ಬ್ರೆಝಿಲ್: ಪುರಾತನ ಮ್ಯೂಸಿಯಂನಲ್ಲಿ ಬೆಂಕಿ ಆವಘಡ

Update: 2018-09-03 16:56 GMT

 ರಿಯೊ ಡಿ ಜನೈರೊ,ಸೆ.3: ಬ್ರೆಝಿಲ್‌ನ ರಿಯೊ ಡಿ ಜನೈರೊ ನಗರದಲ್ಲಿರುವ 200 ವರ್ಷಗಳಷ್ಟು ಪುರಾತನವಾದ ವಸ್ತುಸಂಗ್ರಹಾಲಯದಲ್ಲಿ ಶನಿವಾರ ತಡರಾತ್ರಿ ಭಾರೀ ಬೆಂಕಿ ಆಕಸ್ಮಿಕ ಸಂಭವಿಸಿದೆ. ರಾತ್ರಿಯಿಡಿ ಕಟ್ಟಡವನ್ನು ಬೆಂಕಿ ಆವರಿಸಿದ್ದು, ದಟ್ಟವಾದ ಹೊಗೆ ಆಗಸದೆತ್ತರಕ್ಕೆ ಹರಡಿರುವುದು ಕಂಡುಬರುತ್ತಿತ್ತು.

 ಕಟ್ಟಡವಿಡೀ ವ್ಯಾಪಿಸಿರುವ ಬೆಂಕಿಯನ್ನು ನಂದಿಸಲು ಅಗ್ನಿಶಾಮಕದಳದ ಸಿಬ್ಬಂದಿ ಹರಸಾಹಸ ನಡೆಸಿದ್ದರು. ಈ ಪ್ರತಿಷ್ಠಿತ ವಸ್ತು ಸಂಗ್ರಾಹಲಯದಲ್ಲಿ ಈಜಿಪ್ಟ್, ಗ್ರೀಕೊ -ರೋಮನ್ ಕಲಾಕೃತಿಗಳು ಹಾಗೂ ಬ್ರೆಝಿಲ್‌ನಲ್ಲಿ ಪತ್ತೆಯಾದ ಲಕ್ಷಾಂತರ ವರ್ಷಗಳಷ್ಟು ಹಳೆಯದಾದ ಪುರಾತನ ಅವಶೇಷಗಳ ಸಂಗ್ರಹವನ್ನು ಇಲ್ಲಿ ಸಂರಕ್ಷಿಸಿಡಲಾಗಿತ್ತು.

   ರವಿವಾರ ರಾತ್ರಿ 7:30ರ ವೇಳೆಗೆ ಮ್ಯೂಸಿಯಂನಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ್ದು, ಯಾವುದೇ ಸಾವುನೋವು ಸಂಭವಿಸಿಲ್ಲವೆಂದು ಅಧಿಕೃತ ಮೂಲಗಳು ತಿಳಿಸಿವೆ. ಸಾರ್ವಜನಿಕರ ಸಂದರ್ಶನದ ಸಮಯ ಮುಕ್ತಾಯಗೊಂಡ ಬಳಿಕ ಬೆಂಕಿ ಕಾಣಿಸಿಕೊಂಡಿದೆಯೆಂದು ಅವು ಹೇಳಿಕೆಯಲ್ಲಿ ತಿಳಿಸಿವೆ. ಆದರೆ ಬೆಂಕಿ ಆಕಸ್ಮಿಕಕ್ಕೆ ಕಾರಣವೇನೆಂದು ತಿಳಿದುಬಂದಿಲ್ಲ.

  ಈ ಬೃಹತ್ ಮ್ಯೂಸಿಯಂನಲ್ಲಿ ಬ್ರೆಝಿಲ್ ಹಾಗೂ ಇತರ ರಾಷ್ಟ್ರಗಳ ಇತಿಹಾಸಕ್ಕೆ ಸಂಬಂಧಿಸಿದ 20 ಸಾವಿರಕ್ಕೂ ಅಧಿಕ ಅಮೂಲ್ಯ ವಸ್ತುಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News