"ನಾರಾಯಣ ಗುರುಗಳಂತಹ ಸಮಾಜ ಸುಧಾರಕರಿಂದ ಶೋಷಿತ ಸಮುದಾಯಗಳಿಗೆ ಇಂದು ಸಮನಾದ ಅವಕಾಶ ಸಿಕ್ಕಿದೆ"

Update: 2018-09-03 12:15 GMT

ಬೆಳ್ತಂಗಡಿ, ಸೆ. 3: ನಮ್ಮ ಹಿರಿಯರು ಇಡೀ ಜಗತ್ತಿಗೆ ಒಳಿತಾಗಲಿ ಎಂದು ಹಾರೈಸಿದವರು. ಒಡೆದು ಹೋಗಿದ್ದ ಭಾರತವನ್ನು ಹಾಗೂ ಅದರ ವೈವಿಧ್ಯತೆಗಳನ್ನು ಒಂದುಗೂಡಿಸುವ ಕಾರ್ಯವನ್ನು ನಮ್ಮ ಸಂವಿಧಾನವು ಮಾಡಿತ್ತು. ಸಂವಿಧಾನವು ಒದಗಿಸಿದ ಅವಕಾಶಗಳಿಂದಾಗಿ ನಾರಾಯಣ ಗುರುಗಳಂತಹ ಸಮಾಜ ಸುಧಾರಕರಿಂದಾಗಿ ಶೋಷಿತ ಸಮುದಾಯಗಳು ಇಂದು ಸಮನಾದ ಅವಕಾಶವನ್ನು ಪಡೆದುಕೊಂಡು ಉತ್ತಮ ಬದುಕನ್ನು ನಡೆಸುವಂತಾಗಿದೆ ಎಂದು ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್ ಹೇಳಿದರು.

ಶ್ರೀರಾಮಕ್ಷೇತ್ರ ಮಹಾ ಸಂಸ್ಥಾನಮ್ ಕನ್ಯಾಡಿಯ ಆತ್ಮಾನಂದ ಸರಸ್ವತಿ ವೇದಿಕೆಯಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಧರ್ಮಸಂಸದ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅವರು ಮಾತನಾಡಿದರು.

ನಮ್ಮ ದೇಶದಲ್ಲಿ ಬೇರೆ ಬೇರೆ ಭಾಗಗಳಲ್ಲಿ ನಾರಾಯಣ ಗುರುಗಳು, ಬಸವಣ್ಣ ಅವರಂತಹ ಸಮಾಜ ಸುಧಾರಕರು ಬಂದು ಸಮಾಜದಲ್ಲಿ ಹೊಸ ಬದಲಾವಣೆಗಳನ್ನು ತಂದಿದ್ದಾರೆ, ಅದನ್ನು ಸ್ವೀಕರಿಸಿ ಅವರ ಆದರ್ಶಗಳಲ್ಲಿ ನಾವು ಮುಂದುವರಿಯಬೇಕಾಗಿದೆ. ಅಂತಹ ಸಮಾಜ ಸುಧಾರಕರಿಂದಾಗಿ ದಕ್ಷಿಣ ಭಾರತ ಹೆಚ್ಚು ವೇಗವಾಗಿ ಅಭಿವೃದ್ಧಿಯತ್ತ ಸಾಗಲು ಸಾಧ್ಯವಾಗಿದೆ ಎಂದರು. ಇತಿಹಾಸವನ್ನು ಕಲಿಯುವುದು ಬೇಡ ಎನ್ನುವುದು ಸರಿಯಾದ ವಿಚಾರವಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ ಅವರು ನಾವು ಕಳೆದು ಹೋದ ಇತಿಹಾಸವನ್ನು ಕಲಿತು ಅದರಿಂದ ತಿದ್ದಿಕೊಂಡು ಮುಂದುವರಿಯಬೇಕಾದ ಅಗತ್ಯವಿದೆ ಎಂದರು.

ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವುದು, ಹಿಂಸೆ, ಶೋಷಣೆ, ನೋವುಗಳನ್ನು ಉಂಟು ಮಾಡುವುದಕ್ಕೆ ಧರ್ಮವನ್ನು ಬಳಸುವುದು ಎಂದಿಗೂ ಸರಿಯಾದುದಲ್ಲ. ನಮ್ಮ ದೇಶದಲ್ಲಿ ಎಲ್ಲರೂ ಸಮಾನರು. ಸಮಾನವಾದ ಹಕ್ಕುಗಳು ಎಲ್ಲರಿಗೂ ಇದೆ. ಎಲ್ಲ ಧರ್ಮಗಳಲ್ಲಿರುವ ಒಳಿತನ್ನು ನಮ್ಮ ಮಕ್ಕಳಿಗೆ ಕಲಿಸೋಣ ಆಗ ಅವರು ಉತ್ತಮ ವ್ಯಕ್ತಿಗಳಾಗಿ ಬೆಳೆಯಲು ಸಾಧ್ಯ ಎಂದರು.

ನಮ್ಮ ಜನರು ಇದೀಗ ಖಾದಿ ಹಾಗೂ ಕಾಕಿಯ ಮೇಲೆ ನಂಬಿಕೆಯನ್ನು ಕಳೆದುಕೊಳ್ಳುತ್ತಿದ್ದಾರೆ, ಆದರೆ ಕಾವಿಯ ಮೇಲೆ ದೇಶದ ಜನರು ಇನ್ನೂ ನಂಬಿಕೆಯಿರಿಸಿದ್ದಾರೆ, ಸ್ವಾಮೀಜೀಗಳು ಆ ನಂಬಿಕೆಯನ್ನು ಉಳಿಸಿಕೊಳ್ಳುವ ಕಾರ್ಯವನ್ನು ಮಾಡಬೇಕಾಗಿದೆ. ಈ ಧರ್ಮ ಸಮ್ಮೇಳನದಲ್ಲಿ ಒಳ್ಳೆಯ ನಿರ್ಣಯಗಳನ್ನು ತೆಗೆದು ಶಾಂತಿ, ನೆಮ್ಮದಿ ಸಹಬಾಳ್ವೆಯ ಸಂದೇಶವನ್ನು ಜಗತ್ತಿಗೆ ನೀಡಲಿ ಎಂದು ಹಾರೈಸಿದರು.

ವೇದಿಕೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಬಿ.ಕೆ. ಹರಿಪ್ರಸಾದ್

ನಾರಾಯಣ ಗುರುಗಳ ಮಾರ್ಗದರ್ಶನದಲ್ಲಿ ಅವರ ಆಶಯಗಳ ಈಡೇರಿಕೆಗಾಗಿ ಕಾರ್ಯ ನಿರ್ವಹಿಸುತ್ತಿರುವ ಕನ್ಯಾಡಿಯ ರಾಮ ಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಹಾಗೂ ಆಮಂತ್ರಣದಲ್ಲಿ ಶ್ರೀ ನಾರಾಯಣಗುರುಗಳ ಬಗ್ಗೆ ಪ್ರಸ್ತಾಪವೇ ಇಲ್ಲದಿರುವುದು ನೋವನ್ನು ತಂದಿದೆ ಎಂದು ಅವರು ವೇದಿಕೆಯಲ್ಲಿಯೇ ಅಭಿಪ್ರಾಯ ವ್ಯಕ್ತಪಡಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News