‘ಟಾಪ್’ಯೋಜನೆಗೆ ಸೇರಿಸಿಕೊಳ್ಳಲು ಮನ್‌ಜಿತ್ ಮನವಿ

Update: 2018-09-04 17:56 GMT

ಹೊಸದಿಲ್ಲಿ, ಸೆ.4: ಖಾಯಂ ಉದ್ಯೋಗದ ಸಮಸ್ಯೆ ಎದುರಿಸುತ್ತಿರುವ ಏಶ್ಯನ್ ಗೇಮ್ಸ್ ಚಾಂಪಿಯನ್ ಮನ್‌ಜಿತ್ ಸಿಂಗ್ ಮುಂಬರುವ 2020ರ ಟೋಕಿಯೊ ಗೇಮ್ಸ್‌ಗೆ ತಯಾರಾಗಲು ತನ್ನನ್ನು ಟಾರ್ಗೆಟ್ ಒಲಿಂಪಿಕ್ಸ್ ಪೋಡಿಯಂ(ಟಾಪ್)ಯೋಜನೆಗೆ ಸೇರ್ಪಡೆಗೊಳಿಸುವಂತೆ ಕೇಂದ್ರ ಕ್ರೀಡಾ ಸಚಿವಾಲಯಕ್ಕೆ ಇಂದು ಮನವಿ ಮಾಡಿದ್ದಾರೆ.

ಏಶ್ಯನ್ ಗೇಮ್ಸ್‌ನಲ್ಲಿ ಪುರುಷರ 800 ಮೀ. ಓಟದಲ್ಲಿ ಚಿನ್ನದ ಪದಕ ವನ್ನು ಗೆದ್ದುಕೊಂಡಿರುವ ಮನ್‌ಜಿತ್ 2016ರ ಮಾರ್ಚ್‌ನಲ್ಲಿ ಒಎನ್‌ಜಿಸಿ ತನ್ನೊಂದಿಗೆ ಮಾಡಿಕೊಂಡಿದ್ದ ಒಪ್ಪಂದ ಮುಂದುವರಿಸಲು ನಿರಾಕರಿಸಿದ ಕಾರಣ ಉದ್ಯೋಗವಿಲ್ಲದೆ ಪರದಾಡುತ್ತಿದ್ದಾರೆ.

ತನಗೆ ಎದುರಾದ ಹಲವು ಅಡೆತಡೆಗಳ ನಡುವೆಯೂ ಆರ್ಮಿ ಕೋಚ್ ಅಮರಿಶ್ ಕುಮಾರ್ ಮಾರ್ಗದರ್ಶನದಲ್ಲಿ ತರಬೇತಿ ಮುಂದುವರಿಸಿದ್ದ ಮನ್‌ಜಿತ್ ರಾಷ್ಟ್ರೀಯ ಶಿಬಿರಕ್ಕೆ ಕರೆ ಪಡೆದಿದ್ದರು.

‘‘ಒಎನ್‌ಜಿಸಿ ನನ್ನೊಂದಿಗೆ ಮಾಡಿಕೊಂಡಿದ್ದ ಕೆಲಸದಒಪ್ಪಂದವನ್ನು ನವೀಕರಿಸಲು ನಿರಾಕರಿಸಿದ ಕಾರಣ ಕೆಲಸ ಕಳೆದುಕೊಂಡಿದ್ದೆ. ನಾನು ಉತ್ತಮ ಪ್ರದರ್ಶನ ನೀಡುತ್ತಿಲ್ಲ ಎಂದು ಒಎನ್‌ಜಿಸಿ ಹೇಳಿತ್ತು. ಈಗ ನಾನು ಏಶ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದಿರುವೆ. ಕ್ರೀಡಾ ಸಚಿವಾಲಯ ನನ್ನ ಸಾಧನೆ ಹಾಗೂ ಎದುರಿಸುತ್ತಿರುವ ಸಮಸ್ಯೆಯನ್ನು ಗುರುತಿಸುವ ವಿಶ್ವಾಸವಿದೆ. ನನಗೆ ಯಾರೂ ಪ್ರಾಯೋಜಕರಿಲ್ಲ. ಯಾವ ಕಂಪೆನಿಯು ನನಗೆ ನೆರವು ನೀಡುತ್ತಿಲ್ಲ. ಕ್ರೀಡಾ ಸಚಿವಾಲಯ ‘ಟಾಪ್’ ಯೋಜನೆಗೆ ನನ್ನನ್ನು ಸೇರ್ಪಡೆಗೊಳಿಸಿದರೆ ತರಬೇತಿಯನ್ನು ಮುಂದುವರಿಸಬಹುದು ಎಂದು ಮನ್‌ಜಿತ್ ಸುದ್ದಿಸಂಸ್ಥೆಗೆ ತಿಳಿಸಿದರು.

