ದ.ಕ.ದಲ್ಲಿ 10 ಯೋಜನೆಗಳಿಗೆ ಗುರಿ ದಾಟಿದ ಅರ್ಜಿಗಳು

Update: 2018-09-03 07:10 GMT

► ಸಲ್ಲಿಕೆಯಾಗಬೇಕಾದ ಅರ್ಜಿಗಳ ಗುರಿ 3,361, ಸಲ್ಲಿಕೆಯಾಗಿರುವ ಅರ್ಜಿಗಳು 35,176

► ಗುರಿ ದಾಟುವಲ್ಲಿ ದ.ಕ.ಜಿಲ್ಲೆ ರಾಜ್ಯದಲ್ಲೇ ಪ್ರಥಮ

ಮಂಗಳೂರು, ಸೆ.2: ಕರ್ನಾಟಕ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಅಧೀನದಲ್ಲಿರುವ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಮತೀಯ ಅಲ್ಪಸಂಖ್ಯಾತರಾದ ಮುಸ್ಲಿಮರು, ಕ್ರೈಸ್ತರು, ಜೈನರು, ಬೌದ್ಧರು, ಪಾರ್ಸಿ, ಸಿಖ್ಖರಿಗೆ ಸ್ವ-ಉದ್ಯೋಗ ಕೈಗೊಳ್ಳಲು ಸಾಲ, ಪಶು ಸಂಗೋಪನೆ, ಶೈಕ್ಷಣಿಕ ಸಾಲ, ಬೋರ್‌ವೆಲ್ ಅಥವಾ ಬಾವಿ ಕೊರೆಯಿಸುವ ಯೋಜನೆ ಇತ್ಯಾದಿಗೆ 2018-19ನೇ ಸಾಲಿಗೆ ನಿಗದಿಪಡಿಸಿದ ಗುರಿಯನ್ನು ಮೀರಿದ ಅರ್ಜಿಗಳು ದ.ಕ.ಜಿಲ್ಲೆಯಲ್ಲಿ ಸಲ್ಲಿಕೆಯಾಗಿವೆ.

 ದ.ಕ. ಜಿಲ್ಲೆಯಲ್ಲಿ 10 ಯೋಜನೆಗಳಿಗೆ ಒಟ್ಟು 3,361 ಗುರಿ ಇದ್ದರೆ, ಸಲ್ಲಿಕೆಯಾದ ಅರ್ಜಿಗಳ ಒಟ್ಟು ಸಂಖ್ಯೆ 35,176. ಅಂದರೆ 11 ಪಟ್ಟಿಗೂ ಅಧಿಕವಿದೆ. ಇದು ಆಗಸ್ಟ್ 31ರವರೆಗೆ ಆನ್‌ಲೈನ್‌ನಲ್ಲಿ ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆಯಾಗಿದೆ. ವಿವಿಧ ಕಾರಣಗಳಿಂದಾಗಿ ಕೆಲವು ಜಿಲ್ಲೆಗಳಲ್ಲಿ ಇಷ್ಟು ಪ್ರಮಾಣದಲ್ಲಿ ಅರ್ಜಿ ಸಲ್ಲಿಕೆಯಾಗಿಲ್ಲ. ಹಾಗಾಗಿ ನಿಗಮದ ನಿರ್ದೇಶಕರು ಇತ್ತೀಚೆಗೆ ಹೊರಡಿಸಿದ ಆದೇಶದಲ್ಲಿ ಅರ್ಜಿ ಸಲ್ಲಿಕೆಯ ಅವಧಿಯನ್ನು ಸೆ.20ರವರೆಗೆ ವಿಸ್ತರಣೆ ಮಾಡಿದ್ದಾರೆ. ಇದು ದ.ಕ.ಜಿಲ್ಲೆಗೂ ಅನ್ವಯವಾಗುವ ಕಾರಣ ಅರ್ಜಿಗಳ ಸಂಖ್ಯೆ 50 ಸಾವಿರ ದಾಟಿದರೆ ಅಚ್ಚರಿ ಇಲ್ಲ ಎಂಬ ಮಾತು ಕೇಳಿ ಬರುತ್ತಿವೆ.

