ಹವಾಮಾನ ಬದಲಾವಣೆ ನಮಗಿಂತ ವೇಗವಾಗಿದೆ: ವಿಶ್ವಸಂಸ್ಥೆ

Update: 2018-09-06 16:42 GMT

ವಿಶ್ವಸಂಸ್ಥೆ, ಸೆ. 6: ಕೇರಳದಲ್ಲಿ ಸಂಭವಿಸಿದ ವಿನಾಶಕಾರಿ ಪ್ರವಾಹ ಹಾಗೂ ಕ್ಯಾಲಿಫೋರ್ನಿಯಾದಲ್ಲಿ ಸಂಭವಿಸಿದ ಕಾಳ್ಗಿಚ್ಚು ದುರಂತದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್, ಹವಾಮಾನ ಬದಲಾವಣೆ ನಮಗಿಂತ ವೇಗವಾಗಿದ್ದು ಇನ್ನಷ್ಟು ಭಯಾನಕ ಪ್ರಾಕೃತಿಕ ವಿಪತ್ತು ಸಂಭವಿಸದಂತೆ ತಡೆಯಲು ಕ್ಷಿಪ್ರವಾಗಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ. ಕಳೆದ ವರ್ಷ ಹವಾಮಾನಕ್ಕೆ ಸಂಬಂಧಿಸಿದ ಪ್ರಾಕೃತಿಕ ದುರಂತಗಳಿಂದ ಸಾವಿರಾರು ಜನ ಮೃತಪಟ್ಟಿದ್ದು 320 ಬಿಲಿಯನ್ ಡಾಲರ್ ನಷ್ಟ ಉಂಟಾಗಿದೆ ಎಂದವರು ಹೇಳಿದ್ದಾರೆ.

ಹವಾಮಾನ ಬದಲಾವಣೆಯ ಪ್ರಭಾವ ವಿನಾಶಕಾರಿಯಾಗಿದೆ. ಇಂತಹ ವಿಪತ್ತಿಗೆ ಸಿಲುಕಿ ಬವಣೆ ಪಡುವವರು ಸಾಮಾನ್ಯವಾಗಿ ಬಡ ಮತ್ತು ದುರ್ಬಲ ಜನರೇ ಆಗಿರುತ್ತಾರೆ ಎಂದು ಅವರು ತಿಳಿಸಿದರು. 2018ರ ಹೊಸ ಹವಾಮಾನ ಆರ್ಥಿಕ ವರದಿಯನ್ನು ಅನಾವರಣಗೊಳಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

  ಭಾರತದ ಕೇರಳದಲ್ಲಿ ಭಯಾನಕ ಪ್ರವಾಹ, ಕ್ಯಾಲಿಫೋರ್ನಿಯಾ ಮತ್ತು ಕೆನಡಾದಲ್ಲಿ ಘೋರ ಕಾಳ್ಗಿಚ್ಚು, ಆರ್ಕಿಟಿಕ್ ಪ್ರದೇಶದಲ್ಲಿ ಉಷ್ಣತೆ ಅಪಾಯಕಾರಿಯಾಗಿ ಏರುತ್ತಿರುವ ವಿದ್ಯಮಾನ ಈ ವರ್ಷ ನಡೆದಿದೆ. ಸೂಚನೆ ಸ್ಪಷ್ಟವಾಗಿದೆ. ಕಳೆದ 19 ವರ್ಷಗಳಲ್ಲಿ 18 ವರ್ಷಗಳು ಅತ್ಯಂತ ಉಷ್ಣತೆಯ ವರ್ಷಗಳಾಗಿದ್ದು ಹಸಿರುಮನೆ(ಗ್ರೀನ್‌ಹೌಸ್) ಅನಿಲದ ಸಾಂದ್ರತೆಯು ಏರುತ್ತಲೇ ಹೋಗುತ್ತಿದೆ ಎಂದವರು ತಿಳಿಸಿದರು.

ಹವಾಮಾನ ಬದಲಾವಣೆಯ ನಾಗಾಲೋಟ ವಾಸ್ತವಿಕ ಸಾಧ್ಯತೆಯಾಗಿದ್ದು ಸಮುದಾಯ, ಅರ್ಥವ್ಯವಸ್ಥೆ, ದೇಶಗಳ ಶಾಂತಿ ಮತ್ತು ಭದ್ರತೆಯ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಆದ್ದರಿಂದ ಹೆಚ್ಚಿನ ಮಹಾತ್ವಾಕಾಂಕ್ಷೆ ಮತ್ತು ಅವಸರದಿಂದ ಕಾರ್ಯ ನಿರ್ವಹಿಸಬೇಕು ಎಂದರು. ವಿಶ್ವದ ಸುಮಾರು 130ಕ್ಕೂ ಅಧಿಕ ಪ್ರಮುಖ ಸಂಸ್ಥೆಗಳು ಇದೀಗ ನವೀಕರಿಸಬಹುದಾದ ಇಂಧನ ಬಳಸಲು ನಿರ್ಧರಿಸುವ ಮೂಲಕ ಹವಾಮಾನ ಬದಲಾವಣೆಯ ಬಗ್ಗೆ ಗಮನ ಹರಿಸಿವೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿರುವ ಸುಮಾರು 1 ಬಿಲಿಯನ್ ಜನತೆ ಇನ್ನೂ ವಿದ್ಯುತ್‌ಚ್ಛಕ್ತಿಯ ಸೌಲಭ್ಯದಿಂದ ವಂಚಿತರಾಗಿದ್ದು ಶುದ್ಧ ಇಂಧನ ಯೋಜನೆಯು ಅವರಿಗೆ ನೆರವಾಗಲಿದೆ ಎಂದು ಗುಟೆರಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News