ಪೋಷಕರೇ ಎಚ್ಚರ: ಮಕ್ಕಳ ಜೀವ ತಿನ್ನಲು ಬಂದಿದೆ ಮತ್ತೊಂದು ಡೆಡ್ಲಿ ಗೇಮ್ ‘ಮೊಮೊ’ ಚಾಲೆಂಜ್

Update: 2018-09-06 15:10 GMT

ಕೆಲವು ತಿಂಗಳ ಹಿಂದೆ ನಾನು ಭಯಾನಕ ‘ಬ್ಲೂ ವೇಲ್’ ಗೇಮ್ ಕುರಿತು ಬರೆದಿದ್ದೆ. ಸಾವಿರಾರು ಯುವಕರ ಅದರಲ್ಲೂ ವಿಶೇಷವಾಗಿ ಶಾಲಾ ಕಾಲೇಜು ವಿದ್ಯಾರ್ಥಿಗಳ ಜೀವ ತಿಂದು ತೇಗಿತ್ತು ಬ್ಲೂವೇಲ್ ಗೇಮ್. ಸೂಕ್ತ ಸಮಯದಲ್ಲಿ ಸರಕಾರದ ಸ್ಪಂದನೆಯ ಕಾರಣ ಅನೇಕ ಮಕ್ಕಳು ಈ ಆಟದ ಅಪಾಯದಿಂದ ಪಾರಾದರು. ಆದರೆ ಮಕ್ಕಳ ಜೀವನವನ್ನು ಹಾಳು ಮಾಡಲು ಹೊರಟಿರುವ ವಿಕೃತ ಮನಸ್ಸುಗಳು ಕೇಳಬೇಕಲ್ಲವೇ?. ಅಂತಹ ವಿಕೃತ ಮನಸ್ಸುಗಳು ಇದೀಗ ‘ಬ್ಲೂವೇಲ್ ಗೇಮ್’ಗಿಂತ ಭಯಾನಕ ಚಾಲೆಂಜ್ ಆಟವೊಂದನ್ನು ಸಿದ್ಧ ಪಡಿಸಿದೆ. ಅದುವೇ ‘ಮೊಮೊ ಚಾಲೆಂಜ್’.

‘ಬ್ಲೂವೇಲ್ ಗೇಮ್’ನಂತೆಯೇ ಇದೂ ಕೂಡ ಆನ್ ಲೈನ್ ಆಟವಾಗಿದೆ. ಫೇಸ್ ಬುಕ್ ಹಾಗೂ ವಾಟ್ಸಾಪ್ ಮೂಲಕ ಯುವಕರಿಗೆ ಲಿಂಕ್ ಕಳುಹಿಸಿ ಈ ಆಟಕ್ಕೆ ಪ್ರೇರೇಪಿಸಲಾಗುತ್ತದೆ. ನೀವು ಲಿಂಕ್ ಒತ್ತಿ ಆಟವನ್ನು ಪ್ರಾರಂಭ ಮಾಡಿದ ತಕ್ಷಣ ನಿಮ್ಮ ಮೊಬೈಲಿನಲ್ಲಿರುವ ಖಾಸಗಿ ವಿಚಾರಗಳನ್ನು ಹ್ಯಾಕ್ ಮಾಡಲಾಗುತ್ತದೆ. ಗೇಮ್ ನಿರ್ವಾಹಕ ಹೇಳಿದ ಪ್ರಕಾರ ನೀವು ಆಟವನ್ನು ಪೂರ್ತಿಗೊಳಿಸದಿದ್ದರೆ ನಿಮ್ಮ ಮೊಬೈಲ್ ನ ಖಾಸಗಿ ವಿವರಗಳನ್ನು ವೈರಲ್ ಮಾಡುತ್ತೇವೆ ಎಂದು ಬ್ಲ್ಯಾಕ್ ಮೇಲ್ ಮಾಡಲಾಗುತ್ತದೆ. ಇಂತಹ ಮೋಸದಾಟಕ್ಕೆ ಗುರಿಯಾಗಿ ನಿರ್ವಾಹವಿಲ್ಲದೇ ಯುವಜನತೆ ಈ ಆಟದಲ್ಲಿ ತೊಡಗುತ್ತದೆ. ಭಯಾನಕ ಟಾಸ್ಕ್ ಹೊಂದಿರುವ ಈ ಮೊಮೊ ಚಾಲೆಂಜ್ ಆಟದಲ್ಲಿ ಮುಂದುವರಿದರೆ ಸಾವು ಮಾತ್ರ ಕಟ್ಟಿಟ್ಟ ಬುತ್ತಿ.

