ಮಂಗಳೂರು: ಫೇಸ್‌ಬುಕ್ ಪೋಸ್ಟ್ ಹಾಕಿದ ವ್ಯಕ್ತಿಗೆ ಜೈಲು

Update: 2018-09-07 04:07 GMT

►ಜಾಮೀನು ಪಡೆದು ಹೊರಬಂದ ಬಳಿಕ ಮತ್ತೆ ನೋಟಿಸ್ ಜಾರಿ

ಮಂಗಳೂರು, ಸೆ.6: ಫೇಸ್‌ಬುಕ್‌ ನಲ್ಲಿ ಪೋಸ್ಟ್ ಒಂದನ್ನು ಹಾಕಿದ್ದಕ್ಕೆ ಸಂಬಂಧಿಸಿ ಬಂದರು (ಉತ್ತರ) ಠಾಣೆಯ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ ವ್ಯಕ್ತಿಯೋರ್ವನನ್ನು ಜೈಲಿಗೆ ತಳ್ಳಿದ ವಿದ್ಯಮಾನ ತಡವಾಗಿ ಬೆಳಕಿಗೆ ಬಂದಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ.

ಈ ಮಧ್ಯೆ ಬಂಧನಕ್ಕೊಳಗಾದ ವ್ಯಕ್ತಿ ಅಶ್ರಫ್ ಎಂ. ಸಾಲೆತ್ತೂರು ತನಗಾದ ಅನ್ಯಾಯದ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ನೀಡಲು ಮುಂದಾಗಿದ್ದು, ಕಾನೂನು ಹೋರಾಟಕ್ಕೂ ಸಿದ್ಧರಾಗಿದ್ದಾರೆ.

'ಋತುಮತಿಯಾದ ಮಹಿಳೆಯರಿಗೆ ಶಬರಿಮಲೆ ಪ್ರವೇಶಿಸಲು ಕೋರ್ಟ್ ಅವಕಾಶ ನೀಡಿದ್ದೇ ಕೇರಳದಲ್ಲಿ ನೆರೆ ಬರಲು ಕಾರಣ' ಎಂದು ಕೆಲವು ಮಂದಿ ವ್ಯಕ್ತಪಡಿಸಿದ ಅನಿಸಿಕೆಗೆ ಪ್ರತಿಯಾಗಿ ಫೇಸ್‌ ಬುಕ್ ‌ನಲ್ಲಿ ಸಕ್ರಿಯರಾಗಿರುವ ಅಶ್ರಫ್ ಎಂ. ಸಾಲೆತ್ತೂರು “ಹಾಗಾದರೆ ಪರಶುರಾಮನ ಸೃಷ್ಟಿ ತುಳುನಾಡಲ್ಲಿ ನೆರೆ ಬರಲು ಕಾರಣ ಏನು?” ಎಂದು ಪ್ರಶ್ನಿಸಿದ್ದರು. ಅಶ್ರಫ್ ರ ಈ ಪೋಸ್ಟನ್ನು ಕೆಲವರು ಬೆಂಬಲಿಸಿದ್ದರೆ, ಕೆಲವರು ವಿರೋಧಿಸಿದ್ದರು.

