ಯುದ್ಧ ಮಾಡದೆ ಗೆಲ್ಲಲು ಗಾಂಧಿ ನಮಗೆ ಪ್ರಸ್ತುತ: ವೈದೇಹಿ

Update: 2018-09-04 17:23 GMT

ಉಡುಪಿ, ಸೆ.4: ಯುದ್ಧ ಮಾಡದೆ ಗೆದ್ದ ಮನುಷ್ಯ ಗಾಂಧೀಜಿ. ಆದರೆ ನಮಗೆ ಇಂದು ಯುದ್ಧ ಮಾಡದೆ ಗೆಲ್ಲುವ ಚಾಕಚಕ್ಯತೆ ಇಲ್ಲವಾಗಿದೆ. ಹಾಗಾಗಿ ಗಾಂಧೀಜಿ ನಮಗೆ ಮತ್ತೆ ಮತ್ತೆ ಪ್ರಸ್ತುತರಾಗುತ್ತಾರೆ. ಗಾಂಧೀಜಿಗೆ ಹೆಂಗರಳು ಇರುವುದರಿಂದಲೇ ದಲಿತರ, ಮಹಿಳೆಯರ ಬಗ್ಗೆ ಅವರು ಯೋಚನೆ ಮಾಡು ತ್ತಿದ್ದರು ಎಂದು ಸಾಹಿತಿ ವೈದೇಹಿ ಹೇಳಿದ್ದಾರೆ.

ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಮಂಗಳವಾರ ಬೆಂಗಳೂರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಗಾಂಧಿ 150ರ ಪ್ರಯುಕ್ತ ಬೋಳುವಾರು ಮಹಮ್ಮದ್ ಕುಂಞಿರವರ ‘ಪಾಪು ಗಾಂಧಿ ಗಾಂಧಿ ಬಾಪು ಆದ ಕತೆ’ ನಾಟಕದ ಪ್ರದರ್ಶನಕ್ಕೆ ಮುನ್ನ ಆಯೋಜಿಸಲಾದ ‘ಗಾಂಧಿ ಚಿಂತನೆ ಪ್ರಸ್ತುತತೆ’ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಅಂಬೇಡ್ಕರ್ ಮತ್ತು ಗಾಂಧಿ ಪರಸ್ಪರ ಗೆಳೆಯರಾಗಿ ಸೈದ್ಧಾಂತಿಕ ಚರ್ಚೆ, ಜಗಳ ಮಾಡುತ್ತಿದ್ದರೆ ಹೊರತು ಶತ್ರುಗಳಾಗಿ ಅಲ್ಲ. ಆದರೆ ಇಂದು ನಾವು ಅವರನ್ನು ಬೇರೆ ಬೇರೆ ಮಾಡುತ್ತಿದ್ದೇವೆ. ಅವರಿಬ್ಬರ ಮಧ್ಯೆ ಬಹಳ ದೊಡ್ಡ ಭಿನ್ನತೆಯನ್ನು ಬಿಂಬಿಸುತ್ತಿದ್ದೇವೆ. ನಾವು ಅವರನ್ನು ತಪ್ಪು ಅರ್ಥ ಮಾಡಿಕೊಂಡು ಸೀಳಿ ನೋಡಿ ಸಮಾಜವನ್ನು ಸೀಳುತ್ತಿದ್ದೇವೆ ಎಂದರು.

ಇಂದು ದೇಶದಲ್ಲಿ ನಡೆಯುತ್ತಿರುವ ಮಹಿಳೆಯರ, ದಲಿತರ ಮೇಲಿನ ದೌರ್ಜನ್ಯ ನಮಗೆ ತಡೆಯಲು ಆಗುತ್ತಿಲ್ಲ. ಯಾಕೆಂದರೆ ನಮ್ಮಿಳಗಿನ ಚಾರಿತ್ರ ಸ್ವಚ್ಛ ಆಗಿಲ್ಲ. ಅಂತರಂಗದ ಸ್ವಚ್ಛತೆ ಇದ್ದಾಗ ಮಾತ್ರ ಸಮಾಜ ಸ್ವಸ್ಥ ಆಗಿರುತ್ತದೆ ಎಂಬುದು ಗಾಂಧೀಜಿಯ ನಿಲುವು ಆಗಿತ್ತು ಎಂದು ಅವರು ತಿಳಿಸಿದರು.

ಗಾಂಧೀಜಿ ಧ್ವನಿ, ಭಾವನೆಯಲ್ಲಿ ಹೆಣ್ಣುತನ ಇದೆ. ಆ ಧ್ವನಿಯನ್ನು ನಾವು ಪಡೆದುಕೊಳ್ಳಬೇಕು. ನಾವೆಲ್ಲರು ಮನಷ್ಯರು. ನಾವು ಯಾಕೆ ಕೆರಳುತ್ತಿದ್ದೇವೆ. ಇದನ್ನು ಯೋಚನೆ ಮಾಡಬೇಕು. ಗಾಂಧೀಜಿ ಪ್ರಸ್ತುತ ಆದರೂ ನಾವು ಅವರಿಗೆ ಅವಮಾನ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.

ಎಲ್ಲರಲ್ಲೂ ಒಬ್ಬ ಗಾಂಧಿ ಇದ್ದಾನೆ. ಗಾಂಧಿ ಇಲ್ಲದ ಮನುಷ್ಯರೇ ಇಲ್ಲ. ಗಾಂಧಿಯಂತೆ ಎಲ್ಲರ ನೋವು ನಮ್ಮ ನೋವು ಎಂದು ಭಾವಿಸಬೇಕು. ಎಲ್ಲರ ದುಃಖ ನಮ್ಮ ಆಗಬೇಕು. ಅದು ಗಾಂಧಿಗೆ ಆಗುತ್ತಿತ್ತು. ಆದುದರಿಂದಲೇ ಅವರು ಪ್ರಸ್ತುತ ಎಂದು ಅವರು ತಿಳಿಸಿದರು.

