ಉಳ್ಳಾಲ ನಗರಸಭೆ: ಪ್ರಾಬಲ್ಯ ಮೆರೆದ ಎಸ್‌ಡಿಪಿಐ-ಜೆಡಿಎಸ್

Update: 2018-09-03 06:28 GMT

ಮಂಗಳೂರು, ಸೆ.3: ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರ ತವರು ಕ್ಷೇತ್ರವಾದ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಉಳ್ಳಾಲ ನಗರಸಭೆಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಎಸ್‌ಡಿಪಿಐ ಮತ್ತು ಜೆಡಿಎಸ್ ಪ್ರಾಬಲ್ಯ ಮೆರೆದಿದೆ.

ಎಸ್‌ಡಿಪಿಐ 9 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಅದರಲ್ಲಿ ಐವರು ಪುರುಷ ಮತ್ತು ನಾಲ್ವರು ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿತ್ತು. ಸೋಮವಾರ ಉಳ್ಳಾಲದ ಭಾರತ್ ಪ್ರೌಢಶಾಲೆಯಲ್ಲಿ ನಡೆದ ಮತ ಎಣಿಕೆಯಲ್ಲಿ ಎಸ್‌ಡಿಪಿಐ 6 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅಚ್ಚರಿಯ ಫಲಿತಾಂಶ ನೀಡಿದೆ.

ಎಸ್‌ಡಿಪಿಐಯಿಂದ ಕಣಕ್ಕಿಳಿದಿದ್ದ ಕಮರುನ್ನಿಸಾ ನಿಝಾಮ್, ಝರೀನಾ ರವೂಫ್, ಶಹನಾಝ್ ಅಕ್ರಂ ಹಸನ್, ರುಕಿಯಾ ಬಾನು ಇಕ್ಬಾಲ್ ಜಯ ಗಳಿಸಿದ್ದಾರೆ. ಇನ್ನುಳಿದಂತೆ ಅಸ್ಗರ್ ಅಲಿ ಮತ್ತು ಮುಹಮ್ಮದ್ ರಮೀಝ್ ಕೂಡಾ ಗೆಲುವು ಸಾಧಿಸಿದ್ದಾರೆ. ಈ ಹಿಂದೆ ನಡೆದ ಉಳ್ಳಾಲ ಪುರಸಭೆ ಚುನಾವಣೆಯಲ್ಲಿ ಎಸ್‌ಡಿಪಿಐ 1 ಸ್ಥಾನ ಮಾತ್ರ ಗಳಿಸಿತ್ತು. ಇದೀಗ 6 ಸ್ಥಾನ ಗಳಿಸುವ ಮೂಲಕ ಹೊಸ ಸಂದೇಶ ರವಾನಿಸಿದೆ.

ಕಾಂಗ್ರೆಸ್‌ನ ಅನೇಕ ಪ್ರಮುಖರು ಜೆಡಿಎಸ್‌ಗೆ ಸೇರ್ಪಡೆಗೊಂಡ ಕಾರಣ ಉಳ್ಳಾಲದಲ್ಲಿ ಜೆಡಿಎಸ್ ಪಕ್ಷದಲ್ಲೂ ಪ್ರಾಬಲ್ಯ ಕಂಡು ಬಂದಿತ್ತು. ರಾಜ್ಯದ ಮುಖ್ಯಮಂತ್ರಿ ಜೆಡಿಎಸ್ ಪಕ್ಷದ ನಾಯಕರೇ ಆದ ಕಾರಣ ಅಭ್ಯರ್ಥಿಗಳು, ಸ್ಥಳೀಯ ನಾಯಕರು ಅದನ್ನೇ ಚುನಾವಣಾ ಅಸ್ತ್ರವನ್ನಾಗಿಸಿಕೊಂಡಿದ್ದರು. ಜೆಡಿಎಸ್ 21 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಆ ಪೈಕಿ 5 ಸ್ಥಾನಗಳನ್ನು ಗೆದ್ದಿವೆ. ಕಳೆದ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ ಶೂನ್ಯ ಸಂಪಾದನೆ ಮಾಡಿತ್ತು. ಇದೀಗ ಒಂದೇ ನೆಗೆತಕ್ಕೆ ಐವರು ಗೆದ್ದಿದ್ದಾರೆ.

ಉಳ್ಳಾಲ ನಗರಸಭೆಯಲ್ಲಿ ಇದೀಗ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಲಭಿಸಿಲ್ಲ. ಈ ಹಿಂದೆ 17 ಸ್ಥಾನಗಳನ್ನು ಗೆಲ್ಲುವ ಮೂಲಕ ಆಡಳಿತದಲ್ಲಿದ್ದ ಕಾಂಗ್ರೆಸ್ 13 ಸ್ಥಾನಗಳಿಗೆ ಕುಸಿದಿದೆ. ಕಳೆದ ಚುನಾವಣೆಯ ಸಂದರ್ಭ ಪುರಸಭೆಯಾಗಿದ್ದ ಉಳ್ಳಾಲದ 27 ವಾರ್ಡ್‌ಗಳ ಪೈಕಿ ಕಾಂಗ್ರೆಸ್ 17, ಬಿಜೆಪಿ, 7, ಎಸ್‌ಡಿಪಿಐ 1 ಹಾಗೂ ಇಬ್ಬರು ಪಕ್ಷೇತರರು ಗೆಲುವು ಸಾಧಿಸಿದ್ದರು.

ಮೂರೂವರೆ ವರ್ಷಗಳ ಹಿಂದೆ ನಗರಸಭೆಯಾಗಿ ಮೇಲ್ದರ್ಜೆಗೆ ಏರಿದಾಗ ವಾರ್ಡ್‌ಗಳ ಸಂಖ್ಯೆ 31ಕ್ಕೇರಿತ್ತು. ಬಳಿಕ ನಡೆದಿರುವ ಈ ಚುನಾವಣೆಯಲ್ಲಿ ಎಸ್‌ಡಿಪಿಐ ಐವರು ಪುರುಷ ಮತ್ತು ನಾಲ್ವರು ಮಹಿಳೆಯರ ಸಹಿತ 9 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಈ ಪೈಕಿ ಆರು ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿರುವ ಎಸ್‌ಡಿಪಿಐ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದೆ. ಇವರಲ್ಲಿ ಕಣಕ್ಕಿಳಿದಿದ್ದ ನಾಲ್ವರು ಮಹಿಳೆಯರೂ ಜಯಭೇರಿ ಬಾರಿಸಿರುವುದು ಗಮನಾರ್ಹ. ಒಟ್ಟು 31 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 13, ಎಸ್‌ಡಿಪಿಐ 6, ಬಿಜೆಪಿ 6, ಜೆಡಿಎಸ್ 4 ಹಾಗೂ ಇಬ್ಬರು ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News