ಟೋಲ್‌ಗಳಲ್ಲಿ ಸ್ಥಳೀಯ ವಾಹನಗಳಿಂದ ಹಣ ಸಂಗ್ರಹಕ್ಕೆ ಆಕ್ಷೇಪ : ಉಡುಪಿ ಜಿಪಂ ಸಾಮಾನ್ಯ ಸಭೆಯಲ್ಲಿ ನಿರ್ಣಯ

Update: 2018-09-06 13:30 GMT

ಉಡುಪಿ, ಸೆ.6: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇರುವ ಹೆಜಮಾಡಿ ಹಾಗೂ ಸಾಸ್ತಾನ ಟೋಲ್‌ಗೇಟ್‌ಗಳಲ್ಲಿ ಉಡುಪಿ ಜಿಲ್ಲೆಯ ವಾಹನಗಳಿಂದ ಟೋಲ್ ಸಂಗ್ರಹ ಮಾಡಬಾರದು ಮತ್ತು ಯಾವುದೇ ಕಾರಣಕ್ಕೂ ಗ್ರಾಪಂ ರಸ್ತೆಗಳಲ್ಲಿ ಟೋಲ್ ಗೇಟ್‌ಗಳನ್ನು ನಿರ್ಮಿಸಬಾರದೆಂಬ ಕುರಿತ ನಿರ್ಣಯವನ್ನು ಗುರುವಾರ ನಡೆದ ಉಡುಪಿ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ತೆಗೆದು ಕೊಳ್ಳಲಾಯಿತು.

ಮಣಿಪಾಲ ರಜತಾದ್ರಿಯಲ್ಲಿರುವ ಜಿಪಂ ಸಭಾಂಗದಣದಲ್ಲಿ ಜಿಪಂ ಅಧ್ಯಕ್ಷ ದಿನಕರ ಬಾಬು ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯ ಜನಾರ್ದನ ತೋನ್ಸೆ, ಜಿಲ್ಲೆಯ ಎರಡು ಟೋಲ್‌ಗಳಲ್ಲಿ ಸ್ಥಳೀಯರಿಂದ ಹಣ ಪಡೆದುಕೊಳ್ಳಲಾಗುತ್ತಿದೆ. ಇದರ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕೆ ನಿಲ್ಲಿಸಲಾಗಿದೆ. ಮುಂದೆ ಯಾವುದೇ ಕಾರಣಕ್ಕೂ ಕೆಎ 20 ನಂಬರಿನ ಸ್ಥಳೀಯ ವಾಹನಗಳಿಂದ ಹಣ ಪಡೆಯಬಾರದು ಎಂದು ಒತ್ತಾಯಿಸಿದರು.

'ನವಯುಗ ಕಂಪೆನಿಯವರು ಹೆಜಮಾಡಿ ಗ್ರಾಪಂ ರಸ್ತೆಯಲ್ಲೂ ಟೋಲ್ ಗೇಟ್ ಸ್ಥಾಪಿಸಿ ಟೋಲ್ ಸಂಗ್ರಹಿಸುತ್ತಿದ್ದಾರೆ. ಇದರಿಂದ ಸ್ಥಳೀಯ ಟ್ಯಾಕ್ಸಿ ಚಾಲಕರಿಗೆ ತೊಂದರೆ ಆಗುತ್ತಿದೆ. ಇವರಿಗೆ ಇಲ್ಲಿ ಗೇಟ್ ನಿರ್ಮಿಸಲು ಅನು ಮತಿ ಕೊಟ್ಟವರು ಯಾರು' ಎಂದು ರೇಶ್ಮಾ ಉದಯ ಶೆಟ್ಟಿ ಪ್ರಶ್ನಿಸಿದರು. ಇದಕ್ಕೆ ವಿಧಾನ ಪರಿಷತ್ ಸದಸ್ಯ ಪ್ರತಾಪ್‌ಚಂದ್ರ ಶೆಟ್ಟಿ ಧ್ವನಿಗೂಡಿಸಿದರು.