ರಾಜ್ಯ ಸರಕಾರ ದ.ಕ.ಜಿಲ್ಲೆಗೆ ನೀಡಿದ 3,361 ಅರ್ಜಿ ಸಲ್ಲಿಸಬೇಕಾದ ಗುರಿಗೆ 1,672.13 ಲಕ್ಷ ರೂ. ನಿಗದಿಪಡಿಸಿತ್ತು. ಆದರೆ, ಸಲ್ಲಿಕೆಯಾದ ಅರ್ಜಿಗಳ ಅನ್ವಯ ಈ ಹಣ ಯಾವುದಕ್ಕೂ ಸಾಕಾಗದು. ಸಲ್ಲಿಕೆಯಾದ ಅರ್ಜಿಗೆ ಕನಿಷ್ಠ 110 ಕೋ.ರೂ. ಹಣ ಬೇಕಾದೀತು. ಇನ್ನು ಸೆ.20ರವರೆಗೂ ಅರ್ಜಿ ಸಲ್ಲಿಕೆಗೆ ಅವಧಿ ವಿಸ್ತರಿಸಿದ ಕಾರಣ ಅರ್ಜಿ ಸಲ್ಲಿಕೆಯ ಪ್ರಮಾಣ 50 ಸಾವಿರ ದಾಟಿದರೆ ರಾಜ್ಯ ಸರಕಾರ ದ.ಕ.ಜಿಲ್ಲೆಯ ನಿಗಮವೊಂದಕ್ಕೇ 150 ಕೋ.ರೂ.ವನ್ನು ನೀಡಬೇಕಾದೀತು ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿವೆ. ಆದರೆ, ರೈತರ ಸಾಲಮನ್ನಾದ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ನಿಗಮಕ್ಕೆ ಹೆಚ್ಚುವರಿ ಅನುದಾನ ನೀಡುವ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ. ಹಾಗಾಗಿ ಅರ್ಜಿ ಸಲ್ಲಿಸಿದವರಲ್ಲಿ ಯಾರ್ಯಾರು ಯೋಜನೆಗಳ ಫಲಾನುಭವಿಗಳಾದಾರು? ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ.

ನಗರದ ಪಾಂಡೇಶ್ವರದಲ್ಲಿರುವ ವೌಲಾನಾ ಆಝಾದ್ ಭವನದಲ್ಲಿರುವ ನಿಗಮದ ಕಚೇರಿಯಲ್ಲಿ ಅರ್ಜಿಗಳನ್ನು ಸಾಲುಗಟ್ಟಿ ಇಡಲಾಗಿದೆ. ದ.ಕ.ಜಿಲ್ಲೆಯ 6 ಮತೀಯ ಅಲ್ಪಸಂಖ್ಯಾತರ ಪೈಕಿ ಮುಸ್ಲಿಮರು ಅಧಿಕ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಕ್ರೈಸ್ತರು ಎರಡನೇ ಸ್ಥಾನದಲ್ಲಿದ್ದಾರೆ. ಉಳಿದಂತೆ ಜೈನರು, ಬೌದ್ಧರ ಅರ್ಜಿ ಸಂಖ್ಯೆ ಬೆರಳೆಣಿಕೆಯಷ್ಟಿವೆ.

