ಜಪಾನ್ ನಲ್ಲಿ ಪ್ರಬಲ ಭೂಕಂಪ; ನೂರಾರು ಮನೆ ಭೂಸಮಾಧಿ

Update: 2018-09-06 16:43 GMT

ಟೋಕಿಯೊ, ಸೆ.6: ಉತ್ತರ ಜಪಾನ್‌ನ ಹೊಕೈಡೊ ದ್ವೀಪದಲ್ಲಿ ಗುರುವಾರ ಮುಂಜಾನೆ ಸಂಭವಿಸಿದ ಪ್ರಬಲ ಭೂಕಂಪದಿಂದಾಗಿ ಭಾರೀ ಭೂಕುಸಿತವಾಗಿದ್ದು, ಹಲವಾರು ಮನೆಗಳು ಭೂಸಮಾಧಿಯಾಗಿವೆ.

ರಿಕ್ಟರ್‌ಮಾಪಕದಲ್ಲಿ 6.7 ತೀವ್ರತೆಯ ಭೂಕಂಪವು ಸಂಭವಿಸಿದ ಬಳಿಕ ಹೊಕೈಡೊ ದ್ವೀಪದಲ್ಲಿ ಕನಿಷ್ಠ 19 ಮಂದಿ ನಾಪತ್ತೆಯಾಗಿದ್ದಾರೆ ಹಾಗೂ 120ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ.

ಭೂಕಂಪದ ಬೆನ್ನಲ್ಲೇ ಹೊಕೈಡೊ ದ್ವೀಪ ಪ್ರಾಂತದ ವಿದ್ಯುತ್ ಪೂರೈಕೆದಾರ ಸಂಸ್ಥೆಯು, ತನ್ನ ವಿದ್ಯುತ್ ಸ್ಥಾವರಗಳನ್ನು ಮುಚ್ಚುಗಡೆಗೊಳಿಸಿದ್ದು, ಹೊಕೈಡೊ ನಗರದ 20.90 ಲಕ್ಷಕ್ಕೂ ಅಧಿಕ ನಿವಾಸಿಗಳು ದಿನವಿಡೀ ವಿದ್ಯುತ್ ಇಲ್ಲದೆ ಪರದಾಡಿದ್ದಾರೆ. ಮುಂಜಾನೆ 3:08 ಗಂಟೆಯ ವೇಳೆಗೆ ಸಂಭವಿಸಿದ ಈ ಭೂಕಂಪದ ಕೇಂದ್ರಬಿಂದು ಹೊಕೈಡೊ ದ್ವೀಪದ ಮುಖ್ಯ ನಗರವಾದ ಸಪ್ಪೊರೊದಿಂದ 42 ಮೈಲು ದೂರದ ದಲ್ಲಿತ್ತೆಂದು ಅಮೆರಿಕದ ಭೌಗೋಳಿಕ ಸರ್ವೇಕ್ಷಣಾ ಸಂಸ್ಥೆಯು ತಿಳಿಸಿದೆ. ಆದರೆ ಭೂಕಂಪದಿಂದಾಗಿ ಸುನಾಮಿ ಅಪಾಯ ಉಂಟಾಗಿಲ್ಲವೆಂದು ಜಪಾನ್‌ನ ಭೂಗರ್ಭಶಾಸ್ತ್ರ ಇಲಾಖೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News