ಇದಕ್ಕೆ ಉತ್ತರಿಸಿದ ನವಯುಗ ಕಂಪೆನಿಯ ಇಂಜಿನಿಯರ್ ರಾಘವೇಂದ್ರ, ಕೆಲವು ವಾಹನಗಳು ಹೆದ್ದಾರಿಯ ಟೋಲ್ ತಪ್ಪಿಸಿಕೊಂಡು ಒಳ ರಸ್ತೆಯಲ್ಲಿ ಹೋಗುತ್ತಿವೆ. ಅದಕ್ಕಾಗಿ ರಾ.ಹೆ. ಪ್ರಾಧಿಕಾರ ಸ್ವಾಧೀನಪಡಿಸಿರುವ 60 ಮೀ. ವ್ಯಾಪ್ತಿಯ ಒಳರಸ್ತೆಯಲ್ಲಿ ಟೋಲ್ ಗೇಟ್ ಸ್ಥಾಪಿಸಿ ಕೇವಲ ಭಾರೀ ವಾಹನಗಳಿಂದ ಟೋಲ್ ಸಂಗ್ರಹಿಸಲಾಗುತ್ತಿದೆ. ಈ ಗೇಟು ನಿರ್ಮಿಸಲು ಜಿಲ್ಲಾಧಿಕಾರಿ ಹಾಗೂ ಪ್ರಿನ್ಸಿಪಲ್ ಸೆಕ್ರೆಟರ್‌ಯಿಂದ ಅನುಮತಿ ಪಡೆದುಕೊಳ್ಳಲಾಗಿದೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಿರ್ಣಯಿಸಿದಂತೆ ಅಕ್ಟೋಬರ್ ತಿಂಗಳವರೆಗೆ ಸ್ಥಳೀಯ ವಾಹನಗಳಿಂದ ಹಣ ಸಂಗ್ರಹ ಮಾಡುತ್ತಿಲ್ಲ ಎಂದು ನವಯುಗ ಕಂಪೆನಿಯ ಇಂಜಿನಿಯರ್ ರಾಘವೇಂದ್ರ ತಿಳಿಸಿದರು.

ನಾವುಂದ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದ ಸದಸ್ಯರೊಬ್ಬರ ಸಮಸ್ಯೆಗೆ ಉತ್ತರಿಸಲು ಗುತ್ತಿಗೆ ಕಂಪೆನಿ ಐಆರ್‌ಬಿ ಅಧಿಕಾರಿಗಳು ಸಭೆಯಲ್ಲಿ ಗೈರು ಹಾಜರಾಗಿದ್ದು, ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಸಭೆಯಲ್ಲಿ ಒತ್ತಾಯಿಸ ಲಾಯಿತು. ಈ ಸಂಬಂಧ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿ, ಸಂಬಂಧಪಟ್ಟ ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಲಾಗುವುದು ಎಂದು ಅಧ್ಯಕ್ಷ ದಿನಕರ ಬಾಬು ಹೇಳಿದರು.

140ಕೋಟಿ ಆಸ್ತಿಪಾಸ್ತಿ ನಷ್ಟ
ಪ್ರಾಕೃತಿಕ ವಿಕೋಪದಿಂದ ಜಿಲ್ಲೆಯಲ್ಲಿ ಉಂಟಾಗಿರುವ ನಷ್ಟದ ಕುರಿತು ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಕೋಟ್ಯಾನ್, ಸದಸ್ಯರಾದ ಸುಮೀತ್ ಶೆಟ್ಟಿ, ಗೀತಾಂಜಲಿ ಸುವರ್ಣ, ರೇಶ್ಮಾ ಉದಯ ಶೆಟ್ಟಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್, ಬೆಳೆ ಮತ್ತು ಮನೆ ಹಾನಿ ಹೊರತುಪಡಿಸಿ, ಲೋಕೋಪಯೋಗಿ, ಬಂದರು ಮತ್ತು ಮೀನುಗಾರಿಕೆ, ಪಂಚಾಯತ್‌ರಾಜ್ ಸೇರಿದಂತೆ ವಿವಿಧ ಇಲಾಖೆಗಳ ವ್ಯಾಪ್ತಿಯಲ್ಲಿ ಒಟ್ಟು 140ಕೋಟಿ ರೂ. ನಷ್ಟ ಉಂಟಾಗಿದೆ ಎಂದು ತಿಳಿಸಿದರು.