ಚಿಂತಕ ಪ್ರೊ.ಕೆ.ಫಣಿರಾಜ್ ಮಾತನಾಡಿ, ಸಹೋದರತ್ವ ಸಮಾಜ ಹೇಗೆ ಸ್ಥಾಪಿಸಬೇಕೆಂದನ್ನು ಅಂಬೇಡ್ಕರ್ ಹಾಗೂ ಗಾಂಧೀಜಿ ವಿಚಾರಗಳ ಬಗ್ಗೆ ಸಂವಾದ ಮಾಡಬೇಕಾಗಿದೆ. ಈ ಸಹೋದರತ್ವದ ಸಮಾಜ ನಿರ್ಮಾಣವಾಗದಿ ದ್ದರೆ ಇಲ್ಲಿ ಕೋಮು ಧ್ವೇಷ, ಜಾತಿ ವೈಷ್ಯಮ ನಿಲ್ಲುವುದಿಲ್ಲ. ಬದಲು ಅದರ ಪ್ರಖರತೆ ಇನ್ನಷ್ಟು ಜಾಸ್ತಿಯಾಗುತ್ತದೆ ಎಂದರು.

ಸಹೋದರತ್ವ ಎಂಬುದು ಕೇವಲ ಬೋಧನೆಯಿಂದ ಬರುವಂತದಲ್ಲ. ಜೀವನ, ಸಾಮಾಜಿಕ ಆಚರಣೆಗಳಿಂದ ಬರುವಂತದ್ದು. ಇಂದಿಗೂ ಭಾರತದಲ್ಲಿ ಪ್ರತಿದಿನ ಜಾತಿ, ಕೋಮು ಹಿಂಸೆಗಳು ನಡೆಯುತ್ತಲೇ ಇವೆ. ಆದುದರಿಂದ ಇಂದು ಗಾಂಧೀಜಿಯ ಪ್ರಸ್ತುತತೆಯನ್ನು ಆಚರಣೆಗೆ ತರುವ ತುರ್ತು ಅಗತ್ಯ ನಮ್ಮ ಮುಂದೆ ಇದೆ ಎಂದು ಅವರು ತಿಳಿಸಿದರು. ಉಡುಪಿ ಎಂಜಿಎಂ ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ವಿನೀತ್ ರಾವ್, ರಥಬೀದಿ ಗೆಳೆಯರು ಸಂಸ್ಥೆಯ ಅಧ್ಯಕ್ಷ ಪ್ರೊ.ಮುರಳೀಧರ ಉಪಾದ್ಯ ಹಿರಿಯಡ್ಕ ಉಪಸ್ಥಿತರಿದ್ದರು. ಉಪಾಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ಪ್ರೊ.ಸುಬ್ರಹ್ಮಣ್ಯ ಜೋಶಿ ವಂದಿಸಿದರು. ಸಂತೋಷ್ ಕುಮಾರ್ ಹಿರಿಯಡ್ಕ ಕಾರ್ಯಕ್ರಮ ನಿರೂಪಿಸಿದರು.

ಬೆಳಗ್ಗೆ ಕಟಪಾಡಿ ಎಸ್‌ವಿಎಸ್ ಪದವಿ ಪೂರ್ವ ಕಾಲೇಜಿನ ಬಾಲ ರಂಗ ಮಕ್ಕಳ ನಾಟಕ ಶಾಲೆಯ ಆಶ್ರಯದಲ್ಲಿ, ಮಧ್ಯಾಹ್ನ ಎಂಜಿಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಸಂಜೆ ಸಾರ್ವಜನಿಕರಿಗೆ ಡಾ.ಶ್ರೀಪಾದ್ ಭಟ್ ನಿರ್ದೇಶನದ ‘ಪಾಪು ಗಾಂಧಿ ಗಾಂಧಿ ಬಾಪು ಆದ ಕತೆ’ ನಾಟಕ ಪ್ರದರ್ಶನ ನಡೆಯಿತು.

ಅಧ್ಯಯನ ಪ್ರಕಾರ ಇಂದು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಗಾಂಧಿ ಕುರಿತ 10 ಪೋಸ್ಟ್‌ಗಳಲ್ಲಿ ಸುಮಾರು ಏಳು ಪೋಸ್ಟ್‌ಗಳು ಅವರಿಗೆ ಬೈದು ಕೊಂಡು ಇರುತ್ತದೆ. ನಮ್ಮಲ್ಲಿ ಮುಕ್ತ ಮನಸ್ಸು ಹಾಗೂ ವ್ಯವದಾನ ಇದ್ದರೆ ಮಾತ್ರ ಗಾಂಧಿ ಪ್ರಸ್ತುತತೆಯನ್ನು ಸ್ವೀಕರಿಸಲು ಸಾಧ್ಯ. ಯುವಜನತೆಗೆ ಗಾಂಧಿಯನ್ನು ರೋಲ್ ಮಾಡೆಲ್ ಆಗಿ ಬಿಂಬಿಸುವ ಕೆಲಸ ನಡೆಸಬೇಕು ಎಂದು ಉಡುಪಿ ಎಂಜಿಎಂ ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ವಿನೀತ್ ರಾವ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News