ಕೇವಲ 62 ಜವಾನ ಹುದ್ದೆಗೆ 81,700 ಪದವೀಧರರ ಅರ್ಜಿ!

Update: 2018-09-03 15:26 GMT

ಲಕ್ನೊ, ಸೆ.3: ಉತ್ತರಪ್ರದೇಶದಲ್ಲಿರುವ ನಿರುದ್ಯೋಗದ ಪರಿಸ್ಥಿತಿಗೆ ಇಲ್ಲೊಂದು ಕೈಗನ್ನಡಿಯಾಗುವ ಸುದ್ದಿಯಿದೆ. ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 62 ಜವಾನ ಹುದ್ದೆಗಳಿಗೆ ಸುಮಾರು 50,000 ಪದವೀಧರರು, 28,000 ಸ್ನಾತಕೋತ್ತರ ಪದವೀಧರರು ಹಾಗೂ 3,700 ಪಿಎಚ್‌ಡಿ ಪದವೀಧರರು ಸೇರಿದಂತೆ 81,700 ಪದವೀಧರರು ಅರ್ಜಿ ಸಲ್ಲಿಸಿದ್ದಾರೆ.

ಪೊಲೀಸ್ ಇಲಾಖೆಯ ಟೆಲಿಕಾಂ ವಿಭಾಗದಲ್ಲಿ ಮೆಸೆಂಜರ್ ಹುದ್ದೆಗೆ ಕನಿಷ್ಟ ವಿದ್ಯಾರ್ಹತೆ 5ನೇ ತರಗತಿ ಪಾಸಾಗಿರಬೇಕು. ಆರಂಭಿಕ ವೇತನ 20,000 ರೂ. ಆದರೆ ಈಗ ಉನ್ನತ ಪದವೀಧರರೂ ಅರ್ಜಿ ಸಲ್ಲಿಸಿರುವ ಕಾರಣ ನೇಮಕಾತಿ ಪ್ರಕ್ರಿಯೆಯನ್ನು ಅಧಿಕಾರಿಗಳು ಮುಂದೂಡಿದ್ದಾರೆ. 62 ಹುದ್ದೆಗಳಿಗೆ 93,500 ಅರ್ಜಿಗಳು ದಾಖಲಾಗಿವೆ. ಇದರಲ್ಲಿ ಪದವೀಧರರು, ಸ್ನಾತಕೋತ್ತರ ಪದವೀಧರರು, ಎಂಬಿಎ, ಎಂಸಿಎ, ಪಿಎಚ್‌ಡಿ ಸೇರಿದಂತೆ ಇತರ ಉನ್ನತ ಪದವೀಧರರೂ ಸೇರಿದ್ದಾರೆ ಎಂದು ಉ.ಪ್ರ. ಪೊಲೀಸ್ ಇಲಾಖೆಯ ಟೆಲಿಕಾಂ ವಿಭಾಗದ ಮಹಾನಿರ್ದೇಶಕ ಪ್ರಮೋದ್ ಕುಮಾರ್ ತಿವಾರಿ ತಿಳಿಸಿದ್ದಾರೆ. ಇದೀಗ ನೇಮಕಾತಿ ಪ್ರಕ್ರಿಯೆ ಮುಂದೂಡಲಾಗಿದ್ದು ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲು ಅನುದಾನ ಒದಗಿಸುವಂತೆ ಸರಕಾರವನ್ನು ಕೋರಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈ ಮಧ್ಯೆ, ರಾಜ್ಯದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಪರಿಸ್ಥಿತಿಗೆ ಈ ಘಟನೆ ಸಾಕ್ಷಿಯಾಗಿದೆ ಎಂದು ಸಮಾಜವಾದಿ ಪಕ್ಷದ ವಕ್ತಾರ ಅಬ್ದುಲ್ ಹಫೀಝ್ ಗಾಂಧಿ ಹೇಳಿದ್ದಾರೆ. ರಾಜ್ಯದಲ್ಲಿ ಅರ್ಹತೆಯುಳ್ಳ ಯುವಕರ ಕೊರತೆಯಿದೆ ಎಂದು ಮುಖ್ಯಮಂತ್ರಿ ಈ ಹಿಂದೆ ನೀಡಿದ್ದ ಹೇಳಿಕೆ ಸುಳ್ಳು ಎಂಬುದು ಇದೀಗ ಸಾಬೀತಾಗಿದೆ. ರಾಜ್ಯದಲ್ಲಿರುವ ಅರ್ಹ ಯುವಕರಿಗೆ ಉದ್ಯೋಗಾವಕಾಶ ಒದಗಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ಅವರು ಟೀಕಿಸಿದ್ದಾರೆ.

ಇದಕ್ಕೆ ಇದಿರೇಟು ನೀಡಿರುವ ಉ.ಪ್ರದೇಶ ಬಿಜೆಪಿ ಮುಖಂಡ ರಾಕೇಶ್ ತ್ರಿಪಾಠಿ, ಸಮಾಜವಾದಿ ಪಕ್ಷದ ಆಡಳಿತದ ಸಂದರ್ಭ ಪ್ರತಿಯೊಂದು ನೇಮಕಾತಿಯ ಸಂದರ್ಭವೂ ಅಭ್ಯರ್ಥಿಗಳು ನ್ಯಾಯಾಲಯದ ಮೊರೆ ಹೋಗಬೇಕಾದ ಪರಿಸ್ಥಿತಿಯಿತ್ತು. ಅಷ್ಟರಮಟ್ಟಿಗೆ ಅವ್ಯವಹಾರ ತಾಂಡವವಾಡುತ್ತಿತ್ತು. ಹಣ ಬಲ ಇದ್ದವರಿಗೆ ಮಾತ್ರ ಉದ್ಯೋಗ ಎಂಬ ಅಲಿಖಿತ ನಿಯಮ ಜಾರಿಯಲ್ಲಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ನೇಮಕಾತಿ ಪ್ರಕ್ರಿಯೆ ಸಂಪೂರ್ಣ ಪಾರದರ್ಶಕ ರೀತಿಯಲ್ಲಿ ನಡೆಯುತ್ತಿದೆ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News