ಅಡ್ಡೂರು: ಹಿಂದೂ ಮಹಿಳೆಯ ಶವಸಂಸ್ಕಾರ ನೆರವೇರಿಸಿದ ಎಸ್ ಡಿಪಿಐ-ಪಿಎಫ್ಐ ಕಾರ್ಯಕರ್ತರು

Update: 2018-09-04 12:32 GMT

ಅಡ್ಡೂರು, ಸೆ.4: ಜಾತಿ ನೆಪವೊಡ್ಡಿ ಬಡ ಹಿಂದೂ ಮಹಿಳೆಯೋರ್ವರ ಶವಸಂಸ್ಕಾರಕ್ಕೆ ಸ್ಥಳೀಯರು ಮುಂದಾಗದ ಹಿನ್ನೆಲೆಯಲ್ಲಿ ಎಸ್ ಡಿಪಿಐ ಹಾಗೂ ಪಿಎಫ್ ಐ ಕಾರ್ಯಕರ್ತರು ಮುಂದೆ ನಿಂತು ಹಿಂದೂ ಸಂಪ್ರದಾಯದಂತೆ ಎಲ್ಲ ವಿಧಿವಿಧಾನಗಳನ್ನು ನೆರವೇರಿಸಿ ಮಾನವೀಯತೆ ಮೆರೆದ ಘಟನೆ ಅಡ್ಡೂರು ಗ್ರಾಮದ ಕುಚ್ಚಿಗುಡ್ಡೆಯಲ್ಲಿ ಶನಿವಾರ ತಡರಾತ್ರಿ ನಡೆದಿದೆ.

ಮೂಲತಃ ಬಂಟ್ವಾಳ ತಾಲೂಕಿನ ಸಿದ್ಧಕಟ್ಟೆ ನಿವಾಸಿ ಸುಶೀಲಮ್ಮ (65) ನಿಧನರಾದವರು. ಅವರಿಗೆ ಇಬ್ಬರು ಪುತ್ರಿಯರು ಹಾಗೂ ಇಬ್ಬರು ಪುತ್ರರಿದ್ದು, ಕಡು ಬಡತನದಲ್ಲಿ ಜೀವನ ಸಾಗಿಸುತ್ತಿದ್ದರು.

ಏನಿದು ಘಟನೆ?: ಅಡ್ಡೂರು ಗ್ರಾಮದ ಕುಚ್ಚಿಗುಡ್ಡೆಯ ಮನೆಯೊಂದರಲ್ಲಿ ವಾಸವಾಗಿದ್ದ ಸುಶೀಲಮ್ಮ  ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ನಗರದ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಆರೋಗ್ಯದಲ್ಲಿ ಚೇತರಿಕೆ ಕಂಡ ಹಿನ್ನೆಲೆಯಲ್ಲಿ ಪುತ್ರರು ಶನಿವಾರ ತನ್ನ ನಿವಾಸಕ್ಕೆ ಕೊಂಡೊಯ್ದಿದ್ದಾರೆ. ಬಳಿಕ ಅಂದು ಸಂಜೆ  4ರ ಸುಮಾರಿಗೆ ಸುಶೀಲಮ್ಮರ ಆರೋಗ್ಯದಲ್ಲಿ ಪುನಃ ಏರುಪೇರಾಗಿ ಹಠಾತ್ ಮೃತಪಟ್ಟಿದ್ದಾರೆ. ಈ ವೇಳೆ ಮನೆಯಲ್ಲಿದ್ದವರು ಸ್ಥಳೀಯ ಹಿಂದೂ ನಿವಾಸಿಗಳಿಗೆ ಹಾಗೂ ಸಂಬಂಧಿಕರಿಗೆ ಮಾಹಿತಿ ನೀಡಿ, ಅಂತ್ಯಸಂಸ್ಕಾರಕ್ಕೆ ಸಹಕರಿಸುವಂತೆ ಮನವಿ ಮಾಡಿದ್ದಾರೆ.

ಆದರೆ ಈ ಹಿಂದೆ ಸುಶೀಲಮ್ಮ ಅವರು ತನ್ನ ಪುತ್ರಿಯೋರ್ವಳನ್ನು ಅಂತರ್ಜಾತಿಯ ಯುವಕನಿಗೆ ವಿವಾಹ ಮಾಡಿಸಿದ್ದರು. ಇದರಿಂದ ಅಸಮಾಧಾನ ಗೊಂಡಿದ್ದ ಸ್ಥಳೀಯ ಹಿಂದೂಗಳು ಹಾಗೂ ಸಂಬಂಧಿಕರು ಅವರ ಶವಸಂಸ್ಕಾರಕ್ಕೆ ಸಹಕರಿಸದ ಹಿನ್ನೆಲೆಯಲ್ಲಿ ರಾತ್ರಿ 9ರವರೆಗೂ ಮೃತದೇಹವನ್ನು ಮನೆಯಲ್ಲಿಯೇ ಇರಿಸಲಾಗಿತ್ತು.

