ಬಂಧಿತ ಮಾನವ ಹಕ್ಕು ಕಾರ್ಯಕರ್ತರು - ಮಾವೋವಾದಿಗಳ ಸಂಪರ್ಕಕ್ಕೆ ಪುರಾವೆಗಳಿವೆ: ಮಹಾರಾಷ್ಟ್ರ ಪೊಲೀಸರ ಹೇಳಿಕೆ

Update: 2018-09-05 15:37 GMT

ಹೊಸದಿಲ್ಲಿ, ಸೆ.5: ಭಿನ್ನಾಭಿಪ್ರಾಯ ಹೊಂದಿದ್ದರೆಂಬ ಕಾರಣಕ್ಕೆ ಐವರು ಕಾರ್ಯಕರ್ತರನ್ನು ಬಂಧಿಸಿಲ್ಲ. ಅವರು ನಿಷೇಧಿತ ಸಿಪಿಐ(ಮಾವೋವಾದಿ) ಸಂಘಟನೆಯ ಜೊತೆ ಸಂಪರ್ಕದಲ್ಲಿದ್ದರು ಎಂಬುದಕ್ಕೆ ಬಲವಾದ ಪುರಾವೆ ದೊರೆತ ಬಳಿಕ ಅವರನ್ನು ಬಂಧಿಸಲಾಗಿದೆ ಎಂದು ಮಹಾರಾಷ್ಟ್ರ ಸರಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ.

ಭಿನ್ನಾಭಿಪ್ರಾಯ ಎಂಬುದು ಪ್ರಜಾಪ್ರಭುತ್ವದ ಸುರಕ್ಷತಾ ಕವಾಟವಾಗಿದೆ ಎಂದು ಆಗಸ್ಟ್ 29ರಂದು ತಿಳಿಸಿದ್ದ ಸುಪ್ರೀಂಕೋರ್ಟ್, ಬಂಧಿತ ಕಾರ್ಯಕರ್ತರನ್ನು ಸೆ.6ರವರೆಗೆ ಗೃಹಬಂಧನದಲ್ಲಿ ಇರಿಸುವಂತೆ ಸೂಚಿಸಿತ್ತು. ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿ ಈ ಕಾರ್ಯಕರ್ತರನ್ನು ಬಂಧಿಸಿರುವುದನ್ನು ಪ್ರಶ್ನಿಸಿ ಇತಿಹಾಸಜ್ಞೆ ರೊಮಿಳಾ ಥಾಪರ್ ಹಾಗೂ ಇತರ ನಾಲ್ವರು ಸಲ್ಲಿಸಿರುವ ಮೇಲ್ಮನವಿಗೆ ಉತ್ತರಿಸಿರುವ ಮಹಾರಾಷ್ಟ್ರ ಪೊಲೀಸರು, ಬಂಧಿತ ಕಾರ್ಯಕರ್ತರು ದೇಶದಲ್ಲಿ ಹಿಂಸಾಚಾರ ಹುಟ್ಟುಹಾಕಲು ಹಾಗೂ ಭದ್ರತಾ ಪಡೆಗಳ ಮೇಲೆ ಹೊಂಚುದಾಳಿ ನಡೆಸಲು ಯೋಜನೆ ರೂಪಿಸಿದ್ದರು ಎಂದು ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಿರುವ ಥಾಪರ್, ಅರ್ಥಶಾಸ್ತ್ರಜ್ಞರಾದ ಪ್ರಭಾತ್ ಪಟ್ನಾಯಕ್ ಮತ್ತು ದೇವಕಿ ಜೈನ್, ಸಮಾಜಶಾಸ್ತ್ರಜ್ಞ ಸತೀಶ್ ದೇಶಪಾಂಡೆ ಹಾಗೂ ಕಾನೂನು ತಜ್ಞ ಮಜಾ ದಾರೂವಾಲ ಅವರ ಸ್ಥಾನಾಧಿಕಾರವನ್ನು ಪ್ರಶ್ನಿಸಿದ ಪೊಲೀಸರು, ಈ ನಾಲ್ವರು ಪ್ರಕರಣದ ತನಿಖಾ ಪ್ರಕ್ರಿಯೆಗೆ ಅಪರಿಚಿತ ವ್ಯಕ್ತಿಗಳಾಗಿದ್ದಾರೆ ಎಂದರು. ಆಗಸ್ಟ್ 28ರಂದು ವಿವಿಧೆಡೆ ಪ್ರಮುಖ ಎಡಪಂಥೀಯ ಕಾರ್ಯಕರ್ತರ ನಿವಾಸದ ಮೇಲೆ ದಾಳಿ ನಡೆಸಿದ್ದ ಮಹಾರಾಷ್ಟ್ರ ಪೊಲೀಸರು, ಮಾವೋವಾದಿಗಳೊಂದಿಗೆ ಸಂಪರ್ಕ ಇರುವ ಆರೋಪದಲ್ಲಿ ಐವರು ಕಾರ್ಯಕರ್ತರನ್ನು ಬಂಧಿಸಿದ್ದು, ಸರಕಾರದ ಈ ಕ್ರಮಕ್ಕೆ ಮಾನವ ಹಕ್ಕುಗಳ ಸಮರ್ಥಕರಿಂದ ತೀವ್ರ ಟೀಕೆ ಎದುರಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News