ವಿಜ್ಞಾನದ ಅವಿಷ್ಕಾರದಿಂದ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಮಹತ್ತರ ಪ್ರಗತಿ ಡಾ.ವಿಜಯ ಕುಮಾರ್

Update: 2018-09-03 07:29 GMT

ಮಂಗಳೂರು, ಸೆ.3: ವಿಜ್ಞಾನದಲ್ಲಿ ನಿರಂತರ ಅವಿಷ್ಕಾರಗಳಿಂದಾಗಿ ಇಂದು ಕ್ಯಾನ್ಸರ್‌ನಂತಹ ಮಾರಕ ರೋಗದ ಚಿಕಿತ್ಸೆಯಲ್ಲೂ ಮಹತ್ತರ ಪ್ರಗತಿಯನ್ನು ಕಾಣಲು ಸಾಧ್ಯವಾಗಿದೆ ಎಂದು ಮಂಗಳೂರು ಯೆನೆಪೊಯ ವಿವಿಯ ಉಪ ಕುಲಪತಿ ಡಾ.ಎಂ.ವಿಜಯ ಕುಮಾರ್ ಅಭಿಪ್ರಾಯಿಸಿದ್ದಾರೆ. 

ಅವರು ಇಂದು ಸಂತ ಅಲೋಶಿಯಸ್ ಕಾಲೇಜಿನ ದೀನ್ ದಯಾಳ್ ಉಪಾಧ್ಯಾಯ ಕೌಶಲ್ ಕೇಂದ್ರವು ಅನ್ವಯಿಕ ವಿಜ್ಞಾನ ವಿಭಾಗಗಳ ಸಹಯೋಗದೊಂದಿಗೆ ‘ನ್ಯಾನೋ ಔಷಧಿ ಮತ್ತು ಔಷಧಿ ಹಂಚಿಕೆ ಕುರಿತ ಇತ್ತೀಚಿನ ಅನ್ವೇಷಣೆಗಳು’ ಎಂಬ ವಿಷಯದ ಬಗ್ಗೆ ಆಯೋಜಿಸಿರುವ ರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಕ್ಯಾನ್ಸರ್ ಚಿಕಿತ್ಸೆಗೆ ಸಂಬಂಧಿಸಿ ಕಿಮೋಥೆರಪಿಯಿಂದ ಹಿಡಿದು ಇದೀಗ ನ್ಯಾನೋ ಚಿಕಿತ್ಸೆಯೂ ಪರಿಣಾಮಕಾರಿಯಾಗಿ ಬಳಕೆಯಲ್ಲಿದೆ. ವಿಶೇಷವಾಗಿ ವಿಜ್ಞಾನದ ವಿದ್ಯಾರ್ಥಿಗಳಿಗೆ ಕಲಿಕೆ ಎಂಬುದು ನಿರಂತರವಾಗಿದ್ದಾಗ ಮಾತ್ರವೇ ಹೊಸ ಅನ್ವೇಷಣೆಗಳು ಹುಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದರು. ತಮಿಳುನಾಡಿನ ಕೊಮಂಬತ್ತೂರಿನ ಡಾ.ಎನ್.ಜಿ.ಪಿ.ಆರ್ಟ್ಸ್ ಮತ್ತು ಸೈನ್ಸ್ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲ ಡಾ.ವಿ.ರಾಜೇಂದ್ರನ್ ಉಪಸ್ಥಿತರಿದ್ದರು.

ಕಾಲೇಜಿನ ಪ್ರಾಂಶುಪಾಲ ಡಾ.ಪ್ರವೀಣ್ ಮಾರ್ಟಿಸ್ ಮಾತನಾಡಿ, ನ್ಯಾನೋ ವಿಜ್ಞಾನ ಕ್ಷೇತ್ರದಲ್ಲಿ ವಿಫುಲ ಅವಕಾಶಗಳಿದ್ದು, ಇದೊಂದು ಕುತೂಹಕಲಕಾರಿ ಕ್ಷೇತ್ರ ಕೂಡಾ ಆಗಿದೆ ಎಂದರು. ಮೂಲ ವಿಜ್ಞಾನ ಹಾಗೂ ಅನ್ವಯಿಕ ವಿಜ್ಞಾನದ ನಡುವೆ ಸಾಕಷ್ಟು ಅಂತರವಿದ್ದು, ಅದನ್ನು ನೀಗಿಸುವ ನಿಟ್ಟಿನಲ್ಲಿ ವಿಜ್ಞಾನದ ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಿಕೊಳ್ಳಬೇಕು ಎಂದು ಅವರು ಈ ಸಂದರ್ಭ ಸಲಹೆ ನೀಡಿದರು.

ಕಾಲೇಜಿನ ಎಲ್.ಎಫ್.ರಸ್ಕೀನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂತ ಅಲೋಶಿಯಸ್ ಸಮೂಹ ಸಂಸ್ಥೆಗಳ ನಿರ್ದೇಶಕ, ರೆಕ್ಟರ್ ರೆ.ಡಾ.ಡೈನೇಶಿಯಸ್ ವಾಝ್ ಅಧ್ಯಕ್ಷತೆ ವಹಿಸಿ ಮಾತನಾಡಿ, ನ್ಯಾನೋ ಸೇರಿದಂತೆ ತಂತ್ರಜ್ಞಾನಗಳು ಸಾಮಾಜಿಕವಾಗಿ ಕೆಳಸ್ತರದ, ದುರ್ಬಲರಿಗೆ ನೆರವಾಗುವ ನಿಟ್ಟಿನಲ್ಲಿ ಬಳಕೆಯಾಗಬೇಕು ಎಂದು ಕರೆ ನೀಡಿದರು.

ಉದ್ಘಾಟನಾ ಸಮಾರಂಭದ ಬಳಿಕ ನ್ಯಾನೋ ಕ್ಷೇತ್ರದ ನುರಿತ ತಜ್ಞರು ವಿವಿಧ ವಿಷಯಗಳಲ್ಲಿ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಡಾ.ರೊನಾಲ್ಡ್ ನಝರೆತ್, ಫಾ.ಲಿಯೋ ಡಿಸೋಜ, ಫಾ. ಪ್ರದೀಪ್ ಸಿಕ್ವೇರ, ಡಾ.ಎ.ಎಂ. ನರಹರಿ ಮೊದಲಾದವರು ಉಪಸ್ಥಿತರಿದ್ದರು. ಸಮ್ಮೇಳನದ ಸಂಚಾಲಕ ಡಾ.ಆದರ್ಶ ಗೌಡ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News