ಈ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿ ಎಸ್ ಡಿಪಿಐ-ಪಿಎಫ್ ಐ ಗ್ರಾಮ ಸಮಿತಿಯ ಕಾರ್ಯಕರ್ತರು, ಗ್ರಾಮದ ಕೆಲ ಹಿಂದೂ ಮುಖಂಡರನ್ನು ಕರೆ  ಮೂಲಕ ಸಂಪರ್ಕಿಸಿ ಶವಸಂಸ್ಕಾರಕ್ಕೆ ಸಹಕರಿಸುವಂತೆ ಮನವಿ ಮಾಡಿದ್ದಾರೆ. ಆದರೆ ಜಾತಿ ನೆಪವೊಡ್ಡಿ ಶವಸಂಸ್ಕಾರಕ್ಕೆ ಅವರು ಬರಲು ನಿರಾಕರಿಸಿದ ಹಿನ್ನೆಲೆಯಲ್ಲಿ ಎಸ್ ಡಿಪಿಐ-ಪಿಎಫ್ ಐ ಕಾರ್ಯಕರ್ತರು ಆಂಬ್ಯುಲೆನ್ಸ್ ಮೂಲಕ ಸುಶೀಲಮ್ಮರ ಮೃತದೇಹವನ್ನು ಸಮೀಪದ ಬಡಕಬೈಲಿನ ರುಧ್ರಭೂಮಿಗೆ ಸಾಗಿಸಿ, ಅಲ್ಲಿ ವಿಧಿವಿಧಾನಕ್ಕೆ ಬೇಕಾಗುವ ಎಲ್ಲಾ ಸಾಮಗ್ರಿಗಳನ್ನು ಖರೀದಿಸಿದ ಬಳಿಕ 6,000 ರೂ. ಪಾವತಿಸಿ ತಡರಾತ್ರಿ  ಸುಮಾರು 12:55ಕ್ಕೆ ಶವಸಂಸ್ಕಾರ ಮಾಡಲಾಯಿತು.

ಕಾರ್ಯಾಚರಣೆಯಲ್ಲಿ ಎಸ್ ಡಿಪಿಐ ವಲಯಾಧ್ಯಕ್ಷ ಎ.ಕೆ.ಮುಸ್ತಫಾ, ಪಿಎಫ್ಐ ವಲಯಾಧ್ಯಕ್ಷ ಅಶ್ರಫ್ ನಡುಗುಡ್ಡೆ, ವಲಯ ಸಮಿತಿ ಅಧ್ಯಕ್ಷರಾದ ಝೈನುದ್ದೀನ್ ಪಾಂಡೇಲ್, ಹಕೀಂ ಪಾಂಡೇಲ್, ಜಬ್ಬಾರ್ ಕುಚ್ಚಿಗುಡ್ಡೆ, ಅನ್ವರ್ ಗೋಳಿಪಡ್ಪು, ನಝೀರ್ ಕೆಳಗಿನಕೆರೆ, ಶಫೀಕ್ ಗುಡ್ಡೆ, ಸತ್ತಾರ್, ಸೌರಾಝ್ ಇಮ್ರಾನ್ ಮತ್ತಿತರರು ಭಾಗವಹಿಸಿದ್ದರು.

ಇನ್ನು ಈ ಕಾರ್ಯಕರ್ತರು ಮಾನವೀಯತೆ ನೆಲೆಯಲ್ಲಿ ಜಾತಿ-ಧರ್ಮ ನೋಡದೆ ಹಿಂದು ಮಹಿಳೆಯ ಶವವನ್ನು ಸ್ಮಶಾನಕ್ಕೆ ಹೊತ್ತೊಯ್ದು ಸಂಸ್ಕಾರ ನೆರವೇರಿಸಿದ್ದು, ಶ್ಲಾಘನೆಗೆ ಪಾತ್ರವಾಗಿದ್ದಲ್ಲದೆ ಕೋಮು ಸಾಮರಸ್ಯಕ್ಕೆ ನಿದರ್ಶನವಾಗಿದೆ.

Writer - ಕಲಂದರ್ ಶಾಫೀ, ಅಡ್ಡೂರು

contributor

Editor - ಕಲಂದರ್ ಶಾಫೀ, ಅಡ್ಡೂರು

contributor

Similar News