ಉಡುಪಿ ತಾಲೂಕಿನಲ್ಲಿ 20ಕೋಟಿ, ಕುಂದಾಪುರ ತಾಲೂಕಿನಲ್ಲಿ 17 ಕೋಟಿ, ಕಾರ್ಕಳದಲ್ಲಿ 35ಕೋಟಿ, ಬೈಂದೂರಿನಲ್ಲಿ 22.59 ಕೋಟಿ, ಬ್ರಹ್ಮಾವರ ದಲ್ಲಿ 19ಕೋಟಿ, ಕಾಪು ತಾಲೂಕಿನಲ್ಲಿ 26ಕೋಟಿ ರೂ. ನಷ್ಟ ಅಂದಾಜಿಸಿ, ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದರು.

ಸರಕಾರದಿಂದ ತುರ್ತು ಪರಿಹಾರವಾಗಿ ಈಗಾಗಲೇ ಮನೆ, ಜಾನುವಾರು, ಜೀವ ಹಾನಿಗೆ 4ಕೋಟಿ ರೂ. ಹಾಗೂ ರಸ್ತೆ, ಶಾಲಾ ಕಟ್ಟಡ ಸೇರಿದಂತೆ ಇತರ ಆಸ್ತಿಪಾಸ್ತಿ ನಷ್ಟ ಪರಿಹಾರಕ್ಕೆ 14.50ಕೋಟಿ ರೂ. ಜಿಲ್ಲಾಡಳಿತಕ್ಕೆ ಬಿಡುಗಡೆ ಯಾಗಿದೆ. ಈ ಬಗ್ಗೆ ಕ್ರಿಯಾ ಯೋಜನೆ ಸಿದ್ಧಪಡಿಸಬೇಕಾಗಿದೆ ಎಂದು ಜಿಪಂ ಮುಖ್ಯಕಾರ್ಯ ನಿರ್ವಹಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದರು.

ಉಡುಪಿ ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದ 140ಕೋಟಿ ರೂ. ನಷ್ಟ ಉಂಟಾಗಿದೆ. ಆದರೆ ಸರಕಾರ ಕೇವಲ 14 ಕೋಟಿ ರೂ. ಬಿಡುಗಡೆ ಮಾಡಿದೆ. ಸರಕಾರದ ಧೋರಣೆಯ ವಿರುದ್ಧ ಖಂಡನಾ ನಿರ್ಣಯ ಮಾಡಬೇಕು. ಸೆ.7 ರಂದು ಉಡುಪಿಗೆ ಆಗಮಿಸುವ ಮುಖ್ಯಮಂತ್ರಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಬೇಕು ಎಂದು ರೇಶ್ಮಾ ಉದಯ ಶೆಟ್ಟಿ ಒತ್ತಾಯಿಸಿದರು.

ಕೆಲವು ಶಾಲೆಗಳಲ್ಲಿ ಮುಖ್ಯೋಪಾಧ್ಯಾಯರು ತಮಗೆ ಬಿಲ್‌ಪಾಸ್ ಮಾಡಿ ಕೊಳ್ಳಲು ಅನುಕೂಲವಾಗುವಂತೆ ಶಾಲಾಭಿವೃದ್ಧಿ ಸಮಿತಿಗಳಿಗೆ ಅನಕ್ಷರಸ್ಥ ಪೋಷಕರನ್ನು ಸದಸ್ಯರನ್ನಾಗಿ ನೇಮಕ ಮಾಡಿಕೊಳ್ಳುತ್ತಿದ್ದಾರೆ. ಆದುದರಿಂದ ಸದಸ್ಯರ ನೇಮಕ ಜವಾಬ್ದಾರಿಯನ್ನು ಆಯಾ ಗ್ರಾಪಂಗೆ ನೀಡಬೇಕು ಎಂದು ಜನಾರ್ದನ ತೋನ್ಸೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಬಾಬು ಶೆಟ್ಟಿ, ಸಮಿತಿ ಸದಸ್ಯರ ಆಯ್ಕೆ ಯಲ್ಲಿ ಗ್ರಾಪಂಗಳು ಹಸ್ತಕ್ಷೇಪ ಮಾಡುವುದು ಸರಿಯಲ್ಲ. ಪೋಷಕರ ಸಭೆಯಲ್ಲೇ ಸದಸ್ಯರ ನೇಮಕ ಪ್ರಕ್ರಿಯೆ ನಡೆಯಬೇಕು ಎಂದರು.

