ಆದರ್ಶ ಶಿಕ್ಷಕ ವೃತ್ತಿ ರಾಷ್ಟ್ರ ನಿರ್ಮಾಣಕ್ಕೆ ಪೂರಕ: ಸಂಸದ ನಳಿನ್ ಕುಮಾರ್

Update: 2018-09-05 11:18 GMT

ಮಂಗಳೂರು, ಸೆ.5: ಗುರುವಿಗೆ ಶ್ರೇಷ್ಠತೆ ಹಾಗೂ ಪೂಜ್ಯತಾ ಭಾವನೆಯನ್ನು ಕಲ್ಪಿಸಿರುವ ಭಾರತದಲ್ಲಿ ಗುರುವಿನ ಸ್ಥಾನ ಆದರ್ಶವಾಗಿದ್ದು, ಶಿಕ್ಷಕ ವೃತ್ತಿ ರಾಷ್ಟ್ರ ನಿರ್ಮಾಣಕ್ಕೆ ಪೂರಕ ಎಂದು ಸಂಸದ ನಳಿನ್ ಕುಮಾರ್ ಕಟೀಲು ಅಭಿಪ್ರಾಯಿಸಿದ್ದಾರೆ.

ನಗರದ ಸಂತ ಅಲೋಶಿಯಸ್ ಪ್ರೌಢಶಾಲೆಯ ಸಭಾಂಗಣದಲ್ಲಿ ಇಂದು ದ.ಕ. ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಮಂಗಳೂರು ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಶಿಕ್ಷಕರ ದಿನಾಚರಣಾ ಸಮಿತಿ ಮತ್ತು ಶಿಕ್ಷಕರ ಕಲ್ಯಾಣ ನಿಧಿ ಸಹಯೋಗದಲ್ಲಿ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾರತದಲ್ಲಿ ಗುರು ವೃತ್ತಿಯಲ್ಲ ಬದಲಾಗಿ ಅದೊಂದು ವೃತ. ಆದರೆ ಇದಂದು ಅದು ವೃತ್ತಿ ಪ್ರವೃತ್ತಿಯಾಗಿ ಬದಲಾಗಿದ್ದರೂ, ಗುರುವಿನ ಸ್ಥಾನ ಮಹತ್ವದ್ದು. ಯಾವುದೇ ವೃತ್ತಿ ಹಾಳಾದರೂ ದೇಶಕ್ಕೆ ತೊಂದರೆಯಾಗುವುದಿಲ್ಲ. ಆದರೆ ಶಿಕ್ಷಕರು ಹಾಳಾದಾಗ ದೇಶವೇ ಹಾಳಾತ್ತದೆ ಎಂದು ಅವರು ಹೇಳಿದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಶಾಸಕ ವೇದವ್ಯಾಸ ಕಾಮತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂತ ಅಲೋಶಿಯಸ್ ಪ್ರೌಢಶಾಲೆಯ ರೆ.ಫಾ. ಜೆರಾಲ್ಡ್‌ಫುರ್ಟಾಡೊ, ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಅಲೋಶಿಯಸ್ ಡಿಸೋಜಾ, ತಾಲೂಕು ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಹರೀಶ್ ಕುಮಾರ್, ಪ್ರಾಥಮಿಕ ಶಾಲಾ ಸಂಘದ ಅಧ್ಯಕ್ಷೆ ಚಂಚಲಾಕ್ಷಿ, ಚಿತ್ರಕಲಾ ಶಿಕ್ಷಕರ ಸಂಘದ ಅಧ್ಯಕ್ಷ ಮೋಹನ್, ಅನುದಾನಿತ ಪ್ರಾಥಮಿಕ ಶಾಲಾ ಸಂಘದ ಅ್ಯಕ್ಷ ಜಯರಾಮ್, ಸಹ ಶಿಕ್ಷಕರ ಸಂಘದ ಅಧ್ಯಕ್ಷ ಪ್ರವೀಣ್ ಕುಟಿನ್ನೊ, ನೋಡಲ್ ಅಧಿಕಾರಿ ಉಸ್ಮಾನ್, ಮಂಜುಳಾ ಶೆಟ್ಟಿ, ಜಯರಾಂ ಮೊದಲಾದವರು ಉಪಸ್ಥಿತರಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಸ್ವಾಗತಿಸಿದರು. 

ಶಿಕ್ಷಕರಿಗೆ ಮಕ್ಕಳ ನೃತ್ಯದ ಗುರುವಂದನೆ

ಡೊಂಗರಕೇರಿ ಕೆನರಾ ಆಂಗ್ಲ ಮಾಧ್ಯಮ ಶಾಲಾ ಮಕ್ಕಳು ಸ್ವಾಗತ ನೃತ್ಯದೊಂದಿಗೆ ಕಾರ್ಯಕ್ರಮದಲ್ಲಿ ನೆರೆದಿದ್ದ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಿದರು. ಇದಕ್ಕೂ ಮೊದಲು ಮಂಗಳೂರು ಉತ್ತರ ವಲಯ ಶಿಕ್ಷಕರ ತಂಡದಿಂದ ತಾಳಮದ್ದಳೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ. 95ಕ್ಕಿಂತ ಅಧಿಕ ಅಂಕ ಪಡೆದ (ಶಿಕ್ಷಕರ ಮಕ್ಕಳು) ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.

ಕಲಿಕೆಯ ವಿಷಯವನ್ನು ಪ್ರೀತಿಸಿ ಬೋಧಿಸಿ : ಡಾ. ವಿಜಯ ಕುಮಾರಿ

ನಾಳಿನ ನಾಯಕರಾದ ಮಕ್ಕಳನ್ನು ಶಿಸ್ತುಬದ್ಧರನ್ನಾಗಿಸುವ ಮಹತ್ತರ ಜವಾಬ್ಧಾರಿ ಶಿಕ್ಷಕರದ್ದು. ಮಕ್ಕಳಿಗೆ ಪಠ್ಯ ವಿಷಯವನ್ನು ಬೋಧಿಸುವ ಶಿಕ್ಷಕ ಆ ವಿಷಯವನ್ನು ಪ್ರೀತಿಸುವ ಜತೆಗೆ ಆಳವಾದ ಜ್ಞಾನವನ್ನು ಹೊಂದಿಕೊಂಡು ಪಾಠ ಮಾಡಿದಾಗ ಮಕ್ಕಳು ಸುಲಭವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮುಲ್ಕಿ ವಿಜಯಾ ಕಾಲೇಜಿನ ಗಣಿತ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ. ವಿಜಯ ಕುಮಾರಿ ಶಿಕ್ಷಕರಿಗೆ ಕಿವಿಮಾತು ಹೇಳಿದರು.

ಶಿಕ್ಷಕರು ತಮ್ಮ ವೈಯಕ್ತಿಕ ನೋವು ಸಮಸ್ಯೆಗಳು ಮಕ್ಕಳ ಮೇಲೆ ಯಾವುದೇ ರೀತಿಯಲ್ಲಿ ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ ಅವರು, ಶಿಕ್ಷಕರು ಪಠ್ಯ ವಿಷಯಗಳಲ್ಲಿ ತಮ್ಮಲ್ಲಿರುವ ಸಂಶಯವನ್ನು ನಿವಾರಿಸಿಕೊಂಡು ವಿದ್ಯಾರ್ಥಿಗಳಿಗೆ ಬೋಧಿುವ ಕಾರ್ಯ ಮಾಡಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News