ಜಲತಜ್ಞ ಶ್ರೀಪಡ್ರೆಗೆ ‘ಡಾ.ಕಾರಂತ ಹುಟ್ಟೂರ ಪುರಸ್ಕಾರ’

Update: 2018-09-06 13:38 GMT

ಉಡುಪಿ, ಸೆ.6: ಕೋಟ ಡಾ.ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರತಿ ಷ್ಠಾನ, ಕೋಟತಟ್ಟು ಗ್ರಾಮ ಪಂಚಾಯತ್, ಡಾ.ಶಿವರಾಮ ಕಾರಂತ ಥೀಮ್ ಪಾರ್ಕ್ ವತಿಯಿಂದ ನೀಡುವ 2018ನೆ ಸಾಲಿನ ಡಾ.ಕಾರಂತ ಹುಟ್ಟೂರ ಪುರಸ್ಕಾರಕ್ಕೆ ಜಲತಜ್ಞ, ಅಡಿಕೆ ಪತ್ರಿಕೆಯ ಸಂಪಾದಕ ಶ್ರೀಪಡ್ರೆ ಅವರನ್ನು ಆಯ್ಕೆ ಮಾಡಲಾಗಿದೆ.

ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಪ್ರತಿಷ್ಠಾನದ ಕಾರ್ಯಾ ಧ್ಯಕ್ಷ ಆನಂದ ಸಿ.ಕುಂದರ್ ಈ ವಿಚಾರವನ್ನು ಪ್ರಕಟಿಸಿದರು. ಕಾರಂತರ ಆಸಕ್ತಿ ಕ್ಷೇತ್ರವಾಗಿರುವ ಪರಿಸರ ವಿಭಾಗದಿಂದ ಶ್ರೀಪಡೆಯವರನ್ನು ಈ ಪುರಸ್ಕಾರಕ್ಕೆ ಸಮಿತಿ ಆಯ್ಕೆ ಮಾಡಿದ್ದು, ಅ.10ರಂದು ಡಾ.ಶಿವರಾಮ ಕಾರಂತರ ಹುಟ್ಟು ಹಬ್ಬದ ದಿನ ಈ ಪ್ರಶಸ್ತಿಯನ್ನು ಕೋಟ ಕಾರಂತ ಥೀಮ್‌ಪಾರ್ಕ್‌ನಲ್ಲಿ ಪ್ರದಾನ ಮಾಡಲಾಗುವುದು ಎಂದರು.

ಕಾರಂತರ ಜನ್ಮದಿನೋತ್ಸವದ ಅಂಗವಾಗಿ ‘ಅತೀತ -2018’(ಬೆಡಗಿನ ಬೆರಗು) ಸಾಂಸ್ಕೃತಿಕ- ಸಾಹಿತ್ಯಿಕ ಕಾರ್ಯಕ್ರಮಗಳನ್ನು ಅ.1ರಿಂದ 10ರವರೆಗೆ ಥೀಮ್‌ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಾಗಿದೆ. ವಿವಿಧ ಸಮ್ಮೇಳನ, ಜಯಂತ್ ಕಾಯ್ಕಿಣಿ ಅವರ ವಿಶೇಷ ಉಪನ್ಯಾಸ, ಉದಯ ಟಿವಿ ಹರಟೆ ಖ್ಯಾತಿಯ ಗುಂಡುರಾವ್ ಅವರ ಹರಟೆ- ವಿಚಾರಗೋಷ್ಠಿ, ಚಲನಚಿತ್ರ ಪ್ರದರ್ಶನ, ತೆಂಕು ಬಡಗಿನ ಯಕ್ಷಗಾನ, ನೃತ್ಯ ವೈಭವ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕೋಟತಟ್ಟು ಗ್ರಾಪಂ ಅಧ್ಯಕ್ಷ ರಘು ತಿಂಗಳಾಯ, ಆಯ್ಕೆ ಸಮಿತಿ ಸದಸ್ಯ ಯು.ಎಸ್.ಶೆಣೈ, ಪ್ರತಿಷ್ಠಾನದ ಟ್ರಸ್ಟಿ ಸುಬ್ರಾಯ ಆಚಾರ್ಯ, ಥೀಮ್‌ಪಾರ್ಕ್ ಮೇಲ್ವಿಚಾರಕ ಪ್ರಶಾಂತ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News