ಶ್ವಾಸಕೋಶದ ಸೋಂಕು: ನಟ ದಿಲೀಪ್ ಕುಮಾರ್ ಆಸ್ಪತ್ರೆಗೆ ದಾಖಲು

Update: 2018-09-05 14:55 GMT

ಹೊಸದಿಲ್ಲಿ, ಸೆ.5: ಶ್ವಾಸಕೋಶದ ಸೋಂಕಿಗೆ ತುತ್ತಾಗಿರುವ ಹಿಂದಿ ಚಿತ್ರರಂಗದ ಹಿರಿಯ ನಟ ದಿಲೀಪ್ ಕುಮಾರ್ ಅವರನ್ನು ಮುಂಬೈಯ ಲೀಲಾವತಿ ಆಸ್ಪತ್ರೆಗೆ ದಾಖಲಿಸಿರುವುದಾಗಿ ಅವರ ಕುಟುಂಬಸ್ಥರು ಟ್ವೀಟ್ ಮಾಡಿದ್ದಾರೆ.

ಈ ವರ್ಷ ಡಿಸೆಂಬರ್‌ನಲ್ಲಿ 96ನೇ ಹರೆಯಕ್ಕೆ ಕಾಲಿಡಲಿರುವ ದಿಲೀಪ್ ಕುಮಾರ್ ಕಳೆದ ಎರಡು ವರ್ಷಗಳಿಂದ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಿದ್ದು ಪದೇಪದೆ ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ. ಕಳೆದ ವರ್ಷ ಕಿಡ್ನಿ ಸಂಬಂಧಿತ ಸಮಸ್ಯೆಯಿಂದಾಗಿ ದಿಲೀಪ್ ಕುಮಾರ್ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಂದ ಬಿಡುಗಡೆಯಾ ಕೆಲವೇ ದಿನಗಳಲ್ಲಿ ನ್ಯೂಮೋನಿಯ ಪೀಡಿತರಾಗಿ ಮತ್ತೆ ಹಾಸಿಗೆ ಹಿಡಿದಿದ್ದರು.

60ರ ದಶಕದಲ್ಲಿ ದೊಡ್ಡಪರದೆಯ ಮೇಲೆ ಜನಪ್ರಿಯ ನಾಯಕನಾಗಿ ಮೆರೆದಿದ್ದ ದಿಲೀಪ್ ಕುಮಾರ್ 1998ರಲ್ಲಿ ನಟನೆಯನ್ನು ತೊರೆದಿದ್ದರು. ವಯೋಸಹಜ ಅನಾರೋಗ್ಯದಿಂದಾಗಿ ಅವರು ಕಳೆದ ಕೆಲವು ವರ್ಷಗಳಿಂದ ಹೆಚ್ಚಾಗಿ ಸಾರ್ವಜನಿಕ ಸಮಾರಂಭಗಳಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಅವರು ಆಪ್ತರು ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News