ಮಂಗಳೂರು ವಿವಿ: ಯಕ್ಷನಾಟ್ಯ ತರಬೇತಿ ಉದ್ಘಾಟನೆ

Update: 2018-09-06 18:34 GMT

ಕೊಣಾಜೆ,ಸೆ.6 : ಮಂಗಳೂರು ವಿಶ್ವವಿದ್ಯಾಲಯದ ಡಾ.ಪಿ.ದಯಾನಂದ ಪೈ ಮತ್ತು ಶ್ರೀ ಪಿ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಇದರ ಆಶ್ರಯದಲ್ಲಿ 2018-19ನೇ ಸಾಲಿನ ಯಕ್ಷಮಂಗಳ ತಂಡದ ಯಕ್ಷನಾಟ್ಯ ತರಬೇತಿ ಕಾರ್ಯಕ್ರಮದ ಉದ್ಘಾಟನೆಯು ಯಕ್ಷಗಾನ  ಅಧ್ಯಯನ ಕೇಂದ್ರದಲ್ಲಿ ಗುರುವಾರ ನಡೆಯಿತು. 

ಮಂಗಳೂರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಡಾ.ಕಿಶೋರ್ ಕುಮಾರ್ ಸಿ.ಕೆ ಉದ್ಘಾಟನೆ ನೆರವೇರಿಸಿ ಮಾತನಾಡಿ, ಯಕ್ಷಗಾನ ಕಲೆಯು ಸಾಕಷ್ಟು ಪ್ರೋತ್ಸಾಹದಿಂದ ಬೆಳೆಯುತ್ತಿರುವ ಕಲೆಯಾಗಿದ್ದು ಕಾಲವನ್ನು ಅರ್ಥಮಾಡಿಕೊಂಡು ಹೊಸತನವೂ ಪ್ರವೇಶಿಸುತ್ತಿದೆ. ಬದಲಾವಣೆ ಅನಿವಾರ್ಯ ಆದರೆ ಅದರಿಂದ ಯಕ್ಷಗಾನ ಪರಂಪರೆಗೆ ಧಕ್ಕೆ ಬಾರದಿರಲಿ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಪ್ರಸಿದ್ಧ ಕಲಾವಿದರಾದ ರವಿ ಅಲೆವೂರಾಯ ಅವರು, ಯಕ್ಷಗಾನ ಕಲೆಯು ಶ್ರೀಮಂತ ಕಲೆಯಾಗಿದ್ದು ಉದ್ಯಮದ ಸ್ವರೂಪವನ್ನೂ ಪಡೆಯುತ್ತಿದೆ. ಸಾವಿರಾರು ಮಂದಿ ಕಲಾವಿದರಿಗೆ ಉದ್ಯೋಗವನ್ನು ನೀಡುವುದರೊಂದಿಗೆ ನಿರುದ್ಯೋಗ ನಿವಾರಿಸುವಲ್ಲಿಯೂ ಪ್ರಮುಖ ಪಾತ್ರ ವಹಿಸಿದೆ ಎಂದರು. 

ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಯಕ್ಷಗಾನ ಅಧ್ಯಯನ ಕೇಂದ್ರದ ಸಂಯೋಜಕರಾದ ಡಾ.ಧನಂಜಯ ಕುಂಬ್ಳೆ ಅವರು ಮಂಗಳೂರು ವಿವಿ ಯಕ್ಷಗಾನ ಅಧ್ಯಯನ ಕೇಂದ್ರವು ಯಕ್ಷಗಾನದ ಬೆಳವಣಿಗಾಗಿ ಹಲವಾರು ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದು ಇದರ ಜೊತೆಗೆ ವಿದ್ಯಾರ್ಥಿಗಳಿಗೆ ಯಕ್ಷಗಾನ ತರಬೇತಿಯನ್ನು ನೀಡಿ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಿ ಪ್ರೋತ್ಸಾಹಿಸುತ್ತಿದೆ ಎಂದರು.

ಮುಖ್ಯ ಅತಿಥಿಯಾಗಿ ಯಕ್ಷಗಾನ ತರಬೇತುದಾರರಾದ ದೀವಿತ್ ಎಸ್.ಕೋಟ್ಯಾನ್ ಅವರು ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ಯಕ್ಷಗಾನ ಅಧ್ಯಯನ ಕೇಂದ್ರದ ಡಾ.ರಾಜಶ್ರೀ, ಸತೀಶ್ ಕೊಣಾಜೆ ಉಪಸ್ಥಿತರಿದ್ದರು. 

ಯಕ್ಷಮಂಗಳ ತಂಡದ ವಿದ್ಯಾರ್ಥಿಗಳಾದ ವಿನುತಾ ಎಂ.ಎಸ್ ಸ್ವಾಗತಿಸಿ, ನಿಖಿತಾ ಕಿಣಿ ಅವರು ವಂದಿಸಿದರು. ಅಮೃತಾ ಅವರು ಕಾರ್ಯಕ್ರಮ ನಿರೂಪಿಸಿದರು. 

ಸಭಾ ಕಾರ್ಯಕ್ರಮದ ಬಳಿಕ ಯಕ್ಷಮಂಗಳ ತಂಡದ ವಿದ್ಯಾರ್ಥಿಗಳಿಗೆ ಯಕ್ಷಗಾನ ಗುರುಗಳಾದ ರವಿ ಅಲೆವೂರಾಯ ಹಾಗೂ ದೀವಿತ್ ಎಸ್ ಕೋಟ್ಯಾನ್ ಅವರು ಹೆಜ್ಜೆಗಾರಿಕೆಯ ಬಗ್ಗೆ ತರಬೇತಿ ನೀಡುವುದರೊಂದಿಗೆ ಪ್ರಸ್ತುತ ವರ್ಷದ ತರಬೇತಿ ಚಟುವಟಿಕೆಗೆ ಅಧಿಕೃತ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಯಕ್ಷಮಂಗಳ ತಂಡದ ಹಿರಿಯ ವಿದ್ಯಾರ್ಥಿಗಳ ಜೊತೆಗೆ ನೂತನವಾಗಿ ಕೇಂದ್ರಕ್ಕೆ ಸೇರಿರುವ ವಿದ್ಯಾರ್ಥಿಗಳು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News