ಆಗಸದಲ್ಲೇ ಇಂಧನ ತುಂಬಿಸಿಕೊಂಡ ತೇಜಸ್ ಯುದ್ಧವಿಮಾನ

Update: 2018-09-04 15:38 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಸೆ.4: ಪ್ರಪ್ರಥಮ ಬಾರಿಗೆ ಸ್ವದೇಶೀ ನಿರ್ಮಿತ ತೇಜಸ್ ಯುದ್ಧವಿಮಾನಕ್ಕೆ ಆಗಸ ಮಧ್ಯದಲ್ಲೇ ಭಾರತೀಯ ವಾಯುಪಡೆಯ ಟ್ಯಾಂಕರ್ ವಿಮಾನದಿಂದ ಇಂಧನ ಮರು ತುಂಬಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರೀಯ ವಿಮಾನ ಪರೀಕ್ಷಾ ಕೇಂದ್ರದ ಟೆಸ್ಟ್ ಪೈಲಟ್ ಗ್ರೂಪ್ ಕ್ಯಾಪ್ಟನ್ ರಾಜೀವ್ ಜೋಷಿ ಅವರು ಚಲಾಯಿಸಿದ ತೇಜಸ್ ವಿಮಾನವು ಆಗಸದಲ್ಲೇ ಮರು ಇಂಧನ ಪೂರೈಕೆಯ ಪರೀಕ್ಷೆಯಲ್ಲಿ ಯಶಸ್ವಿಯಾಗಿದ್ದು, ಶೀಘ್ರ ವಿಮಾನಕ್ಕೆ ಅಂತಿಮ ಕಾರ್ಯಾಚರಣೆ ಪ್ರಮಾಣ ಪತ್ರ ದೊರಕುವ ನಿರೀಕ್ಷೆಯಿದೆ. ಆರಂಭಿಕ ಕಾರ್ಯಾಚರಣೆ ಪರವಾನಿಗೆ ಮಾನದಂಡ(ಐಒಸಿ)ದ ಆಧಾರದಲ್ಲಿ ಈಗ ಭಾರತೀಯ ವಾಯುಪಡೆ 9 ತೇಜಸ್ ಯುದ್ಧವಿಮಾನಗಳನ್ನು ಹೊಂದಿದೆ. ವಾಯುಪಡೆಯು 40 ತೇಜಸ್ ಎಂಕೆ1 ಯುದ್ದವಿಮಾನಕ್ಕೆ ಬೇಡಿಕೆ ಸಲ್ಲಿಸಿದೆ.

ಮುಂದಿನ ಹಂತದಲ್ಲಿ ಹೆಚ್ಚಿನ ಸಾಮರ್ಥ್ಯದ 83 ತೇಜಸ್ ಎಂಕೆ1ಎ ಯುದ್ಧವಿಮಾನ ವಾಯುಪಡೆಯ ಬತ್ತಳಿಕೆಗೆ ಸೇರಲಿದೆ. ತೇಜಸ್ ಎಂಕೆ1ಎ ಯುದ್ದವಿಮಾನವೊಂದರ ಬೆಲೆ 463 ಕೋಟಿ ರೂ. ಎಂದು ಈ ವಿಮಾನಗಳನ್ನು ತಯಾರಿಸುವ ಎಚ್‌ಎಎಲ್ ತಿಳಿಸಿದೆ. ಇದಕ್ಕಿಂತಲೂ ಆಧುನಿಕವಾದ ತೇಜಸ್ ಎಂಕೆ-2 ಯುದ್ಧವಿಮಾನ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು ಸುಮಾರು 2022ರ ವೇಳೆಗೆ ಇದು ಸಿದ್ಧಗೊಳ್ಳುವ ನಿರೀಕ್ಷೆಯಿದೆ. ಇದೇ ವೇಳೆ, ನೌಕಾಪಡೆಯಲ್ಲಿ ಬಳಸುವ ತೇಜಸ್ ಯುದ್ಧವಿಮಾನಗಳ ಪರೀಕ್ಷಾ ಕಾರ್ಯಾಚರಣೆ ಈ ವರ್ಷಾಂತ್ಯದಲ್ಲಿ ಐಎನ್‌ಎಸ್ ವಿಕ್ರಮಾದಿತ್ಯ ನೌಕೆಯ ಮೇಲ್ಭಾಗದಲ್ಲಿ ನಡೆಯಲಿದೆ. ಈ ಪ್ರಯೋಗಾರ್ಥ ಪರೀಕ್ಷೆ ಯಶಸ್ವಿಯಾದರೆ ನೌಕಾಪಡೆಯ ತೇಜಸ್ ವಿಮಾನಗಳ ಆಧುನಿಕ ಪ್ರಕಾರದ ವಿಮಾನಗಳ ನಿರ್ಮಾಣ ಕಾರ್ಯಕ್ಕೆ ಅನುಮತಿ ದೊರಕುವ ನಿರೀಕ್ಷೆಯಿದೆ.

ಇಸ್ರೇಲ್ ನಿರ್ಮಿತ ಡರ್ಬಿ ಕ್ಷಿಪಣಿಗಳನ್ನು ತೇಜಸ್ ಯುದ್ದವಿಮಾನದಲ್ಲಿ ಯಶಸ್ವಿಯಾಗಿ ಸಂಯೋಜಿಸಲಾಗಿದ್ದರೂ, ರಶ್ಯ ನಿರ್ಮಿತ ಜಿಎಸ್‌ಚ್-23 ಗನ್‌ಗಳನ್ನು ವಿಮಾನಕ್ಕೆ ಸಂಯೋಜಿಸುವ ಕಾರ್ಯ ಬಾಕಿಯಿದೆ. ಜೊತೆಗೆ, ಇದರ ನಿರ್ವಹಣಾ ಕಾರ್ಯವನ್ನು ಇನ್ನಷ್ಟು ಸುಲಭಗೊಳಿಸುವ ಪ್ರಕ್ರಿಯೆ ಎಚ್‌ಎಎಲ್‌ನಲ್ಲಿ ಸಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News