ಇದನ್ನೇ ಆಧಾರವಾಗಿಟ್ಟುಕೊಂಡ ಬಂದರ್ ಠಾಣೆಯ ಪೊಲೀಸರು ಅಶ್ರಫ್‌ ರ ಮೇಲೆ ಸ್ವಯಂ ಪ್ರೇರಿತವಾಗಿ ಸೆ.153, 505(2)ರಂತೆ ಪ್ರಕರಣ ದಾಖಲಿಸಿಕೊಂಡು ಆ.22ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು ಎನ್ನಲಾಗಿದೆ. ಅದರಂತೆ ನ್ಯಾಯಾಲಯವು ಅಶ್ರಫ್‌ಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಒಂದು ವಾರ ಜೈಲಿನಲ್ಲಿ ಕಳೆದ ಅಶ್ರಫ್ ಜಾಮೀನು ಪಡೆದುಕೊಂಡ ಬಳಿಕ ತನಗೆ ಅನ್ಯಾಯವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ. ಇದೀಗ ಪೊಲೀಸರು ಸೆ.4ರಂದು ಅಶ್ರಫ್‌ಗೆ ನೋಟಿಸ್ ಜಾರಿಗೊಳಿಸಿ, “ಜಾಮೀನಿನ ಅವಧಿಯಲ್ಲಿ ನೀವು ಮತ್ತೆ ಇದೇ ವಿಚಾರದಲ್ಲಿ ಫೇಸ್‌ ಬುಕ್‌ ನಲ್ಲಿ ಟೀಕೆ ಮಾಡಿದ್ದೀರಿ. ಹಾಗಾಗಿ ಮುಂದಿನ ತನಿಖೆಗಾಗಿ ನೋಟಿಸ್ ಸಿಕ್ಕಿದ ತಕ್ಷಣ ತನಿಖಾಧಿಕಾರಿಯ ಮುಂದೆ ಹಾಜರಾಗಬೇಕು. ಇಲ್ಲದಿದ್ದರೆ ನಿಮ್ಮ ಜಾಮೀನು ರದ್ಧತಿಗೆ ನ್ಯಾಯಾಲಯಕ್ಕೆ ಕೋರಿಕೆ ಪತ್ರ ಸಲ್ಲಿಸಲಾಗುವುದು” ಎಂದು ಸೂಚಿಸಿದ್ದಾರೆಂದು ಆರೋಪಿಸಲಾಗಿದೆ.

