×
Ad

ನಡಾಲ್,ಡೆಲ್ ಪೊಟ್ರೊ, ಡೊಮಿನಿಕ್ ಕ್ವಾ.ಫೈನಲ್‌ಗೆ

Update: 2018-09-03 23:41 IST

ನ್ಯೂಯಾರ್ಕ್, ಸೆ.3: ವಿಶ್ವದ ನಂ.1 ಆಟಗಾರ ರಫೆಲ್ ನಡಾಲ್, ಅರ್ಜೆಂಟೀನದ ಜುಯಾನ್ ಮಾರ್ಟಿನ್ ಡೆಲ್ ಪೊಟ್ರೊ ಹಾಗೂ ಆಸ್ಟ್ರೀಯದ ಡೊಮಿನಿಕ್ ಥೀಮ್ ಅಮೆರಿಕನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

ರವಿವಾರ ಇಲ್ಲಿ ನಡೆದ ಪುರುಷರ ಸಿಂಗಲ್ಸ್ ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಹಾಲಿ ಚಾಂಪಿಯನ್ ನಡಾಲ್ ಜಾರ್ಜಿಯದ ನಿಕೊಲಝ್ ಬಾಸಿಲಾಶ್ವಿಲಿರನ್ನು 6-3, 6-3, 6-7, 6-4 ಅಂತರದಿಂದ ಸೋಲಿಸಿದರು. ಈ ಮೂಲಕ 8ನೇ ಬಾರಿ ಅಂತಿಮ 8ರ ಸ್ಥಾನ ಖಚಿತಪಡಿಸಿದ್ದಾರೆ.

‘‘ಇದು ನನ್ನ ಪಾಲಿಗೆ ದೊಡ್ಡ ಗೆಲುವು’’ ಎಂದು 2010, 2013 ಹಾಗೂ 2017ರ ಚಾಂಪಿಯನ್ ನಡಾಲ್ ಪ್ರತಿಕ್ರಿಯಿಸಿದ್ದಾರೆ. ನಡಾಲ್ ಮುಂದಿನ ಸುತ್ತಿನಲ್ಲಿ ಡೊಮಿನಿಕ್ ಥೀಮ್‌ರನ್ನು ಎದುರಿಸಲಿದ್ದಾರೆ.

9ನೇ ಶ್ರೇಯಾಂಕದ ಥೀಮ್ ಕಳೆದ ವರ್ಷದ ರನ್ನರ್ಸ್-ಅಪ್ ಕೆವಿನ್ ಆ್ಯಂಡರ್ಸನ್‌ರನ್ನು 7-5, 6-2, 7-6(2) ಸೆಟ್‌ಗಳಿಂದ ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ತಲುಪಿದರು. ಈ ಮೂಲಕ ಚೊಚ್ಚಲ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸುವತ್ತ ಹೆಜ್ಜೆ ಇಟ್ಟಿದ್ದಾರೆ.

 ಈ ವರ್ಷ ಫ್ರೆಂಚ್ ಓಪನ್‌ನಲ್ಲಿ ರನ್ನರ್ಸ್-ಅಪ್ ಪ್ರಶಸ್ತಿ ಗಳಿಸಿರುವ ಥೀಮ್ ಆರಡಿ ಎತ್ತರದ ಆ್ಯಂಡರ್ಸನ್‌ರನ್ನು ದಿಟ್ಟವಾಗಿ ಎದುರಿಸಿದರು. 5ನೇ ಶ್ರೇಯಾಂಕದ ಆ್ಯಂಡರ್ಸನ್ ಅವರು ಥೀಮ್ ವಿರುದ್ದ ಈತನಕ ಆಡಿರುವ ಎಲ್ಲ 6 ಪಂದ್ಯಗಳನ್ನು ಜಯಿಸಿದ್ದರು. ಆದರೆ, ರವಿವಾರ ಗೆಲುವಿಗಾಗಿ ಪರದಾಟ ನಡೆಸಿದರು.

