ಪೌಷ್ಠಿಕ ಆಹಾರ ಬಿಸಿಯೂಟದ ಆದ್ಯತೆ: ಮೀನಾಕ್ಷಿ ಶಾಂತಿಗೋಡು

Update: 2018-09-06 09:37 GMT

ಮಂಗಳೂರು, ಸೆ.6: ನವಕರ್ನಾಟಕ ನಿರ್ಮಾಣದ ಹೆಜ್ಜೆಯಲ್ಲಿ ಮಕ್ಕಳಿಗೆ ಪೌಷ್ಠಿಕ ಆಹಾರದ ಮೂಲಕ ಮಧ್ಯಾಹ್ನದ ಬಿಸಿಯೂಟವನ್ನು ನೀಡುವ ಕೆಲಸವನ್ನು ಮಾಡಲಾಗುತ್ತಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಅಭಿಪ್ರಾಯಿಸಿದ್ದಾರೆ.

ಅವರು ಇಂದು ಸುರತ್ಕಲ್‌ನ ಎನ್‌ಐಟಿಕೆ ಸಭಾಂಗಣದಲ್ಲಿ ಎಂಟಿಆರ್ ಫುಡ್ಸ್ ಪ್ರೈವೇಟ್ ಲಿಮಿಟೆಡ್, ಅಕ್ಷಯ ಪಾತ್ರ ಪ್ರತಿಷ್ಠಾನದ ಸಹಯೋಗದಲ್ಲಿ ಸುರತ್ಕಲ್ ಹಾಗೂ ಸುತ್ತಮುತ್ತಲಿನ 60 ಶಾಲೆಗಳ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.

ಇತರ ಜಿಲ್ಲೆಗಳಿಗೆ ಹೋಲಿಕೆ ಮಾಡಿದ್ದಲ್ಲಿ ದ.ಕ. ಜಿಲ್ಲೆಯಲ್ಲಿ ಮಕ್ಕಳಲ್ಲಿನ ಅಪೌಷ್ಠಿಕತೆ ತೀರಾ ಕಡಿಮೆ. ಹಾಗಿದ್ದರೂ ಇಸ್ಕಾನ್ ಹಾಗೂ ಎಂಟಿಆರ್ ಸಂಸ್ಥೆಗಳ ಮೂಲಕ ಸರಕಾರಿ ಶಾಲೆಗಳ ಮಕ್ಕಳಿಗೆ ಬಿಸಿಯೂಟದ ಮೂಲಕ ಪೌಷ್ಠಿಕ ಆಹಾರವನ್ನು ಒದಗಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಎಂಟಿಆರ್ ಸಿಇಒ ಸಂಜಯ್ ಶರ್ಮಾ ಮಾತನಾಡಿ, ಸಂಸ್ಥೆಯಿಂದ ಮೂರನೆ ವರ್ಷದ ಕಾರ್ಯಕ್ರಮ ಇದಾಗಿದೆ. ಅಕ್ಷಯ ಪಾತ್ರ ಪ್ರತಿಷ್ಠಾನದ ನೆರವಿನೊಂದಿಗೆ ಮೊದಲ ವರ್ಷ 20 ಶಾಲೆಗಳ 2000 ಮಕ್ಕಳಿಗೆ ಒಂದು ವಒರ್ಷದವರೆಗೆ ಬಿಸಿಯೂಟ ಒದಗಿಸಲಾಗಿತ್ತು. ಇದೀಗ ಈ ವರ್ಷ 60 ಶಾಲೆಗಳ 6000ಕ್ಕೂ ಅಧಿಕ ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ಒದಗಿಸಲಾಗುವುದು ಎಂದ ಅವರು ಹೇಳಿದರು.

ಈ ಸಂದರ್ಭ ಉಪಸ್ಥಿತರಿದ್ದ ಸಂಸ್ಥೆಯ ಸಿಎಫ್‌ಒ ಗಣೇಶ್ ಶೆಣೈ ಮತ್ತು ಎಂಟಿಆರ್ ಸಿಎಂಒ ಸುನಯ್ ಬಾಸಿನ್, ಅಕ್ಷಯ ಪಾತ್ರ ಪ್ರತಿಷ್ಠಾನದ ಮುಖ್ಯಸ್ಥ ಕಾರುಣ್ಯಾ ಸಾಗರ್, ಪ್ರತಿಷ್ಠಾನದ ಮುಖ್ಯ ಮಾರುಕಟ್ಟೆ ಅಧಿಕಾರಿ ಸಂದೀಪ್ ತಲ್ವಾರ್ ಮೊದಲಾದವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸುಧಾಕರ ರಾವ್ ಪೇಜಾವರ ಕಾರ್ಯಕ್ರಮ ನಿರೂಪಿಸಿದರು. ಶಶಿಕಲಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News