ಮುಖ್ಯಮಂತ್ರಿ, ಇಬ್ಬರು ಸಚಿವರ ಗೈರು : ಗೋವಾದಲ್ಲಿ ರಾಷ್ಟ್ರಪತಿ ಆಡಳಿತಕ್ಕೆ ಕಾಂಗ್ರೆಸ್ ಆಗ್ರಹ

Update: 2018-09-03 15:05 GMT

ಪಣಜಿ, ಸೆ. 3: ಅಮೆರಿಕದಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಗೈರಾಗಿರುವುದರಿಂದ ಗೋವಾದಲ್ಲಿ ರಾಷ್ಟ್ರಪತಿ ಆಡಳಿತ ಹೇರಬೇಕು ಎಂದು  ಕಾಂಗ್ರೆಸ್ ಸೋಮವಾರ ಆಗ್ರಹಿಸಿದೆ.

ರಾಜ್ಯ ‘ಸಾಂವಿಧಾನಿಕ ಬಿಕ್ಕಟ್ಟು’ ಎದುರಿಸುತ್ತಿದೆ ಎಂದು ಹೇಳಿರುವ ಕಾಂಗ್ರೆಸ್ ವಕ್ತಾರ ರಮಾಕಾಂತ್ ಖಾಲಪ್, ಪಕ್ಷದ ಆಗ್ರಹವಾದ ರಾಷ್ಟ್ರಪತಿ ಆಡಳಿತ ಹೇರಿಕೆಗೆ ಒತ್ತಾಯಿಸಲು ರಾಜ್ಯಪಾಲ ಮೃದುಲಾ ಸಿನ್ಹಾ ಅವರ ಭೇಟಿಗೆ ಅವಕಾಶ ಕೋರಿದ್ದೇನೆ ಎಂದಿದ್ದಾರೆ.

ಪಾರಿಕ್ಕರ್ ಅವರು ತಮ್ಮ ಹೊಣೆಗಾರಿಕೆಯನ್ನು ಯಾರೊಬ್ಬರಿಗೂ ಹಸ್ತಾಂತರಿಸದೆ ಅನಾರೋಗ್ಯದ ಕಾರಣಕ್ಕಾಗಿ ನಿರಂತರ ಗೈರಾಗುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಗೋವಾದ ವಿದ್ಯುತ್ ಸಚಿವ ಪಾಂಡುರಂಗ ಮಡ್ಕೈಕರ್ ಹಾಗೂ ನಗರಾಭಿವೃದ್ಧಿ ಸಚಿವ ಫ್ರಾನ್ಸಿಸ್ ಡಿ’ಸೋಜಾ ಅವರು ಕೂಡ ಅನಾರೋಗ್ಯದ ಕಾರಣದಿಂದ ಗೈರಾಗಿದ್ದಾರೆ. ಮುಖ್ಯಮಂತ್ರಿ ಹಾಗೂ ಈ ಸಚಿವರು ಹಾಜರಾಗುವುದಕ್ಕೆ ಯಾವುದೇ ಗಡು ಇಲ್ಲ. ಸಂವಿಧಾನ ಬಿಕ್ಕಟ್ಟು ಎದುರಿಸುತ್ತಿರುವ ಈ ಸಂದರ್ಭ ರಾಜ್ಯಪಾಲೆ ಮೃದುಲಾ ಸಿನ್ಹಾ ಮಧ್ಯಪ್ರವೇಶಿಸಲು ಇದು ಉತ್ತಮ ಸಮಯ ಎಂದು ಅವರು ಹೇಳಿದ್ದಾರೆ.

ಪೇಂಕ್ರಿಯಾಸ್ ತೊಂದರೆ ಹಿನ್ನೆಲೆಯಲ್ಲಿ ಚಿಕಿತ್ಸೆ ಪಡೆಯಲು 62ರ ಹರೆಯದ ಪಾರಿಕ್ಕರ್ ಈ ವರ್ಷ ಮಾರ್ಚ್‌ನಿಂದ ಜೂನ್ ವರೆಗೆ ಅಮೆರಿಕದಲ್ಲಿ ಇದ್ದರು. ವೈದ್ಯಕೀಯ ಸಲಹೆ ಹಿನ್ನೆಲೆಯಲ್ಲಿ ಅವರು ಮತ್ತೆ ಆಗಸ್ಟ್ 10ರಂದು ಅಮೆರಿಕಕ್ಕೆ ತೆರಳಿದ್ದರು ಹಾಗೂ ಆಗಸ್ಟ್ 22ಕ್ಕೆ ಹಿಂದಿರುಗಿದ್ದರು. ಮರು ದಿನ ಮುಂಬೈಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಅನಂತರ ವೈದ್ಯರ ಸಲಹೆ ಮೇರೆಗೆ ಗುರುವಾರ ಮತ್ತೆ ಅಮೆರಿಕಕ್ಕೆ ತೆರಳಿದ್ದಾರೆ. ಸೆಪ್ಟಂಬರ್ 8ರಂದು ಅವರು ಹಿಂದಿರುಗುವ ಸಾಧ್ಯತೆ ಇದೆ ಎಂದು ಹಿರಿಯ ಬಿಜೆಪಿ ನಾಯಕ ಹೇಳಿದ್ದಾರೆ.

ಡಿ’ಸೋಜಾ ಅವರು ಕೂಡ ಕಳೆದ ತಿಂಗಳು ವೈದ್ಯಕೀಯ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಿದ್ದಾರೆ. ಮೆದುಳಿನ ಆಘಾತದಿಂದ ಸಂತ್ರಸ್ತರಾಗಿರುವ ಮಡ್ಕೈಕರ್ ಜೂನ್ 5ರಿಂದ ಮುಂಬೈ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News