ಭಯಾನಕ ಮುಖವನ್ನು ಹೊಂದಿರುವ ತೆವಳುವ ಕುತ್ತಿಗೆಯ ಹೊರಚಾಚಿದ ವಿಕೃತ ಕಣ್ಣನ್ನು ಹೊಂದಿರುವ ಚಿತ್ರವನ್ನು ಒಳಗೊಂಡಿರುವ ಈ ಮೊಮೊ ಚಾಲೆಂಜ್ ಗೇಮ್, ಈಗಾಗಲೇ ಹಲವು ಮಕ್ಕಳ ಜೀವವನ್ನು ತಿಂದು ತೇಗಿದೆ. 2018ರ ಜೂನ್ ನಲ್ಲಿ ಮೊಮೊ ಚಾಲೆಂಜ್ ಆಟದ ಕುರಿತ ಯೂಟ್ಯೂಬ್ ಮೂಲಕ ಹರಿಯಬಿಟ್ಟಿರುವ ವಿಡಿಯೋವೊಂದು ಈ ಆಟದ ರಹಸ್ಯವನ್ನು ಬಿಚ್ಚಿಟ್ಟಿತು. ಜಪಾನ್ ಮೂಲದ ಈ ಆಟವು ಮೊದಲಿಗೆ ಲ್ಯಾಟಿನ್ ಅಮೇರಿಕಾ, ಅರ್ಜೆಂಟೀನಾ, ಬ್ರೆಝಿಲ್, ಕೆನಡಾ, ಯೂರೋಪ್, ಮೆಕ್ಸಿಕೋ ಹಾಗೂ ಸ್ಪೇನ್ ನಲ್ಲಿ ಕುಖ್ಯಾತಿ ಗಳಿಸುವ ಮೂಲಕ ಕೇವಲ ಎರಡೇ ತಿಂಗಳ ಅವಧಿಯಲ್ಲಿ ಅನೇಕರ ಜೀವವನ್ನು ಬಲಿ ಪಡೆಯಿತು. ಆದರೆ ಯಾವಾಗ ಈ ಆಟವು ನಮ್ಮ ದೇಶದ ಯುವಕರನ್ನು ಬಲಿ ಪಡೆಯಲು ಪ್ರಾರಂಭವಾಯಿತೋ ಆಗಲೇ ಪೋಷಕರು ಈ ಡೆಡ್ಲಿ ಮೊಮೊ ಚಾಲೆಂಜ್ ಕುರಿತು ಚಿಂತಿತರಾಗಿದ್ದಾರೆ.