 ‘‘ಇದೀಗ ಅಂತರ್‌ರಾಷ್ಟ್ರೀಯ ಋತು ಕೊನೆಗೊಂಡಿದೆ.ಮುಂದಿನ ವರ್ಷ ನನಗೆ ನಿರ್ಣಾಯಕವಾಗಿದ್ದು ಏಶ್ಯನ್ ಚಾಂಪಿಯನ್‌ಶಿಪ್ ಹಾಗೂ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಆಡಬೇಕಾಗಿದೆ. ಆ ಎರಡೂ ಟೂರ್ನಿಗಳಲ್ಲಿ ಉತ್ತಮ ಪ್ರದರ್ಶನದ ವಿಶ್ವಾಸವಿದೆ. 2020ರ ಒಲಿಂಪಿಕ್ಸ್ ತರಬೇತಿಗೆ ಹಣಕಾಸಿನ ನೆರವು ಅಗತ್ಯವಿದೆ. ಕ್ರೀಡಾ ಸಚಿವಾಲಯ ನನ್ನ ನೆರವಿಗೆ ಬರುವ ನಿರೀಕ್ಷೆಯಲ್ಲಿದ್ದೇನೆ’’ ಎಂದು ಮನ್‌ಜಿತ್ ಹೇಳಿದರು.

 29ರ ಹರೆಯದ ಮನ್‌ಜಿತ್ ಹರ್ಯಾಣದ ಜಿಂದ್ ಜಿಲ್ಲೆಯ ಉಜ್ಹಾನಾ ಹಳ್ಳಿಯವರು. ಒಎನ್‌ಜಿಸಿ ಕೆಲಸದಒಪ್ಪಂದ ನವೀಕರಿಸಲು ನಿರಾಕರಿಸಿದಾಗ ಕ್ರೀಡೆಯಿಂದ ದೂರ ಸರಿಯಲು ನಿರ್ಧರಿಸಿದ್ದರು. ‘‘ಕೆಲಸ ಇಲ್ಲದಾಗ ಕುಗ್ಗಿಹೋಗಿದ್ದೆ. ಏನು ಮಾಡಬೇಕೆಂದು ತೋಚುತ್ತಿರಲಿಲ್ಲ. ನಾನು ರೈತ ಕುಟುಂಬದಿಂದ ಬಂದಿದ್ದೇನೆ. ನನ್ನ ಕುಟುಂಬ ತರಬೇತಿಗೆ ಸಾಕಷ್ಟು ಹಣ ನೀಡುವ ಸ್ಥಿತಿಯಲ್ಲಿಲ್ಲ. ನನ್ನ ಕೋಚ್ ಅಮರಿಶ್ ಕುಮಾರ್ ನೆರವು ಹಾಗೂ ತಂದೆ(ಮಾಜಿ ರಾಜ್ಯಮಟ್ಟದ ಶಾಟ್‌ಪುಟ್ ಪಟು)ಒತ್ತಾಯದ ಮೇರೆಗೆ ಕ್ರೀಡೆಯಲ್ಲಿ ಮುಂದುವರಿಯಲು ನಿರ್ಧರಿಸಿದ್ದೆ. ಕಳೆದ 10 ವರ್ಷಗಳ ವೃತ್ತಿಜೀವನದಲ್ಲಿ ಸಾಕಷ್ಟು ಏರಿಳಿತ ಕಂಡಿದ್ದೇನೆ’’ ಎಂದರು. ಮನ್‌ಜಿತ್ 2010ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತದ ಅಥ್ಲೆಟಿಕ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ, ಫೈನಲ್‌ಗೆ ತಲುಪಲು ವಿಫಲರಾಗಿದ್ದರು. 2013ರಲ್ಲಿ ಪುಣೆಯಲ್ಲಿ ನಡೆದ ಏಶ್ಯಾ ಚಾಂಪಿಯನ್‌ಶಿಪ್‌ನಲ್ಲಿ 4ನೇ ಸ್ಥಾನ ಪಡೆದಿದ್ದರು. 2014ರ ಫೆಡರೇಶನ್ ಕಪ್‌ನಲ್ಲಿ ಬೆಳ್ಳಿ ಜಯಿಸಿದ್ದರು. 2014ರ ಕಾಮನ್‌ವೆಲ್ತ್ ಹಾಗೂ ಏಶ್ಯನ್ ಗೇಮ್ಸ್ ನಲ್ಲಿ ಸ್ಥಾನ ಪಡೆಯದ ಮನ್‌ಜಿತ್ 2015ರಲ್ಲಿ ಬರೇಲಿಗೆ ತೆರಳಿ ಅಮರಿಶ್ ಕುಮಾರ್ ಬಳಿ ತರಬೇತಿ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News