ಸುದ್ದಿಗೋಷ್ಠಿ ನಡೆಸಿದ ಪೊಲೀಸರ ವಿರುದ್ಧ ಕ್ರಮಕ್ಕೆ ಕೋರಿ ಹೈಕೋರ್ಟ್‌ನಲ್ಲಿ ಪಿಐಎಲ್ ಸಲ್ಲಿಕೆ

Update: 2018-09-04 15:23 GMT

ಮುಂಬೈ, ಸೆ.4: ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪದಲ್ಲಿ ಮಾನವ ಹಕ್ಕು ಕಾರ್ಯಕರ್ತರ ಬಂಧನ ಪ್ರಕರಣ ಕುರಿತು ಮಾಧ್ಯಮಗಳಿಗೆ ವಿವರಗಳನ್ನು ನೀಡಿದ್ದ ಎಡಿಜಿಪಿ ಪರಮಬೀರ್ ಸಿಂಗ್ ಮತ್ತು ಇತರ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮವನ್ನು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಯೊಂದನ್ನು ಮಂಗಳವಾರ ಬಾಂಬೆ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದೆ.

ಆ.31ರಂದು ಮುಂಬೈನಲ್ಲಿ ಸುದ್ದಿಗೋಷ್ಠಿಯನ್ನು ಕರೆದಿದ್ದ ಸಿಂಗ್ ಕಾರ್ಯಕರ್ತರ ನಡುವೆ ವಿನಿಮಯವಾಗಿತ್ತೆನ್ನಲಾದ ಪತ್ರಗಳನ್ನು ಓದಿದ್ದರು. ಜೂನ್‌ನಲ್ಲಿ ಮತ್ತು ಕಳೆದ ವಾರ ಬಂಧಿತರಾಗಿರುವ ಎಡಪಂಥೀಯ ಕಾರ್ಯಕತರು ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿದ್ದರು ಎನ್ನುವುದಕ್ಕೆ ನಿರ್ಣಾಯಕ ಪುರಾವೆ ಪೊಲೀಸರ ಬಳಿಯಿದೆ ಎಂದು ಅವರು ಹೇಳಿಕೊಂಡಿದ್ದರು.

ಭೀಮಾ-ಕೋರೆಗಾಂವ್ ಹಿಂಸಾಚಾರದ ಸಾಕ್ಷಿಯೆಂದು ಹೇಳಿಕೊಂಡಿರುವ ಸಾಮಾಜಿಕ ಕಾರ್ಯಕರ್ತ ಸಂಜಯ ಭಾಲೇರಾವ್ ಅವರು ಹೈಕೋರ್ಟ್‌ನಲ್ಲಿ ಈ ಪಿಐಎಲ್ ಸಲ್ಲಿಸಿದ್ದಾರೆ.

ಸುದ್ದಿಗೋಷ್ಠಿಯನ್ನು ಕರೆದು ಪ್ರಕರಣಕ್ಕೆ ಸಂಬಂಧಿಸಿದ ನಿರ್ಣಾಯಕ ಮತ್ತು ಪ್ರಮುಖ ಮಾಹಿತಿಯನ್ನು ಬಹಿರಂಗಗೊಳಿಸಿರುವುದು ಸಿಂಗ್ ಮತ್ತು ಇತರ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮವನ್ನು ಆರಂಭಿಸುವಂತೆ ಅವರು ಉಚ್ಚ ನ್ಯಾಯಾಲಯವನ್ನು ಕೋರಿದ್ದಾರೆ.

ಸರಕಾರಿ ನೌಕರನನ್ನು ದುರ್ನಡತೆಗಾಗಿ ವಜಾಗೊಳಿಸಲು ಅವಕಾಶ ನೀಡುವ ಸಂವಿಧಾನದ 311ನೇ ವಿಧಿಯಡಿ ಈ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮವನ್ನು ಜರುಗಿಸುವಂತೆ ರಾಜ್ಯ ಸರಕಾರಕ್ಕೆ ನಿರ್ದೇಶ ನೀಡುವಂತೆಯೂ ಅವರು ನ್ಯಾಯಾಲಯವನ್ನು ಆಗ್ರಹಿಸಿದ್ದಾರೆ.

ಸೋಮವಾರ ಪ್ರಕರಣದಲ್ಲಿ ಎನ್‌ಐಎ ತನಿಖೆಯನ್ನು ಕೋರಿ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ಸುದ್ದಿಗೋಷ್ಠಿಯ ಬಗ್ಗೆ ಪ್ರಶ್ನೆಗಳನ್ನೆತ್ತಿದ್ದ ನ್ಯಾಯಾಲಯವು,ವಿಷಯವು ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣಾಧೀನವಾಗಿರುವಾಗ ಪೊಲೀಸರು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಬಾರದಿತ್ತು ಎಂದು ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News