ಫ್ರಾನ್ಸ್‌ ಬಾನಂಗಳದಲ್ಲಿ ತುಳುನಾಡಿನ ‘ಕೋರಿದಕಟ್ಟ’ ಗಾಳಿಪಟ!

Update: 2018-09-03 09:35 GMT

ಮಂಗಳೂರು, ಸೆ.3: ಫ್ರಾನ್ಸ್‌ನ ಡಿಪಿ ನಗರದಲ್ಲಿ ಸೆಪ್ಟಂಬರ್ 8ರಿಂದ 16ರವರೆಗೆ ನಡೆಯಲಿರುವ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಟೀಮ್ ಮಂಗಳೂರು ಪ್ರಸ್ತುತಪಡಿಸಲಿರುವ ತುಳುನಾಡಿನ ‘ಕೋರಿದಕಟ್ಟ’ ಗಾಳಿಪಟ ಪ್ರದರ್ಶನಗೊಳ್ಳಲಿದೆ.

ಸುದ್ದಿಗೋಷ್ಠಿಯಲ್ಲಿಂದು ಉತ್ಸವದ ಬಗ್ಗೆ ಮಾಹಿತಿ ನೀಡಿದ ಟೀಮ್ ಮಂಗಳೂರು ಸಂಚಾಲಕ ಬಿ. ಸವೇಶ್ ರಾವ್, ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುವ ಈ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ನಾಲ್ಕನೆ ಬಾರಿಗೆ ಉತ್ಸವದ ಪೋಸ್ಟರ್ ವಿನ್ಯಾಸಗೊಳಿಸುವ ಅವಕಾಶವನ್ನು ಖ್ಯಾತ ಕಲಾವಿದ ಹಾಗೂ ಪರಿಸರವಾದಿ ದಿನೇಶ್ ಹೊಳ್ಳ ಪಡೆದಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಉತ್ಸವಕ್ಕಾಗಿ ತಯಾರಿಸಲಾದ ಪೋಸ್ಟರ್‌ನಲ್ಲಿ ಜಾಗತಿಕ ತಾಪಮಾನಕ್ಕೆ ನಾವೆಲ್ಲರೂ ಕಾರಣಕರ್ತರು ಎಂಬುದನ್ನು ಬಿಂಬಿಸಿರುವುದಲ್ಲದೆ, ಅದಕ್ಕೆ ಪರ್ಯಾಯವನ್ನು ನಾವೇ ಕಂಡುಕೊಳ್ಳಬೇಕೆಂಬ ಒತ್ತಾಸೆಯೊಂದಿಗೆ ನೀರು ಮತ್ತು ಕಾಡಿನ ಸಂರಕ್ಷಣೆಯ ಅಗತ್ಯವಿದೆ ಎಂಬ ಸಾಂಕೇತಿಕ ಸಂದೇಶವನ್ನೂ ನೀಡಲಾಗಿದೆ. ವಿವಿಧ ರಾಷ್ಟ್ರಗಳ ಹಲವು ಕಲಾವಿದರಿಂದ ನಾನಾ ರೀತಿಯ ಪೋಸ್ಟರ್‌ಗಳು ಬಂದಿದ್ದರೂ ಉತ್ಸವದ ಆಯೋಜಕರು ಈ ಬಾರಿಯೂ ದಿನೇಶ್ ಹೊಳ್ಳ ಅವರ ಪೋಸ್ಟರ್ ಆಯ್ಕೆ ಮಾಡಿ ಗೌರವ ನೀಡಿದ್ದಾರೆ ಎಂದು ಅವರು ಹೇಳಿದರು.

ಡೀಪಿ ನಗರದ ಮೇಯರ್ ಸ್ಯಾಡಿನ್ ಆಡಿಗೋರವರ ಆಹ್ವಾನದ ಮೇರೆಗೆ ಭಾರತದ ಪ್ರತಿನಿಧಿಗಳಾಗಿ ತಂಡದ ದಿನೇಶ್ ಹೊಳ್ಳ ಹಾಗೂ ಸತೀಶ್ ರಾವ್ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಟೀಮ್ ಮಂಗಳೂರು ತಂಡವು ಈ ಹಿಂದೆ ಫ್ರಾನ್ಸ್, ಇಂಗ್ಲೆಂಡ್, ಕೆನಡ, ಇಟಲಿ, ದಕ್ಷಿಣ ಕೊರಿಯಾ, ಥಾಯ್ಲೆಂಡ್, ಹಾಂಕಾಂಗ್, ಶ್ರೀಲಂಕಾ, ದುಬೈ, ಕತರ್‌ನಲ್ಲಿ ಜರುಗಿದ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಭಾಗವಹಿಸಿ ಯಕ್ಷಗಾನ, ಕಥಕ್ಕಳಿ, ಭರತನಾಟ್ಯ, ಪುಷ್ಪಕ ವಿಮಾನ, ಭೂತದ ಕೋಲ, ಗರುಡ, ಗಜರಾಜ ಮೊದಲಾದ ಗಾಳಿಪಟ ವಿನ್ಯಾಸಗಳನ್ನು ವಿದೇಶಿ ಬಾನಂಗಳದಲ್ಲಿ ಪ್ರದರ್ಶಿಸಿತ್ತು. ಈ ಬಾರಿ ತುಳುನಾಡಿನ ಕೋಳಿ ಅಂಕದ ಗಾಳಿಪಟವನ್ನು ರೋಕಾಕೋ ಮಾದರಿಯಲ್ಲಿ ರಚಿಸಲಾಗಿದೆ. ಆರು ಅಡಿ ಎತ್ತರದ ಈ ಗಾಳಿಪಟದಲ್ಲಿ ಕೋಳಿ ಅಂಕದ ಜತೆ ಪಶ್ಚಿಮ ಘಟ್ಟ, ಸೂರ್ಯನ ಪ್ರತಿಬಿಂಬದೊಂದಿಗೆ ದೇಶದ ಪತಾಕೆಯನ್ನು ಪ್ರತಿನಿಧಿಸುವ ಕೇಸರಿ, ಬಿಳಿ ಹಾಗೂ ಹಸಿರು ಬಣ್ಣವನ್ನು ಸಾಂಕೇತಿಸಲಾಗಿದೆ ಎಂದು ಕಲಾವಿದ ದಿನೇಶ್ ಹೊಳ್ಳ ವಿವರ ನೀಡಿದರು.

