ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್: ಓಂ ಪ್ರಕಾಶ್‌ಗೆ ಚಿನ್ನ

Update: 2018-09-04 18:19 GMT

ಚಾಂಗ್ವಾನ್(ದಕ್ಷಿಣ ಕೊರಿಯಾ), ಸೆ.4: ಶೂಟರ್ ಓಂ ಪ್ರಕಾಶ್ ಮಿಥರ್ವಾಲ್ ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕ ಗೆದ್ದುಕೊಟ್ಟಿದ್ದಾರೆ.

 ಇಲ್ಲಿ ಮಂಗಳವಾರ ನಡೆದ 50 ಮೀ. ಪಿಸ್ತೂಲ್ ಇವೆಂಟ್‌ನಲ್ಲಿ 23ರ ಹರೆಯದ ಓಂ ಪ್ರಕಾಶ್ ಒಟ್ಟು 564 ಅಂಕ ಗಳಿಸುವುದರೊಂದಿಗೆ ಚಿನ್ನದ ಪದಕ ತನ್ನದಾಗಿಸಿಕೊಂಡರು. ಓಂ ಪ್ರಕಾಶ್ ಈ ವರ್ಷಾರಂಭದಲ್ಲಿ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದಿದ್ದ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ 10 ಮೀ. ಏರ್ ಪಿಸ್ತೂಲ್ ಹಾಗೂ 50 ಮೀ. ಪಿಸ್ತೂಲ್ ಸ್ಪರ್ಧೆಗಳಲ್ಲಿ ಕಂಚಿನ ಪದಕ ಜಯಿಸಿದ್ದಾರೆ.

ಓಂ ಪ್ರಕಾಶ್ ಸರ್ಬಿಯದ ಡಮಿರ್ ಮಿಕೆಕ್(562) ಹಾಗೂ ದ.ಕೊರಿಯಾದ ಡೆಮಿಯುಂಗ್ ಲೀ(560)ರನ್ನು ಸೋಲಿಸಿ ಚಿನ್ನದ ಪದಕ ಜಯಿಸಿದ್ದಾರೆ. ಹಿರಿಯ ಶೂಟರ್ ಜಿತು ರಾಯ್ ಫೈನಲ್‌ನಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದು 552 ಅಂಕ ಗಳಿಸಿ 17ನೇ ಸ್ಥಾನ ಪಡೆದಿದ್ದಾರೆ.

ಯುವ ಶೂಟರ್ ಓಂ ಪ್ರಕಾಶ್ ಸಾಧನೆಗೆ ಕೇಂದ್ರ ಕ್ರೀಡಾಸಚಿವ ರಾಜ್ಯವರ್ಧನ್ ರಾಥೋಡ್ ಅಭಿನಂದನೆ ಸಲ್ಲಿಸಿದ್ದಾರೆ.

‘‘ಕೊರಿಯಾದಲ್ಲಿ ವಿಶ್ವ ಶೂಟಿಂಗ್ ಚಾಂಪಿಯನ್‌ಶಿಪ್‌ನ ಪುರುಷರ 50 ಮೀ.ಪಿಸ್ತೂಲ್ ಇವೆಂಟ್‌ನಲ್ಲಿ ಚಿನ್ನ ಜಯಿಸಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ವರ್ಷ ಸ್ಥಿರ ಪ್ರದರ್ಶನ ನೀಡಿರುವ ಪ್ರಕಾಶ್‌ಗೆ ಅಭಿನಂದನೆ ಸಲ್ಲಿಸುವೆ’’ ಎಂದು ರಾಥೋಡ್ ಟ್ವೀಟ್ ಮಾಡಿದ್ದಾರೆ.

50 ಮೀ. ಪಿಸ್ತೂಲ್ ಸ್ಪರ್ಧೆಯ ಟೀಮ್ ವಿಭಾಗದಲ್ಲಿ ಮಿಥರ್ವಾಲ್, ರಾಯ್ ಹಾಗೂ ಮನ್‌ಜಿತ್ ಒಟ್ಟು 1,658 ಅಂಕ ಗಳಿಸುವ ಮೂಲಕ 5ನೇ ಸ್ಥಾನ ಪಡೆದಿದ್ದಾರೆ. ವೈಯಕ್ತಿಕ ವಿಭಾಗದಲ್ಲಿ ಫೈನಲ್‌ಗೆ ತಲುಪಲು ವಿಫಲವಾಗಿರುವ ಮಂಜಿತ್ 56ನೇ ಸ್ಥಾನ ಪಡೆದಿದ್ದಾರೆ.

ಇಲ್ಲಿ ನಡೆಯುತ್ತಿರುವ ಶೂಟಿಂಗ್ ಚಾಂಪಿಯನ್‌ಶಿಪ್ 2020ರ ಒಲಿಂಪಿಕ್ಸ್‌ಗೆ ಮೊದಲ ಅರ್ಹತಾ ಸ್ಪರ್ಧೆಯಾಗಿದೆ. 50 ಮೀ.ಪಿಸ್ತೂಲ್ ಸ್ಪರ್ಧೆಯು ಗೇಮ್ಸ್ ರೋಸ್ಟರ್‌ನಲ್ಲಿ ಇಲ್ಲದ ಕಾರಣ ಕೋಟಾ ಸ್ಥಾನಗಳನ್ನು ನೀಡಲಾಗಿಲ್ಲ.

ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಎದುರು ನೋಡುತ್ತಿದ್ದ ಮಹಿಳಾ ಶೂಟರ್‌ಗಳಾದ ಮನು ಭಾಕರ್ ಹಾಗೂ ಹೀನಾ ಸಿಧು 10 ಮೀ. ಏರ್ ಪಿಸ್ತೂಲ್ ಇವೆಂಟ್‌ನಲ್ಲಿ ವಿಫಲರಾಗಿದ್ದಾರೆ.

ಏಶ್ಯನ್ ಗೇಮ್ಸ್‌ನಲ್ಲಿ ಉತ್ತಮ ಪ್ರದರ್ಶನ ನೀಡಲು ವಿಫಲವಾಗಿದ್ದ 16ರ ಹರೆಯದ ಮನು ಭಾಕರ್ 574 ಅಂಕ ಗಳಿಸಿ 13ನೇ ಸ್ಥಾನ ಪಡೆದಿದ್ದಾರೆ. ಸಿಂಧು 571 ಅಂಕ ಗಳಿಸಿ 29ನೇ ಸ್ಥಾನ ಗಳಿಸಿದ್ದಾರೆ.

ಮನು, ಹೀನಾ ಹಾಗೂ ಶ್ವೇತಾ ಸಿಂಗ್ ಅವರನ್ನೊಳಗೊಂಡ ಮಹಿಳಾ ಶೂಟಿಂಗ್ ತಂಡ ಒಟ್ಟು 1,713 ಅಂಕ ಗಳಿಸಿ 4ನೇ ಸ್ಥಾನ ಗಳಿಸಿದೆ.

ಸೋಮವಾರ ಅಂಜುಮ್ ವೌದ್ಗಿಲ್ ಹಾಗೂ ಅಪೂರ್ವಿ ಚಾಂಡೇಲಾ ಮಹಿಳೆಯರ 10 ಮೀ. ಏರ್ ರೈಫಲ್ ಇವೆಂಟ್‌ನಲ್ಲಿ ಕ್ರಮವಾಗಿ ಬೆಳ್ಳಿ ಹಾಗೂ ನಾಲ್ಕನೇ ಸ್ಥಾನ ಪಡೆಯುವುದರೊಂದಿಗೆ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News