ನಾಳೆ ಉಡುಪಿ ಜಿಲ್ಲೆಗೆ ಮುಖ್ಯಮಂತ್ರಿ ಆಗಮಿಸುವ ಹಿನ್ನೆಲೆಯಲ್ಲಿ ಜಿಪಂ ಸಭೆಯನ್ನು ಮಧ್ಯಾಹ್ನ ಒಂದು ಗಂಟೆಗೆ ಮೊಟಕುಗೊಳಿಸಿ ಸೆ.11ಕ್ಕೆ ಮುಂದೂಡ ಲಾಯಿತು. ಸಭೆಯಲ್ಲಿ ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಶಶಿಕಾಂತ್ ಪಡುಬಿದ್ರೆ, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು.

6714 ಬಿಪಿಎಲ್ ಅರ್ಜಿಗಳು ಬಾಕಿ
ಉಡುಪಿ ಜಿಲ್ಲೆಯಲ್ಲಿ ಬಿಪಿಎಲ್ ಪಡಿತರ ಚೀಟಿಗೆ 25488 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅದರಲ್ಲಿ 19274 ಅರ್ಜಿಗಳನ್ನು ವಿಲೇವಾರಿ ಮಾಡ ಲಾಗಿದೆ. 2017-18ನೆ ಸಾಲಿನಲ್ಲಿ 6714 ಅರ್ಜಿಗಳು ಬಾಕಿ ಇವೆ. ಚುನಾ ವಣೆಯ ಹಿನ್ನೆಲೆಯಲ್ಲಿ ವಿಲೇವಾರಿಯನ್ನು ಸ್ಥಗಿತಗೊಳಿಸಲಾಗಿದ್ದು, ಅದನ್ನು ಮುಂದುವರೆಸಲು ಈವರೆಗೆ ಅನುಮತಿ ಬಂದಿಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕ ಎಸ್.ಆರ್.ಭಟ್ ಸಭೆಗೆ ಮಾಹಿತಿ ನೀಡಿದರು.

2017ರ ಜನವರಿ ತಿಂಗಳ ಹಿಂದೆ ಸಲ್ಲಿಸಿದ ಅರ್ಜಿಗಳನ್ನು ರದ್ದುಗೊಳಿಸಿ ಹೊಸ ಅರ್ಜಿಗಳನ್ನು ನೀಡಲು ಸೂಚನೆ ನೀಡಲಾಗಿದೆ. ಜುಲೈ ತಿಂಗಳ ನಂತರ ಸಲ್ಲಿಕೆಯಾದ ಅರ್ಜಿಗಳಿಗೆ ಕುಟುಂಬದ ಒಬ್ಬರು ಆದಾಯ ಪ್ರಮಾಣಪತ್ರ ನೀಡಿದರೆ ಸಾಕು. ಅದಕ್ಕಿಂತ ಹಿಂದಿನ ಹಳೆಯ ಅರ್ಜಿಗಳಿಗೆ ಕುಟುಂಬದ ಎಲ್ಲರ ಆದಾಯ ಪ್ರಮಾಣವನ್ನು ಸಲ್ಲಿಕೆ ಮಾಡಬೇಕು ಎಂದು ಅವರು ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು.

ವಿಧಾನಸಭಾ ಚುನಾವಣೆಗೆ ಎರಡು ತಿಂಗಳ ಮೊದಲು ಸ್ಥಳದಲ್ಲೇ ಪಡಿತರ ಚೀಟಿಗಳನ್ನು ವಿತರಿಸಲಾಗುತ್ತಿತ್ತು. ಅದೇ ವ್ಯವಸ್ಥೆಯನ್ನು ಮತ್ತೆ ಆರಂಭಿಸಬೇಕು. ಚುನಾವಣಾ ಸಂದರ್ಭದಲ್ಲಿ ಒಂದು ನೀತಿ, ಈಗ ಒಂದು ನೀತಿ ಸರಿಯಲ್ಲ ಎಂದು ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ ಟೀಕಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News