ಇದೇ ವೇಳೆ, ಮತ್ತೊಂದು ಪುರುಷರ ಸಿಂಗಲ್ಸ್‌ನಲ್ಲಿ 3ನೇ ಶ್ರೇಯಾಂಕದ ಜುಯಾನ್ ಮಾರ್ಟಿನ್ ಡೆಲ್ ಪೊಟ್ರೊ ಕ್ರೊಯೇಶಿಯದ ಬೊರ್ನಾ ಕೊರಿಕ್‌ರನ್ನು 6-4, 6-3, 6-1 ಸೆಟ್‌ಗಳಿಂದ ಮಣಿಸಿದರು. 2009ರ ಚಾಂಪಿಯನ್ ಡೆಲ್ ಪೊಟ್ರೊ ಮುಂದಿನ ಸುತ್ತಿನಲ್ಲಿ ಅಮೆರಿಕದ 11ನೇ ಶ್ರೇಯಾಂಕದ ಜಾನ್ ಇಸ್ನೆರ್‌ರನ್ನು ಎದುರಿಸಲಿದ್ದಾರೆ.

ಇಸ್ನೆರ್ ಕೆನಡಾದ ಮಿಲೊಸ್ ರಾವೊನಿಕ್‌ರನ್ನು 3-6, 6-3, 6-4, 3-6, 6-2 ಅಂತರದಿಂದ ಸೋಲಿಸಿ ದ್ದಾರೆ. 7 ವರ್ಷಗಳ ಬಳಿಕ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ.

 ಇಸ್ನೆರ್ ಅವರು ಡೆಲ್ ಪೊಟ್ರೊ ವಿರುದ್ಧ ಆಡಿರುವ 11 ಪಂದ್ಯಗಳಲ್ಲಿ 7ರಲ್ಲಿ ಸೋತಿದ್ದಾರೆ. ಇತ್ತೀಚೆಗೆ ಫ್ರೆಂಚ್‌ಓಪನ್‌ನ ನಾಲ್ಕನೇ ಸುತ್ತಿನಲ್ಲಿ ಡೆಲ್‌ಪೊಟ್ರೊಗೆ ನೇರ ಸೆಟ್‌ಗಳಿಂದ ಶರಣಾಗಿದ್ದಾರೆ. ಸಿಲಿಕ್ ಅಂತಿಮ-8ಕ್ಕೆ ಲಗ್ಗೆ: 2014ರ ಚಾಂಪಿಯನ್ ಮರಿನ್ ಸಿಲಿಕ್ 19ರ ಹರೆಯದ ಆಸ್ಟ್ರೇಲಿಯ ಆಟಗಾರ ಅಲೆಕ್ಸ್ ಡಿ ಮಿನೌರ್‌ರನ್ನು 4-6, 3-6, 6-3, 6-4, 7-5 ಅಂತರದಿಂದ ಮಣಿಸಿ ಪ್ರಿ-ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ. 7ನೇ ಶ್ರೇಯಾಂಕದ ಸಿಲಿಕ್ ಮುಂದಿನ ಸುತ್ತಿನಲ್ಲಿ ಬೆಲ್ಜಿಯಂನ ಡೇವಿಡ್ ಗಫಿನ್‌ರನ್ನು ಎದುರಿಸಲಿದ್ದಾರೆ.

ಸೆರೆನಾ ಅಂತಿಮ-8ರ ಹಂತಕ್ಕೆ ಲಗ್ಗೆ

ಅಮೆರಿಕದ ಟೆನಿಸ್ ಸ್ಟಾರ್ ಸೆರೆನಾ ವಿಲಿಯಮ್ಸ್ ಇಲ್ಲಿ ನಡೆಯುತ್ತಿರುವ ಯುಎಸ್ ಓಪನ್‌ನ ಮಹಿಳೆಯರ ಸಿಂಗಲ್ಸ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಸೋಮವಾರ ಅರ್ಥರ್ ಅಶ್ ಸ್ಟೇಡಿಯಂನಲ್ಲಿ 96 ನಿಮಿಷಗಳಲ್ಲಿ ಕೊನೆಗೊಂಡ ಪಂದ್ಯದಲ್ಲಿ 36ರ ಹರೆಯದ ಸೆರೆನಾ ಎಸ್ಟೊನಿಯದ ಎದುರಾಳಿ ಕೈಯಾ ಕನೆಪಿಯವರನ್ನು 6-0, 4-6, 6-3 ಅಂತರದಿಂದ ಸೋಲಿಸಿದ್ದಾರೆ.