ಪ್ರಸಕ್ತ ಸಾಲಿನಲ್ಲಿ 10 ಯೋಜನೆಗಳ ಪೈಕಿ ಸ್ವ-ಉದ್ಯೋಗದ ಅರ್ಜಿ ಸಲ್ಲಿಕೆಯಾಗಬೇಕಾದ ಗುರಿ 244 ಇದ್ದರೆ ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆ 967. ಶ್ರಮಶಕ್ತಿಗೆ 314 ಸಲ್ಲಿಕೆಯಾಗಬೇಕಾದ ಅರ್ಜಿಗಳ ಗುರಿ ಇದ್ದು, ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆ 29,400. ಅಂದರೆ ಗುರಿಗಿಂತ 94 ಪಟ್ಟು ಅರ್ಜಿಗಳು ಅಧಿಕವಿದೆ. ಕಿರುಸಾಲಕ್ಕೆ ಸಲ್ಲಿಕೆಯಾಗಬೇಕಾದ ಅರ್ಜಿಗಳ ಗುರಿ 677. ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆ 1,400. ಅರಿವು ಸಾಲಕ್ಕೆ 1,712 ಸಲ್ಲಿಕೆಯಾಗಬೇಕಾದ ಅರ್ಜಿಗಳ ಗುರಿ ಇದ್ದು, 1,900 ಅರ್ಜಿಗಳು ಸಲ್ಲಿಕೆಯಾಗಿವೆ.

ಗಂಗಾ ಕಲ್ಯಾಣ (ಬೋರ್‌ವೆಲ್/ಬಾವಿ) ಯೋಜನೆಗೆ 168 ಸಲ್ಲಿಕೆಯಾಗಬೇಕಾದ ಅರ್ಜಿಗಳ ಗುರಿ ಇದ್ದು, 330 ಅರ್ಜಿಗಳು ಸಲ್ಲಿಕೆಯಾಗಿವೆ. ಪಶು ಸಂಗೋಪನೆಗೆ 168 ಸಲ್ಲಿಕೆಯಾಗಬೇಕಾದ ಅರ್ಜಿಗಳ ಗುರಿ ನೀಡಲಾಗಿದ್ದು, 791 ಅರ್ಜಿಗಳು ಸಲ್ಲಿಕೆಯಾಗಿವೆ.

ಟ್ಯಾಕ್ಸಿ/ಗೂಡ್ಸ್ ವಾಹನಗಳ ಖರೀದಿ ಯೋಜನೆಯ ಗುರಿ 41 ಆಗಿದ್ದು, 338 ಅರ್ಜಿ ಸಲ್ಲಿಕೆಯಾಗಿವೆ. ಪ್ರವಾಸಿ ಸ್ವ-ಉದ್ಯೋಗ ಯೋಜನೆಗೆ ಸಲ್ಲಿಕೆಯಾಗಬೇಕಾದ ಅರ್ಜಿಗಳ ಗುರಿ 1, ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆ 6 ಇವೆ. ಅಲ್ಪಸಂಖ್ಯಾತರ ಕಲ್ಯಾಣ ಯೋಜನೆಯ ಸಲ್ಲಿಕೆಯಾಗಬೇಕಾದ ಅರ್ಜಿಗಳ ಗುರಿ 34 ಇದ್ದು, 42 ಅರ್ಜಿ ಸಲ್ಲಿಕೆಯಾಗಿವೆ. ಅಟೋಮೊಬೈಲ್ ಟ್ರೈನಿಂಗ್‌ಗೆ ಸಲ್ಲಿಕೆಯಾಗಬೇಕಾದ ಅರ್ಜಿಗಳ ಗುರಿ 2 ಇದ್ದು, 2 ಅರ್ಜಿಗಳು ಮಾತ್ರ ಸಲ್ಲಿಕೆಯಾಗಿವೆ.

ಸೈಬರ್ ಕೇಂದ್ರಗಳ ಲಾಬಿ

ಈ ಬಾರಿ ಎಲ್ಲ ಅರ್ಜಿಗಳನ್ನೂ ಆನ್‌ಲೈನ್ ಮೂಲಕ ಕಡ್ಡಾಯವಾಗಿ ಸಲ್ಲಿಸಲು ಸೂಚಿಸಿದ್ದರಿಂದ ಇದರ ಲಾಭವನ್ನು ಖಾಸಗಿ ಸೈಬರ್ ಕೇಂದ್ರಗಳು ಪಡೆದುಕೊಂಡವು. ಸೈಬರ್ ಕೇಂದ್ರಗಳು ಪ್ರತೀ ಅರ್ಜಿಗೆ ವಿವಿಧ ರೀತಿಯಲ್ಲಿ ಶುಲ್ಕವನ್ನು ವಸೂಲಿ ಮಾಡಿದವು. ಕೆಲವೆಡೆ ಅರ್ಜಿ ಸಲ್ಲಿಕೆಗೆ ಭಾರೀ ಮೊತ್ತವನ್ನು ವಸೂಲಿ ಮಾಡುತ್ತಿರುವ ಆರೋಪ ಕೇಳಿ ಬಂದಿವೆ.

