ನಡಾಲ್ ಸೆಮಿಗೆ : ಡೆಲ್ ಪೊಟ್ರೊ ಎದುರಾಳಿ

Update: 2018-09-05 18:23 GMT

ನ್ಯೂಯಾರ್ಕ್, ಸೆ.5: ಹಾಲಿ ಚಾಂಪಿಯನ್ ರಫೆಲ್ ನಡಾಲ್ ಯುಎಸ್ ಓಪನ್‌ನ ಕ್ವಾರ್ಟರ್ ಫೈನಲ್ ಹಣಾಹಣಿಯಲ್ಲಿ ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು ಐದು ಸೆಟ್‌ಗಳ ಅಂತರದ ರೋಚಕ ಜಯ ಸಾಧಿಸಿದರು.

ಮಂಗಳವಾರ 4 ಗಂಟೆ, 49 ನಿಮಿಷಗಳ ಕಾಲ ನಡೆದ ಪುರುಷರ ಸಿಂಗಲ್ಸ್ ಅಂತಿಮ-8ರ ಪಂದ್ಯದಲ್ಲಿ ನಂ.1 ಶ್ರೇಯಾಂಕದ ನಡಾಲ್ ಅವರು ಡೊಮಿನಿಕ್ ಥೀಮ್ ವಿರುದ್ಧ ಮೊದಲ ಸೆಟನ್ನು 6-0 ಅಂತರದಿಂದ ಸೋತರು. ಆ ಬಳಿಕ ತಿರುಗೇಟು ನೀಡಿದ ನಡಾಲ್ 6-4, 7-5, 6-7(4), 7-6(5) ಅಂತರದಿಂದ ಜಯ ಸಾಧಿಸುವ ಮೂಲಕ ಗ್ರಾನ್‌ಸ್ಲಾಮ್ ಟೂರ್ನಮೆಂಟ್‌ನಲ್ಲಿ ಸತತ ಮೂರನೇ ಬಾರಿ ಸೆಮಿ ಫೈನಲ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡರು.

ನಡಾಲ್ ಯುಎಸ್ ಓಪನ್‌ನಲ್ಲಿ ಸತತ ಏಳನೇ ಬಾರಿ ಕ್ವಾರ್ಟರ್ ಫೈನಲ್ ಪಂದ್ಯವನ್ನು ಜಯಿಸಿದ್ದಾರೆ. ನಡಾಲ್ 2006ರಲ್ಲಿ ಕೊನೆಯ ಬಾರಿ ಅಂತಿಮ-8ರ ಸುತ್ತಿನಲ್ಲಿ ಎಡವಿದ್ದರು. ಇದೀಗ ನಾಲ್ಕನೇ ಯುಎಸ್ ಓಪನ್ ಹಾಗೂ ಒಟ್ಟಾರೆ 18ನೇ ಗ್ರಾನ್‌ಸ್ಲಾಮ್ ಪ್ರಶಸ್ತಿಯ ಮೇಲೆ ಕಣ್ಣು ನೆಟ್ಟಿದ್ದಾರೆ.

ಶುಕ್ರವಾರ ನಡೆಯಲಿರುವ ಸೆಮಿ ಫೈನಲ್‌ನಲ್ಲಿ ನಡಾಲ್ ಅವರು 2009ರ ಚಾಂಪಿಯನ್ ಜುಯಾನ್ ಮಾರ್ಟಿನ್‌ಡೆಲ್ ಪೊಟ್ರೊರನ್ನು ಮುಖಾಮುಖಿಯಾಗಲಿದ್ದಾರೆ. ಈ ಇಬ್ಬರು ಆಟಗಾರರು 17ನೇ ಬಾರಿ ಸೆಣಸಾಡಲಿದ್ದು ನಡಾಲ್ 11 ಬಾರಿ ಗೆಲುವು ಸಾಧಿಸಿದ್ದಾರೆ. ಇದರಲ್ಲಿ ಕಳೆದ 3 ಗ್ರಾನ್‌ಸ್ಲಾಮ್ ಪಂದ್ಯಗಳು ಸೇರಿವೆ. ಕಳೆದ ವರ್ಷ ಯುಎಸ್ ಓಪನ್ ಸೆಮಿಫೈನಲ್, ಫ್ರೆಂಚ್ ಓಪನ್ ಸೆಮಿ ಫೈನಲ್ ಹಾಗೂ ಈ ವರ್ಷದ ವಿಂಬಲ್ಡನ್ ಕ್ವಾರ್ಟರ್‌ಫೈನಲ್‌ನಲ್ಲಿ ನಡಾಲ್ ಅವರು ಡೆಲ್ ಪೊಟ್ರೊಗೆ ಸೋಲುಣಿಸಿದ್ದರು.

 ಪುರುಷರ ಸಿಂಗಲ್ಸ್‌ನ ಮತ್ತೊಂದು ಕ್ವಾರ್ಟರ್ ಫೈನಲ್‌ನಲ್ಲಿ 3ನೇ ಶ್ರೇಯಾಂಕದ ಡೆಲ್ ಪೊಟ್ರೊ ಅಮೆರಿಕದ ಆಟಗಾರ ಜಾನ್ ಇಸ್ನೆರ್‌ರನ್ನು 6-7(5), 6-3, 7-6(4), 6-2 ಸೆಟ್‌ಗಳ ಅಂತರದಿಂದ ಸೋಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News