ಸೆರೆನಾ ಮೊದಲ ಸೆಟ್‌ನಲ್ಲಿ ಸುಲಭ ಜಯ ಸಾಧಿಸಿದ್ದು, ಎರಡನೇ ಸೆಟ್‌ನಲ್ಲಿ ಕೆಲವು ತಪ್ಪೆಸಗಿ ಕನೆಪಿ ತಿರುಗೇಟು ನೀಡಲು ಕಾರಣರಾದರು. ಮೂರನೇ ಸೆಟ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಸೆರೆನಾ 24ನೇ ಗ್ರಾನ್‌ಸ್ಲಾಮ್ ಪ್ರಶಸ್ತಿ ಗೆಲ್ಲುವತ್ತ ದಿಟ್ಟ ಹೆಜ್ಜೆ ಇಟ್ಟಿದ್ದಾರೆ.

ವಿಶ್ವದ ಮಾಜಿ ನಂ.1 ಆಟಗಾರ್ತಿ ಸೆರೆನಾ 15ನೇ ಬಾರಿ ಟೂರ್ನಮೆಂಟ್‌ನಲ್ಲಿ ಕ್ವಾರ್ಟರ್ ಫೈನಲ್ ಸ್ಥಾನ ದೃಢಪಡಿಸಿದ್ದಾರೆ.

ಸ್ಟೀಫನ್ಸ್ ಕ್ವಾ.ಫೈನಲ್‌ಗೆ: ಹಾಲಿ ಚಾಂಪಿಯನ್ ಸ್ಲೋನ್ ಸ್ಟೀಫನ್ಸ್ ಯುಎಸ್ ಓಪನ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದಾರೆ.

 ರವಿವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ ಸ್ಟೀಫನ್ಸ್ ಬೆಲ್ಜಿಯಂನ ಎಲಿಸ್ ಮರ್ಟೆನ್ಸ್ ವಿರುದ್ಧ 6-3, 6-3 ನೇರ ಸೆಟ್‌ಗಳಿಂದ ಗೆಲುವು ಸಾಧಿಸಿದ್ದಾರೆ. ಸ್ಟೀಫನ್ಸ್ ಆಗಸ್ಟ್‌ನಲ್ಲಿ ನಡೆದಿದ್ದ ಸಿನ್ಸಿನಾಟಿ ಟೂರ್ನಿಯಲ್ಲಿ ಮಾರ್ಟೆನ್ಸ್ ರನ್ನು ಸೋಲಿಸಿದ್ದರು. ಸೆರೆನಾ ವಿಲಿಯಮ್ಸ್ ಬಳಿಕ ಸತತ ಯುಎಸ್ ಓಪನ್ ಪ್ರಶಸ್ತಿ ಗೆಲ್ಲಲು ಎದುರು ನೋಡುತ್ತಿರುವ ಸ್ಟೀಫನ್ಸ್ ಮುಂದಿನ ಸುತ್ತಿನಲ್ಲಿ ಲಾಟ್ವಿಯದ ಅನಸ್ಟೇಸಿಜಾ ಸೆವಾಸ್ಟೋವಾರನ್ನು ಎದುರಿಸಲಿದ್ದಾರೆ. ಸೆವಾಸ್ಟೊವಾ ಅವರು ಎಲಿನಾ ಸ್ವಿಟೋಲಿನಾರನ್ನು 6-3, 1-6, 6-0 ಅಂತರದಿಂದ ಮಣಿಸಿದ್ದಾರೆ. ಸ್ಟೀಫನ್ಸ್ ಕಳೆದ ವರ್ಷ ಕ್ವಾರ್ಟರ್ ಫೈನಲ್‌ನಲ್ಲಿ ಸೆವಾಸ್ಟೊವಾರನ್ನು 3 ಸೆಟ್‌ಗಳ ಅಂತರದಿಂದ ಮಣಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News