ಆಯ್ಕೆ ಹೇಗೆ?

ಪ್ರತಿಯೊಂದು ಯೋಜನೆಯೂ ವಿಧಾನಸಭಾವಾರು ಹಂಚಿಕೆಯಾಗಲಿದೆ. ಶ್ರಮಶಕ್ತಿ, ಕಿರುಸಾಲ, ಗಂಗಾ ಕಲ್ಯಾಣ, ಸ್ವ-ಉದ್ಯೋಗ ಯೋಜನೆಯ ಅರ್ಜಿಯನ್ನು ಆಯಾ ಕ್ಷೇತ್ರದ ಶಾಸಕರ ಅಧ್ಯಕ್ಷತೆಯ ಸಮಿತಿಯು ಆಯ್ಕೆ ಮಾಡಲಿದೆ. ಅರಿವು ಯೋಜನೆಯ ಅರ್ಜಿಯನ್ನು ಜಿಪಂನ ಸಿಇಒ ಅಧ್ಯಕ್ಷತೆಯ ಸಮಿತಿಯು ಆಯ್ಕೆ ಮಾಡಲಿದೆ. ಉಳಿದಂತೆ ಇತರ ಯೋಜನೆಗಳ ಅರ್ಜಿಯನ್ನು ಜಿಲ್ಲಾಧಿಕಾರಿಯ ಅಧ್ಯಕ್ಷತೆಯ ಸಮಿತಿ ಆಯ್ಕೆ ಮಾಡಲಿದೆ.

ದ.ಕ.ಜಿಲ್ಲೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಕೆಯಾಗಿರುವುದು ಸಂತೋಷದ ವಿಚಾರ. ಆದರೆ, ನಮ್ಮ ಆರ್ಥಿಕ ಗುರಿಯು ಅಷ್ಟಿಲ್ಲದ ಕಾರಣ ಅರ್ಜಿ ಸಲ್ಲಿಸಿದವರಿಗೆಲ್ಲ ಸದ್ಯ ಯೋಜನೆಗಳನ್ನು ತಲುಪಿಸಲಾಗದ ಬೇಸರವಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಅವಕಾಶವಿದ್ದ ಕಾರಣ ನಗರ ಮತ್ತು ಗ್ರಾಮಾಂತರ ಪ್ರದೇಶದ ಅರ್ಜಿದಾರರು ಅಲ್ಲಲ್ಲಿನ ಸೈಬರ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಅವರಿಗೆ ಸಲ್ಲಿಸಬೇಕಾದ ಅರ್ಜಿಗಳ ಗುರಿಯ ಬಗ್ಗೆ ಮಾಹಿತಿ ಇಲ್ಲದ ಕಾರಣ ಅರ್ಜಿ ಸಲ್ಲಿಸಿಯೂ ಯೋಜನೆಯು ಸಿಗದಿದ್ದರೆ ನಿರಾಸೆೆಯಾಗುವ ಸಾಧ್ಯತೆಯೇ ಹೆಚ್ಚು. ಹಾಗಾಗಿ ಅರ್ಹ ಫಲಾನುಭವಿಗಳಿಗೆ ಯೋಜನೆ ತಲುಪಿಸುವ ನಿಟ್ಟಿನಲ್ಲಿ ಸಚಿವರ ಜೊತೆ ಈ ಬಗ್ಗೆ ಮಾತುಕತೆ ನಡೆಸಲಾಗುವುದು. ಹೆಚ್ಚುವರಿ ಅನುದಾನ ಕೇಳಲಾಗುವುದು.