ಉತ್ಸವದ ಉದ್ಘಾಟನಾ ಸಮಾರಂಭದಲ್ಲಿ ನಡೆಯಲಿರುವ ಪೆರೇಡ್‌ನಲ್ಲಿ ತುಳುನಾಡಿನ ಸಾಂಪ್ರದಾಯಿಕ ಉಡುಗೆಯೊಂದಿಗೆ ಮುಟ್ಟಾಳೆಯನ್ನು ಧರಿಸಿ ತುಳುನಾಡಿನ ಸಂಸ್ಕೃತಿಯನ್ನು ಪರಿಚಯಿಸಲಾಗುವುದು ಎಂದು ಅವರು ಹೇಳಿದರು.

ಹಾಲಕ್ಕಿ ಚಿತ್ರಕಲಾ ಪ್ರದರ್ಶನ

ಪಶ್ಚಿಮಘಟ್ಟದ ಬುಡಕಟ್ಟು ಜನಾಂಗದ ಹಾಲಕ್ಕಿ ಸಮುದಾಯದವರ ಬದುಕಿನ ಬಗ್ಗೆ ಹಾಗೂ ಅವರ ಅಡವಿ ರಕ್ಷಣೆ ಮತ್ತು ಕಾಳಜಿಯ ಬಗ್ಗೆ ಅವರ ಜಾನಪದ ಹಾಡುಗಳ ಬಗ್ಗೆ ಬುಡಕಟ್ಟು ನಾಯಕಿ ಸುಕ್ರಿ ಬೊಮ್ಮಗೌಡರನ್ನು ಕೇಂದ್ರೀಕರಿಸಿ 46 ಕಲಾಕೃತಿಗಳನ್ನು ರಚಿಸಲಾಗಿದೆ. ಅವುಗಳನ್ನು ಉತ್ಸವದಲ್ಲಿ ಹಾಲಕ್ಕಿ ಚಿತ್ರಕಲಾ ಪ್ರದರ್ಶನದ ಶೀರ್ಷಿಕೆಯಡಿ ಪ್ರದರ್ಶಿಸಲಾಗುವುದು.

ಪ್ರದರ್ಶನದಲ್ಲಿ ಕಲಾಕೃತಿಗಳ ಜತೆಗೆ ಭಾರತೀಯ ಬುಡಕಟ್ಟು ಸಮುದಾಯದವರ ಸಂಸ್ಕೃತಿ, ಪದ್ಧತಿ, ಜೀವನ ಶೈಲಿಯ ಬಗ್ಗೆ ಮಾಹಿತಿ ಹಾಗೂ ವಿವರಣೆ ನೀಡಲಾಗುವುದು. ಕಲಾಕೃತಿಗಳಿಂದ ಲಭಿಸಿದ ಆರ್ಥಿಕ ಮೊತ್ತದಲ್ಲಿ ಶೇ.35ರಷ್ಟನ್ನು ಪಶ್ಚಿಮ ಘಟ್ಟದ ಬುಡಕಟ್ಟು ಜನಾಂಗದ ಮಕ್ಕಳ ಶಿಕ್ಷಣಕ್ಕೆ ಒದಗಿಸಲಾಗುವುದು ಎಂದು ದಿನೇಶ್ ಹೊಳ್ಳ ತಿಳಿಸಿದರು.

ಅಡವಿ ಮತ್ತು ಜಲ ರಕ್ಷಣೆಯ ವಿಶೇಷ ಕಲಾಕೃತಿ
ಅಡವಿ ನಾಶ ಮತ್ತು ನೀರಿನ ಕೊರತೆಯನ್ನು ಇಡೀ ವಿಶ್ವ ಎದುರಿಸುತ್ತಿದೆ. ಈ ಉತ್ಸವದಲ್ಲಿ ಭಾಗವಹಿಸುವತ್ತಿರುವ 48 ರಾಷ್ಟ್ರಗಳ ರಾಷ್ಟ್ರಧ್ವಜದ ಬಣ್ಣಗಳನ್ನು ಸೇರಿಸಿ ಒಂದು ವಿಶೇಷವಾದ ಕಲಾಕೃತಿಯನ್ನು ರಚಿಸಲಿದ್ದು, ಆ ಕಲಾಕೃತಿಗೆ ಆ ರಾಷ್ಟ್ರಗಳ ತಂಡಗಳ ಸಹಿ ಹಾಕಿಸಿ ‘ನೀರಿನ ಮತ್ತು ಕಾನನ ರಕ್ಷಣೆಯಲ್ಲಿ ನಾವೆಲ್ಲರೂ ಪ್ರಧಾನ ಪಾತ್ರಧಾರರಾಗೋಣ’ ಎಂಬ ವಿಶೇಷ ಸಂದೇಶದ ಮೂಲಕ ಸಂಘಟಕರಿಗೆ ಕಲಾಕೃತಿಯನ್ನು ಹಸ್ತಾಂತರ ಮಾಡಲಾಗುವುದು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಲಾವಿದರಾದ ಪ್ರಾಣೇಶ್, ಗಿರಿಧರ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News