ಯುಎಸ್ ಓಪನ್: ಫೆಡರರ್ ಆಟದ ಮುಂದೆ ಮಂಕಾದ ಕಿರ್ಗಿಯೋಸ್

Update: 2018-09-02 18:28 GMT

ನ್ಯೂಯಾರ್ಕ್, ಸೆ:2: ಇಲ್ಲಿ ನಡೆಯುತ್ತಿರುವ ಯುಎಸ್ ಓಪನ್ ಚಾಂಪಿಯನ್‌ಶಿಪ್‌ನಲ್ಲಿ ಐದು ಬಾರಿಯ ಚಾಂಪಿಯನ್ ರೋಜರ್ ಫೆಡರರ್ ಯುವ ಆಟಗಾರ ನಿಕ್ ಕಿರ್ಗಿಯೋಸ್ ವಿರುದ್ಧ 6-4, 6-1, 7-5 ನೇರ ಸೆಟ್‌ಗಳೊಂದಿಗೆ ಗೆಲುವು ಸಾಧಿಸಿದ್ದಾರೆ. ವಿಶ್ವದ ಎರಡನೇ ಕ್ರಮಾಂಕದ ಆಟಗಾರ ಫೆಡರರ್ ಆರಂಭದಲ್ಲೇ ಕಿರ್ಗಿ ಯೋಸ್ ಎದುರು ಆಕ್ರಮಣಕಾರಿ ಆಟ ಪ್ರದರ್ಶಿಸಿ ಪಂದ್ಯದ ಮೇಲೆ ಹಿಡಿತ ಸಾಧಿಸಿದರು. ಇದೇ ವೇಳೆ ಸಹಜ ಆಟವಾಡಲು ಎಡವಿದ ಕಿರ್ಗಿಯೋಸ್ ಯಾವ ಹಂತದಲ್ಲೂ ಫೆಡರರ್‌ಗೆ ಪೈಪೋಟಿ ನೀಡುವಂತೆ ಕಂಡುಬರಲಿಲ್ಲ. ಈ ಗೆಲುವಿನೊಂದಿಗೆ ಫೆಡರರ್ ಸೋಮವಾರ ನಡೆಯಲಿರುವ ಪಂದ್ಯದಲ್ಲಿ ಆಸ್ಟ್ರೇಲಿಯನ್ ಆಟಗಾರ ಜಾನ್ ಮಿಲ್‌ಮ್ಯಾನ್ ಅವರನ್ನು ಎದುರಿಸಲಿದ್ದಾರೆ. ಮಿಲ್‌ಮ್ಯಾನ್ ಕಝಕ್‌ಸ್ತಾನದ ಮಿಕೈಲ್ ಕುಕುಶ್ಕಿನ್ ಅವರನ್ನು 6-4, 4-6, 6-1, 6-3 ಅಂತರದಲ್ಲಿ ಮಣಿಸುವ ಮೂಲಕ ಇದೇ ಮೊತ್ತಮೊದಲ ಬಾರಿ ಪ್ರಮುಖ ಗ್ರಾಂಡ್ ಸ್ಲಾಮ್‌ನಲ್ಲಿ 16ರ ಹಂತವನ್ನು ತಲುಪಿದ್ದಾರೆ.

ಮಿಲ್‌ಮ್ಯಾನ್ ವಿರುದ್ಧ ರೋಜರ್ ಫೆಡರರ್ ಗೆಲುವು ಸಾಧಿಸಲು ಸಾಧ್ಯವಾದರೆ ಅಂತಿಮ ಎಂಟರ ಹಣಾಹಣಿಯಲ್ಲಿ ಅವರು ವಿಂಬಲ್ಡನ್ ಚಾಂಪಿಯನ್ ನೊವಾಕ್ ಜೊಕೊವಿಕ್ ಅವರನ್ನು ಎದುರಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News