-ಎಂ.ಎ.ಗಫೂರ್, ಅಧ್ಯಕ್ಷರು, ರಾಜ್ಯ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ

ಈ ಹಿಂದೆ ನಿಗಮದ ಯೋಜನೆಗಳ ಬಗ್ಗೆ ಜಿಲ್ಲೆಯ ಜನರಿಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ನಾನು ಜವಾಬ್ದಾರಿ ವಹಿಸಿಕೊಂಡ ಬಳಿಕ ಮಾಧ್ಯಮಗಳ, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ಆರಂಭಿಸಿದೆವು. ಅಲ್ಲದೆ, ಶಿಕ್ಷಣ ಸಂಸ್ಥೆಗಳ, ಸಾಮಾಜಿಕ ಸಂಘಟನೆಗಳ ಸಹಕಾರದಿಂದ ಅಲ್ಲಲ್ಲಿ ಮಾರ್ಗದರ್ಶನ ಶಿಬಿರ ಹಮ್ಮಿಕೊಂಡೆವು. ಅದು ನಮಗೆ ತುಂಬ ಪ್ರಯೋಜನವಾಗಿದೆ. ಕಳೆದ ಬಾರಿ ನಮಗೆ 35 ಕೋ.ರೂ. ಆರ್ಥಿಕ ಗುರಿ ಇತ್ತು. ಈ ಬಾರಿ ಅದರ ಅರ್ಧದಷ್ಟಿಲ್ಲ. ಅಲ್ಲದೆ, ನಮಗೆ ಸಲ್ಲಿಕೆಯಾಗಬೇಕಾದ ಗುರಿ ಮೀರಿದ ಅರ್ಜಿಗಳು ಸಲ್ಲಿಕೆಯಾಗಿವೆ. ಇದೀಗ ಅರ್ಜಿ ಸಲ್ಲಿಕೆಯ ಅವಧಿಯನ್ನು ಮತ್ತೆ ವಿಸ್ತರಿಸಿದ ಕಾರಣ ಅರ್ಜಿಗಳ ಸಂಖ್ಯೆ ಹೆಚ್ಚಾಗಬಹುದು. ಆದರೆ, ನಿಗಮವು ನಮಗೆ ನೀಡಿದ ಆರ್ಥಿಕ ಶಕ್ತಿ ಅಷ್ಟಿಲ್ಲದ ಕಾರಣ ಅರ್ಜಿ ಸಲ್ಲಿಸಿದ ಅರ್ಹರನ್ನೂ ಫಲಾನುಭವಿಗಳನ್ನಾಗಿಸಲು ಸಾಧ್ಯವಾಗದು. ಹಾಗಾಗಿ ,ನಾವು ನಮ್ಮ ಸಮಸ್ಯೆಯನ್ನು ನಿಗಮದ ಹಿರಿಯ ಅಧಿಕಾರಿಗಳ, ನಿಗಮದ ಅಧ್ಯಕ್ಷರಿಗೆ ತಿಳಿಸಿದ್ದೇವೆ. ಕೆಲವು ವರ್ಷಗಳ ಹಿಂದೆ ಸಲ್ಲಿಕೆಯಾಗಬೇಕಾದ ಗುರಿಯಷ್ಟು ಅರ್ಜಿ ಸಲ್ಲಿಕೆಯಾಗುತ್ತಿರಲಿಲ್ಲ. ಈ ಬಾರಿ ಗುರಿ ದಾಟಿದೆ. ಸರಕಾರ ಆರ್ಥಿಕ ಗುರಿ ಹೆಚ್ಚಿಸಿದರೆ ಅನುಕೂಲವಾದೀತು.

-ಶ್ರೀಧರ ಭಂಡಾರಿ, ಜಿಲ್ಲಾ ವ್ಯವಸ್ಥಾಪಕರು, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ದ.ಕ.ಜಿಲ್ಲೆ

Writer - ಹಂಝ ಮಲಾರ್

contributor

Editor - ಹಂಝ ಮಲಾರ್

contributor

Similar News