ಭಾರತದಿಂದ ಅಪಹರಿಸಲ್ಪಟ್ಟ ವಿಗ್ರಹಗಳನ್ನು ಮರಳಿಸಿದ ಅಮೆರಿಕ

Update: 2018-09-06 16:33 GMT

ವಾಶಿಂಗ್ಟನ್,ಸೆ.6: ಭಾರತದಿಂದ ಅಪಹರಿಸಲ್ಪಟ್ಟು, ಅಮೆರಿಕದ ಎರಡು ಮ್ಯೂಸಿಯಂಗಳಲ್ಲಿ ಪ್ರದರ್ಶನಕ್ಕಿರಿಸಲಾಗಿದ್ದ ಲಕ್ಷಾಂತರ ಡಾಲರ್ ಮೌಲ್ಯದ ಎರಡು ಪುರಾತನ ವಿಗ್ರಹಗಳನ್ನು ವಾಶಿಂಗ್ಟನ್ ಭಾರತಕ್ಕೆ ಬುಧವಾರ ಹಸ್ತಾಂತರಿಸಿದೆ.

ಚೋಳ ರಾಜವಂಶ ಆಳ್ವಿಕೆ ಕಾಲದ ಹಾಗೂ 12ನೇ ಶತಮಾನಕ್ಕೆ ಸೇರಿದ ಶಿವನ ವಿಗ್ರಹ ‘ಲಿಂಗೋದ್ಭವಮೂರ್ತಿ’ ಹಾಗೂ 12ನೇ ಶತಮಾನಕ್ಕೆ ಸೇರಿದ ಬಿಹಾರದ ಬೋಧಗಯಾ ದೇವಸ್ಥಾನದ ಸಮೀಪದ ದೇಗುಲವೊಂದರಿಂದ ಅಪಹರಿಸಲ್ಪಟ್ಟಿದ್ದ ಮಂಜುಶ್ರೀ ಎಂಬ ಬೋಧಿಸತ್ವನ ವಿಗ್ರಹವು ಅಮೆರಿಕ ಭಾರತಕ್ಕೆ ಮರಳಿಸಿರುವ ವಿಗ್ರಹಗಳಾಗಿವೆ.

ಪ್ರಸ್ತುತ ‘ಲಿಂಗೋದ್ಭವ’ಮೂರ್ತಿಯ ಮೌಲ್ಯ 2.25 ಲಕ್ಷ ಡಾಲರ್ ಎಂದು ಅಂದಾಜಿಸಲಾಗಿದ್ದು, ತಮಿಳುನಾಡಿನಿಂದ ಅಪಹರಿಸಲ್ಪಟ್ಟಿದ್ದ ಆ ಪ್ರತಿಮೆಯನ್ನು ಅಲಬಾಮಾದ ಬರ್ಮಿಂಗ್‌ಹ್ಯಾಂ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ಮಂಜುಶ್ರೀ ವಿಗ್ರಹವನ್ನು ಉತ್ತರ ಕರೋಲಿನಾದ ವಿ.ವಿ.ಗೆ ಸೇರಿದ ಆಕ್ಲಂಡ್ ಕಲಾ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿಡಲಾಗಿತ್ತು.

ಮಂಗಳವಾರ ನ್ಯೂಯಾರ್ಕ್‌ನಲ್ಲಿರುವ ಭಾರತೀಯ ಧೂತಾವಾಸ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಎರಡೂ ವಿಗ್ರಹಗಳನ್ನು ಮ್ಯಾನ್‌ಹಟನ್‌ನ ಜಿಲ್ಲಾ ಅಟಾರ್ನಿ ಸೈರಸ್ ವೇನ್ಸ್ ಜೂ. ಅವರು ಭಾರತೀಯ ಕಾನ್ಸುಲ್ ಜನರಲ್, ಸಂದೀಪ್ ಚಕ್ರವರ್ತಿಯವರಿಗೆ ಹಸ್ತಾಂತರಿಸಿದರು.

ಕಾರ್ಯಕ್ರಮದಲ್ಲಿ ವೇನ್ಸ್ ಮಾತನಾಡಿ, ಭಾರತದಿಂದ ಅಪಹರಿಸಲಾದ ಹಲವಾರು ಸೊತ್ತುಗಳನ್ನು ಈಗಾಗಲೇ ಭಾರತಕ್ಕೆ ಮರಳಿಸಲಾಗಿದೆ, ಮುಂದೆಯೂ ತನ್ನ ಇಲಾಖೆಯು, ಭಾರತಕ್ಕೆ ಸೇರಿದ ಕಲಾಕೃತಿಗಳನ್ನು ಹಿಂತಿರುಗಿಸಲಿದೆಯೆಂದು ತಿಳಿಸಿದರು.

ಕಳವುಗೈದ ಕಲಾಕೃತಿಗಳ ಅಕ್ರಮ ವ್ಯಾಪಾರವನ್ನು ತಡೆಗಟ್ಟಲು ಪಾಲುದಾರ ದೇಶಗಳೊಂದಿಗೆ ನಡೆಯುತ್ತಿರುವ ಜಂಟಿ ತನಿಖೆಯ ಕ್ರಮವಾಗಿ ಕಳೆದ ಆಗಸ್ಟ್‌ನಲ್ಲಿ ಮ್ಯಾನ್‌ಹಟ್ಟನ್ ಜಿಲ್ಲಾ ಅಟಾರ್ನಿ ಅವರ ನೇತೃತ್ವದ ಅಮೂಲ್ಯ ಕಲಾಕೃತಿಗಳ ಕಳ್ಳಸಾಗಣೆ ನಿಗ್ರಹ ದಳವು ಈ ಎರಡು ವಿಗ್ರಹಗಳನ್ನು ವಶಪಡಿಸಿಕೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News