ಶರಪೋವಾಗೆ ಶಾಕ್ ನೀಡಿದ ಸುಯರೆಝ್

Update: 2018-09-04 18:12 GMT

ನ್ಯೂಯಾರ್ಕ್, ಸೆ.4: ರಶ್ಯದ ಐದು ಬಾರಿಯ ಗ್ರಾನ್‌ಸ್ಲಾಮ್ ಚಾಂಪಿಯನ್ ಮರಿಯಾ ಶರಪೋವಾರನ್ನು ನೇರ ಸೆಟ್‌ಗಳಿಂದ ಮಣಿಸಿದ ಸ್ಪೇನ್‌ನ ಕಾರ್ಲಾ ಸುಯರೆಝ್ ನವಾರೊ ಯುಎಸ್ ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ.

ಸೋಮವಾರ ನಡೆದ ಮಹಿಳೆಯರ ಸಿಂಗಲ್ಸ್‌ನ ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ 2006ರ ಚಾಂಪಿಯನ್ ಶರಪೋವಾರನ್ನು 6-4, 6-3 ನೇರ ಸೆಟ್‌ಗಳಿಂದ ಸದೆಬಡಿದ ಸುಯರೆಝ್ ತನ್ನ 30ನೇ ಹುಟ್ಟುಹಬ್ಬವನ್ನು ತನ್ನದೇ ಶೈಲಿಯಲ್ಲಿ ಆಚರಿಸಿಕೊಂಡರು.

ಶರಪೋವಾ 38 ಅನಗತ್ಯ ತಪ್ಪಿಗೆ ಬೆಲೆ ತೆರಬೇಕಾಯಿತು. ಸುಯರೆಝ್ ರಶ್ಯದ ಶರಪೋವಾ ವಿರುದ್ಧ ಆಡಿದ್ದ 6 ಪಂದ್ಯಗಳ ಪೈಕಿ ಎರಡನೇ ಬಾರಿ ಜಯ ಸಾಧಿಸಿದ್ದಾರೆ. ಸುಯರೆಝ್ ಮುಂದಿನ ಸುತ್ತಿನಲ್ಲಿ ಕಳೆದ ವರ್ಷದ ರನ್ನರ್ಸ್ ಅಪ್ ಮ್ಯಾಡಿಸನ್ ಕೀ ಅವರನ್ನು ಎದುರಿಸಲಿದ್ದಾರೆ.

ಮ್ಯಾಡಿಸನ್ ಸ್ಲೋವಾಕಿಯದ ಡೊಮಿನಿಕಾ ಸಿಬುಲ್ಕೋವಾ ವಿರುದ್ದ ತನ್ನ ಪ್ರಾಬಲ್ಯವನ್ನು ಮುಂದುವರಿಸಿದ್ದು ಪ್ರಿ-ಕ್ವಾರ್ಟರ್ ಫೈನಲ್‌ನಲ್ಲಿ 6-1, 6-3 ನೇರ ಸೆಟ್‌ಗಳಿಂದ ಜಯ ಸಾಧಿಸಿದ್ದಾರೆ. ಸಿಬುಲ್ಕೋವಾ ವಿರುದ್ಧ ಆಡಿರುವ ಎಲ್ಲ 5 ಪಂದ್ಯಗಳಲ್ಲಿ ಜಯ ಸಾಧಿಸಿ ಅಜೇಯ ದಾಖಲೆ ಕಾಯ್ದುಕೊಂಡಿದ್ದು ಈ ವರ್ಷ ನಾಲ್ಕು ಗ್ರಾನ್‌ಸ್ಲಾಮ್ ಟೂರ್ನಿಯಲ್ಲಿ ಮೂರರಲ್ಲಿ ಕ್ವಾರ್ಟರ್ ಫೈನಲ್ ತಲುಪಿದ ಎರಡನೇ ಆಟಗಾರ್ತಿ ಎನಿಸಿಕೊಂಡರು. ಜರ್ಮನಿಯ ಕೆರ್ಬರ್ ಈ ಸಾಧನೆ ಮಾಡಿದ್ದಾರೆ.

ಜಪಾನ್‌ನ ನಯೊಮಿ ಒಸಾಕಾ ಬೆಲಾರಸ್‌ನ ಆರ್ಯನ್ ಸಬಲೆಂಕಾರನ್ನು 6-3, 2-6, 6-4 ಸೆಟ್‌ಗಳ ಅಂತರದಿಂದ ಮಣಿಸಿ ಮೊದಲ ಬಾರಿ ಗ್ರಾನ್‌ಸ್ಲಾಮ್ ಟೂರ್ನಿಯ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದಾರೆ. ಮಾರ್ಚ್‌ನಲ್ಲಿ ಇಂಡಿಯನ್ ವೆಲ್ಸ್ ಮಾಸ್ಟರ್ಸ್ ಟೂರ್ನಿಯನ್ನು ಜಯಿಸಿರುವ ಸಬಲೆಂಕಾ ಅಂತಿಮ-8ರ ಸುತ್ತಿನಲ್ಲಿ ಉಕ್ರೇನ್‌ನ ಲೆಸಿಯಾ ಸುರೆಂಕೊರನ್ನು ಮುಖಾಮುಖಿಯಾಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News