡಿದ್ದ ಚಿನ್ನಾಭರಣಗಳನ್ನು ಉಲ್ಲೇಖಿಸಿದ್ದ ತಿರುಮಲದ ಶ್ರೀ ವೆಂಕಟೇಶ್ವರ ದೇವಸ್ಥಾನದ ಗೋಡೆಗಳಲ್ಲಿ ಕೆತ್ತಲಾಗಿರುವ ಶಾಸನಗಳನ್ನು ಪತ್ತೆ ಹಚ್ಚಿತ್ತು ಎನ್ನುವುದನ್ನು ಬೆಟ್ಟು ಮಾಡಿದ್ದಾರೆ. ಆದರೆ ದೇವಸ್ಥಾನದಲ್ಲಿರುವ ಚಿನ್ನಾಭರಣಗಳಲ್ಲಿ ಯಾವುದೂ ವಿಜಯನಗರದ ದೊರೆ ನೀಡಿದ್ದ ಚಿನ್ನಾಭರಣಗಳೊಂದಿಗೆ ತಾಳೆಯಾಗುತ್ತಿಲ್ಲ ಎನ್ನುವುದನ್ನೂ ಅವರು ಗಂಭೀರವಾಗಿ ಪರಿಗಣಿಸಿದ್ದಾರೆ.

ಮೇಲ್ಮನವಿದಾರರು ವೃಥಾ ಆರೋಪವನ್ನು ಮಾಡಿಲ್ಲ,ಸಂಸ್ಕೃತಿ ಸಚಿವಾಲಯದ ನಿರ್ದೇಶಕರ ಪ್ರಮುಖ ಶೋಧವನ್ನು ಅವರು ಪ್ರಸ್ತಾಪಿಸಿದ್ದಾರೆ ಮತ್ತು 2011ರಿಂದಲೂ ಈಬಗ್ಗೆ ಯಾವುದೇ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ ಎಂದು ಆಚಾರ್ಯುಲು ಹೇಳಿದ್ದಾರೆ.

ಟಿಟಿಡಿಯು ಸರ್ವೋಚ್ಚ ನ್ಯಾಯಾಲಯದ ಮಾಜಿ ನ್ಯಾಯಮೂರ್ತಿಗಳಾದ ಡಿ.ಪಿ.ವಾಧ್ವಾ ಮತ್ತು ಜಗನ್ನಾಥ್ ರಾವ್ ಅವರ ನೇತೃತ್ವದಲ್ಲಿ ರಚಿಸಿದ್ದ ಸ್ವ-ವೌಲ್ಯಮಾಪನ ಸಮಿತಿಯು ತಿರುಮಲ ದೇವಸ್ಥಾನವು 1952ರಿಂದ ನಿರ್ವಹಿಸುತ್ತಿರುವ ‘ತಿರುವಾಭರಣಂ’ರಿಜಿಸ್ಟರ್‌ನಲ್ಲಿ ಶ್ರೀಕೃಷ್ಣ ದೇವಾರಾಯ ನೀಡಿದ್ದ ಆಭರಣಗಳನ್ನು ಉಲ್ಲೇಖಿಸಿಲ್ಲ ಮತ್ತು ಎಲ್ಲ ಆಭರಣಗಳು ಸುರಕ್ಷಿತವಾಗಿವೆ ಎಂದು ಹೇಳುತ್ತಿದೆ. 1939ರಲ್ಲಿ ಅರ್ಚಕರೋರ್ವರು ಆಭರಣಗಳನ್ನು ಹಸ್ತಾಂತರಿಸಿದ ಮಾಹಿತಿಯನ್ನು ಬಿಟ್ಟರೆ 1952ರ ಮೊದಲು ಇಂತಹ ಯಾವುದೇ ರಿಜಿಸ್ಟರ್ ದೇವಸ್ಥಾನದಲ್ಲಿರಲಿಲ್ಲ ಎಂದೂ ಬೆಟ್ಟುಮಾಡಿತ್ತು ಎಂದೂ ಅವರು ಹೇಳಿದ್ದಾರೆ.

ನ್ಯಾ.ವಾಧ್ವಾ ಸಮಿತಿಯ ಶಿಫಾರಸಿನ ಕುರಿತು ಯಾವುದೇ ಕ್ರಮಾನುಷ್ಠಾನ ವರದಿಯನ್ನು ಟಿಟಿಡಿಯು ಬಹಿರಂಗಗೊಳಿಸಿಲ್ಲ ಎಂದೂ ಆಚಾರ್ಯುಲು ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News