ಭಾರತ್ ಬಂದ್‌ಗೆ ರಾಜಸ್ಥಾನದಲ್ಲಿ ಉತ್ತಮ ಪ್ರತಿಕ್ರಿಯೆ

Update: 2018-09-06 14:35 GMT

ಜೈಪುರ, ಸೆ.6: ಎಸ್ಸಿ/ಎಸ್ಟಿ (ದೌರ್ಜನ್ಯ) ತಡೆ ಕಾಯ್ದೆಗೆ ಕೇಂದ್ರ ಸರಕಾರ ತಂದಿರುವ ತಿದ್ದುಪಡಿಯನ್ನು ವಿರೋಧಿಸಿ ಹಲವು ಸಂಘಟನೆಗಳು ಗುರುವಾರ ಕರೆ ನೀಡಿದ್ದ ಭಾರತ್ ಬಂದ್‌ಗೆ ರಾಜಸ್ಥಾನದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದಲ್ಲಿ ಬಹುತೇಕ ಶಾಲಾ ಕಾಲೇಜುಗಳು, ಅಂಗಡಿ ಮುಂಗಟ್ಟುಗಳು ಹಾಗೂ ಇತರ ಸಂಸ್ಥೆಗಳು ಕಾರ್ಯನಿರ್ವಹಿಸಲಿಲ್ಲ.

ಸಾರಿಗೆ ವ್ಯವಸ್ಥೆ ಕೂಡಾ ಬಹುತೇಕ ಸ್ಥಗಿತಗೊಂಡಿತ್ತು ಎಂದು ಮಾಧ್ಯಮ ವರದಿಗಳು ತಿಳಿಸಿವೆ. ಬಂದ್ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ರಾಜ್ಯದೆಲ್ಲೆಡೆ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿತ್ತು. ಬಂದ್ ಬಹುತೇಕ ಶಾಂತಿಯುತವಾಗಿದ್ದು ಹಿಂಸಾಚಾರಗಳು ನಡೆದ ಬಗ್ಗೆ ವರದಿಯಾಗಿಲ್ಲ. ಜಾತಿ ಆಧಾರಿತ ಮೀಸಲಾತಿ ವ್ಯವಸ್ಥೆಯಲ್ಲಿ ಬದಲಾವಣೆಗಾಗಿ ಅಭಿಯಾನ ನಡೆಸುತ್ತಿರುವ ಸಮತಾ ಆಂದೋಲನ ಸಮಿತಿಯ ಸದಸ್ಯರನ್ನು ಪೊಲೀಸರು ಬಂಧಿಸಿದ್ದು ಈ ಕ್ರಮವನ್ನು ಸಮಿತಿಯ ನಾಯಕರು ಖಂಡಿಸಿದ್ದಾರೆ.

ನಮ್ಮ ಧ್ವನಿಯನ್ನು ಹತ್ತಿಕ್ಕುವ ಕ್ರಮವಾಗಿ ನಮ್ಮ ಸಂಘಟನೆಯ ಸದಸ್ಯರನ್ನು ಬಂಧಿಸಲಾಗಿದೆ. ನಾವು ಯಾವುದೇ ಹಿಂಸಾಚಾರಕ್ಕೆ ಯೋಜನೆ ರೂಪಿಸಿರಲಿಲ್ಲ ಅಥವಾ ಯಾವುದೇ ರೀತಿಯಲ್ಲಿ ಕಾನೂನುನ್ನು ಉಲ್ಲಂಘಿಸಿರಲಿಲ್ಲ. ಆದರೂ ಪೊಲೀಸರು ನಮ್ಮ ಸದಸ್ಯರನ್ನು ಬಂಧಿಸಿದ್ದಾರೆ ಎಂದು ಸಮಿತಿಯ ಸದಸ್ಯ ಯೋಗೇಂದ್ರ ಸಿಂಗ್ ಆರೋಪಿಸಿದ್ದಾರೆ. ಎಸ್ಸಿ/ಎಸ್ಟಿ ಕಾಯ್ದೆಯ ಕೆಲವೊಂದು ನಿಬಂಧನೆಗಳನ್ನು ಬದಲಾಯಿಸಿ ಸರ್ವೋಚ್ಚ ನ್ಯಾಯಾಲಯ ನೀಡಿದ ಆದೇಶದ ವಿರುದ್ಧ ಕೇಂದ್ರ ಸರಕಾರ ಕಾಯ್ದೆಯ ಯಥಾಸ್ಥಿತಿ ಕಾಪಾಡುವಂತೆ ತಿದ್ದುಪಡಿ ತಂದು ಸುಪ್ರೀಂ ಕೋರ್ಟ್ ಆದೇಶವನ್ನು ತಿರಸ್ಕರಿಸಿದ ಕ್ರಮವನ್ನು ವಿರೋಧಿಸಿ ಗುರುವಾರ ಭಾರತ್ ಬಂದ್‌ಗೆ ಕರೆ ನೀಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News