ರಾಜಸ್ಥಾನದ ಅಜ್ಮೀರ್ ನಲ್ಲಿ ಹತ್ತನೆಯ ತರಗತಿಯ ವಿದ್ಯಾರ್ಥಿನಿಯೊಬ್ಬಳು ತನ್ನ ನಾಡಿಯನ್ನು ಕತ್ತರಿಸಿ ಆತ್ಮಹತ್ಯೆ ಮಾಡಿಕೊಂಡಿರುವುದು, ಡಾರ್ಜಿಲಿಂಗ್ ನಲ್ಲಿ  18 ವರ್ಷದ ಹಾಗೂ 26 ವರ್ಷದ ಯುವಕರಿಬ್ಬರು ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದು ಇದೇ ಮೊಮೊ ಚಾಲೆಂಜ್ ಕಾರಣದಿಂದಾಗಿದೆ ಎಂದು ಪ್ರಾಥಮಿಕ ತನಿಖಾ ವರದಿಗಳು ಹೇಳುತ್ತಿವೆ. ಇತ್ತೀಚೆಗೆ ಕೇರಳದ ಆಲಪ್ಪುಳ ಹಾಗೂ ಕರ್ನಾಟಕದ ತುಮಕೂರಿನಲ್ಲಿಯೂ ವಿದ್ಯಾರ್ಥಿಗಳ ಮೊಬೈಲ್ ಗೆ ಈ ಮೊಮೊ ಚಾಲೆಂಜ್ ಲಿಂಕ್ ಬಂದಿರುವ ಕುರಿತು ದೂರುಗಳು ದಾಖಲಾಗಿವೆ. ಒಟ್ಟಿನಲ್ಲಿ ಈ ಆಟವು ಬ್ಲೂವೇಲ್ ಗಿಂತ ಹೆಚ್ಚು ಅಪಾಯಕಾರಿ ಎನ್ನುವುದು ದೃಢವಾಗುತ್ತಿದೆ. ಈಗಿಂದೀಗಲೇ ನಾವು ಭಯಾನಕ ಪಿಡುಗಿಗೆ ಕಡಿವಾಣ ಹಾಕದಿದ್ದಲ್ಲಿ ಮುಂದೆ ಭಾರೀ ಬೆಲೆ ತೆರಬೇಕಾಗುವುದಂತೂ ಖಂಡಿತ.

ಈ ಆಟವು ಮಕ್ಕಳಿಗೆ ತಮ್ಮನ್ನು ತಾವೇ ಕೊಲೆ ಮಾಡುವಂತೆ ಅಥವಾ ಆತ್ಮಹತ್ಯೆ ಮಾಡುವಂತೆ ಪ್ರಚೋದನೆಯನ್ನು ನೀಡುತ್ತದೆ. ಸಾಮಾಜಿಕ ಜಾಲತಾಣ ಫೇಸ್ ಬುಕ್ ಮತ್ತು ವಾಟ್ಸ್ಆ್ಯಪ್ ನಲ್ಲಿ ಹೆಚ್ಚು ಸಕ್ರಿಯರಾಗಿರುವ ಮಕ್ಕಳು ಮತ್ತು ಯುವಜನತೆಯನ್ನು ಮೊಮೊ ಚಾಲೆಂಜ್ ಗೆ ಸೆಳೆಯಲಾಗುತ್ತದೆ. ಈ ಚಾಲೆಂಜ್ ನಲ್ಲಿ ಮೊದಲಿಗೆ ಕುಟುಂಬದವರ ವಿವರಗಳನ್ನು ತಿಳಿದುಕೊಂಡು ನಂತರ ಬ್ಲಾಕ್ ಮೇಲ್ ಮಾಡಲಾಗುತ್ತದೆ. ಬ್ಲೂವೇಲ್ ಡೆಡ್ಲಿ ಗೇಮ್ ನಂತೆ ಇದೂ ಸಹ ಮಕ್ಕಳನ್ನು ಸಾವಿನ ದವಡೆಗೆ ತಳ್ಳುತ್ತದೆ. ಹೀಗಾಗಿ ಪೋಷಕರು ಈಗಿಂದೀಗಲೇ ಎಚ್ಚರವಹಿಸುವುದರೊಂದಿಗೆ ಈ ಭಯಾನಕ ಮೊಮೊ ಚಾಲೆಂಜ್ ನಿಷೇಧಿಸುವಂತೆ ಸರಕಾರವನ್ನು ಒತ್ತಾಯಿಸಬೇಕಾಗಿದೆ.

-ಎಸ್.ಎ.ರಹಿಮಾನ್ ಮಿತ್ತೂರು

Writer - ಎಸ್.ಎ.ರಹಿಮಾನ್ ಮಿತ್ತೂರು

contributor

Editor - ಎಸ್.ಎ.ರಹಿಮಾನ್ ಮಿತ್ತೂರು

contributor

Similar News