ವಿವಸ್ತ್ರಗೊಳಿಸಿದರು,  ನಗದು ಸಹಿತ ಸೊತ್ತು ವಶಪಡಿಸಿದರು: ಆರೋಪ

“ಅ.21ರಂದು ಸಿಸಿಬಿ ಪೊಲೀಸ್ ಜಬ್ಬಾರ್ ಎಂಬವರು ನನಗೆ ಕರೆ ಮಾಡಿ ನೀನು ಠಾಣೆಗೆ ಬಾ... ಸ್ವಲ್ಪ ಮಾತನಾಡಲಿಕ್ಕಿದೆ. 5 ನಿಮಿಷಗಳಲ್ಲಿ ಬಿಡುತ್ತೇವೆ ಎಂದರು. ಅವರ ಪರಿಚಯವಿದ್ದ ಕಾರಣ ನಾನು ಸಿಸಿಬಿ ಠಾಣೆಗೆ ಹೋದೆ. ಅಲ್ಲಿ ನನ್ನ ಫೇಸ್‌ ಬುಕ್ ಬರಹಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳಿದ ಪೊಲೀಸರು ಬಳಿಕ ನನ್ನನ್ನು ಅವರದೇ ವಾಹನದಲ್ಲಿ ಬಂದರ್ ಠಾಣೆಗೆ ಕೊಂಡೊಯ್ದರು. ಅಲ್ಲಿ ಇನ್‌ಸ್ಪೆಕ್ಟರ್ ಸಹಿತ ಪೊಲೀಸರು ಮೇಲಿಂದ ಮೇಲೆ ಇದೇ ಪ್ರಶ್ನೆಯನ್ನು ಕೇಳಿದರು. ಪ್ರಚಲಿತ ವಿದ್ಯಮಾನಕ್ಕೆ ಸಂಬಂಧಿಸಿ ಅದೂ ಸಂವಿಧಾನ ವಿರೋಧಿ ಹೇಳಿಕೆಗೆ ನಾನು ಪ್ರತಿಕ್ರಿಯಿಸುತ್ತಲೇ ಇರುತ್ತೇನೆ ಎಂದೆ. ಹಾಗಿದ್ದರೆ, ದಿಲ್ಲಿಯಲ್ಲಿ ಸಂವಿಧಾನದ ಪ್ರತಿ ಸುಟ್ಟು ಹಾಕಿದರಲ್ಲ, ಅದರ ಬಗ್ಗೆಯೂ ಬರೆಯುತ್ತೀಯಾ?ಎಂದು ಕೇಳಿದರು. ಹೌದು... ನಾನು ಬರೆಯುತ್ತೇನೆ ಎಂದು ಉತ್ತರಿಸಿದೆ. ಅಲ್ಲದೆ, ನನ್ನ ಬಳಿ ಇದ್ದ 450 ರೂ. ಮೆಮೊರಿ ಕಾರ್ಡ್, ಇಯರ್ ಫೋನ್, ವಾಚ್, ಲೆದರ್ ಬೆಲ್ಟ್‌ ವಾಹನದ ಆರ್‌ಸಿ ಸಹಿತ ಎಲ್ಲವನ್ನೂ ಕಿತ್ತುಕೊಂಡರು. ನನ್ನ ಬಯೊಡಾಟ ಎಲ್ಲಾ ಕೇಳಿ ಬರೆದುಕೊಂಡರು. ನನ್ನನ್ನು ಬಂಧಿಸುವುದು ಖಾತ್ರಿಯಾಯಿತು. ನಾಳೆ ಬಕ್ರೀದ್ ಹಬ್ಬ, ಆಚರಿಸಲು ಅವಕಾಶ ಮಾಡಿಕೊಡಿ ಎಂದರೂ ಕೇಳಲಿಲ್ಲ. ರಾತ್ರಿ 12ರವರೆಗೂ ವಿಚಾರಣೆ ಮಾಡಿದರಲ್ಲದೆ, ಬಳಿಕ ವಿವಸ್ತ್ರಗೊಳಿಸಿ ಕತ್ತಲ ಕೋಣೆಗೆ ತಳ್ಳಿದರು. ಅಲ್ಲಿ ಸೊಳ್ಳೆ, ಇಲಿ, ಹಾತೆ ಕಾಟವಿತ್ತು. ಹಾಗಾಗಿ ನಿದ್ದೆಯಿಲ್ಲ. ಮರುದಿನ ಹಬ್ಬವೂ ಇಲ್ಲ. ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ವಾಚ್, ಎಟಿಎಂ, ಆರ್‌ ಸಿ ವಾಪಸ್ ಮರಳಿಸಿದರು. ನಾವು ಹೇಳಿದಂತೆ ಮಾತ್ರ ನ್ಯಾಯಾಧೀಶರ ಬಳಿ ಹೇಳಬೇಕು ಎಂದರು. ಉಪಾಯವಿಲ್ಲದೆ ನಾನು ಪೊಲೀಸರು ಹೇಳಿದಂತೆ ನುಡಿದೆ. ಅ.22ರಿಂದ 28ರವರೆಗೆ ಜೈಲಲ್ಲೇ ಇದ್ದು, ಜಾಮೀನಿನ ಬಳಿಕ ಹೊರಬಂದೆ. ನನಗಾದ ಅನ್ಯಾಯದ ವಿರುದ್ಧ ಮತ್ತೆ ಫೇಸ್‌ಬುಕ್‌ನಲ್ಲಿ ಬರೆದೆ. ಅದನ್ನು ಮುಂದಿಟ್ಟುಕೊಂಡು ನನಗೆ ಇದೀಗ ನೋಟಿಸ್ ಜಾರಿಗೊಳಿಸಿದ್ದಾರೆ. ನನ್ನನ್ನು ವಿವಸ್ತ್ರಗೊಳಿಸಿದ್ದಲ್ಲದೆ, ಹಣ ಮತ್ತಿತರ ಸೊತ್ತುಗಳನ್ನು ಕಿತ್ತುಕೊಂಡುದುದರ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ನೀಡಿ ನ್ಯಾಯ ಪಡೆಯುತ್ತೇನೆ” ಎಂದು ಅಶ್ರಫ್ 'ವಾರ್ತಾಭಾರತಿ'ಗೆ ತಿಳಿಸಿದ್ದಾರೆ.

ಬರಹಕ್ಕೆ ಪ್ರತಿಕ್ರಿಯಿಸಿದವರ ವಿರುದ್ಧವೂ ಕ್ರಮ

“ಅಶ್ರಫ್ ಫೇಸ್‌ಬುಕ್‌ನಲ್ಲಿ ಪ್ರಕಟಿಸಿದ ಬರಹ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಅಪಾಯವಿತ್ತು. ಹಾಗಾಗಿ ಅಶ್ರಫ್ ವಿರುದ್ಧ ನಾವು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದೇವೆ. ಹೀಗೆ ಪ್ರಕರಣ ದಾಖಲಿಸುವುದು ಇದು ಮೊದಲೇನೂ ಅಲ್ಲ. ನಾವು ಹಿಂದೆಯೂ ದಾಖಲಿಸಿ ಕ್ರಮ ಜರಗಿಸಿದ್ದೇವೆ. ಇನ್ನು ಈ ಬರಹಕ್ಕೆ ಯಾರೆಲ್ಲಾ ಪ್ರತಿಕ್ರಿಯಿಸಿದ್ದಾರೋ ಅವರ ವಿರುದ್ಧ ಕೂಡಾ ಕ್ರಮ ಜರುಗಿಸಲಿದ್ದೇವೆ” ಎಂದು ಬಂದರ್ ಇನ್‌ಸ್ಪೆಕ್ಟರ್ ಸುರೇಶ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ.

'ಸಮಾಜಘಾತುಕ ಪೋಸ್ಟ್ ಹಾಕುವ ಇತರರ ವಿರುದ್ಧ ಕ್ರಮ ಯಾಕಿಲ್ಲ'

“ಅಶ್ರಫ್ ಅನಕ್ಷರಸ್ಥನಲ್ಲ. ಸ್ನಾತಕೋತ್ತರ ಪದವೀಧರ. ಹಾಗಾಗಿ ದೇಶದ ಆಗುಹೋಗುಗಳ ಬಗ್ಗೆ ಪ್ರತಿಕ್ರಿಯಿಸುವುದು ಸಹಜ. ಕೇರಳದ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಅವರ ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಅನಿಸಿಕೆಯಲ್ಲೇನೂ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವಂತದ್ದಾಗಿರಲಿಲ್ಲ. ಅವರ ಮೇಲೆ ಬಂದರು ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿರುವುದರ ಹಿಂದೆ ಕಾಣದ ಕೈಗಳ ಕೈವಾಡವಿದೆ. ಅದು ಮೊದಲು ಬಯಲಾಗಬೇಕಿದೆ. ಇನ್ನು ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸುವುದಾದರೆ ದಿನಕ್ಕೆ ಎಷ್ಟೋ ಪ್ರಕರಣಗಳನ್ನು ದಾಖಲಿಸಬೇಕು. ಸಾಮಾಜಿಕ ಅಶಾಂತಿ ಕದಡುವ ಸಂದೇಶ ಅಷ್ಟೊಂದು ಹರಿದಾಡುತ್ತಿರುವೆ. ಈ ಹಿಂದೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮಂಗಳೂರಿಗೆ ಬಂದಾಗ ನಮ್ಮನ್ನು ಕೂಡಾ ಮುಸ್ಲಿಮರಿಗೆ ಹುಟ್ಟಿದವರು ಎಂದು ನಿಂದಿಸಿದರು. ಹಾಗಿದ್ದರೆ ಪೊಲೀಸರು ಹಾಗೆ ನಿಂದಿಸಿದವರ ಮೇಲೆ ಯಾಕೆ ಪ್ರಕರಣ ದಾಖಲಿಸಿಲ್ಲ. ಸಚಿವ ಯು.ಟಿ.ಖಾದರ್ ಕೂಡಾ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಅವರು ಸಚಿವರಾದುದು ಕೂಡಾ ಅಲ್ಪಸಂಖ್ಯಾತ ಸಮುದಾಯದ ಕೋಟಾದ ಮೇಲೆ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು. ಅಲ್ಪಸಂಖ್ಯಾತರಿಗೆ ಅನ್ಯಾಯವಾದಾಗ ಅವರು ಯಾವ ಕಾರಣಕ್ಕೂ ಮೌನ ತಾಳಬಾರದು. ಅಲ್ಪಸಂಖ್ಯಾತ ಸಮುದಾಯದಲ್ಲಿ ಅದೆಷ್ಟೋ ಮಂದಿ ಪ್ರಗತಿಪರರು, ಜಾತ್ಯತೀತರು ಇದ್ದಾರೆ. ಅವರನ್ನು ಈ ಪೊಲೀಸರು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿ ಸಮಾಜಘಾತುಕ ಶಕ್ತಿಗಳನ್ನಾಗಿ ಮಾಡುತ್ತಾರೆ. ಹಾಗಾಗಿ ನಾವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಅಶ್ರಫ್ ಪರ ನಾವಿದ್ದೇವೆ. ಅವರಿಗೆ ಆದ ಅನ್ಯಾಯದ ವಿರುದ್ಧ ಹೋರಾಟ ಮಾಡಲಿದ್ದೇವೆ.

-ಸಂತೋಷ್ ಬಜಾಲ್, ಡಿವೈಎಫ್‌ಐ ದ.ಕ.ಜಿಲ್ಲಾ ಕಾರ್ಯದರ್ಶಿ

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News