ಕಾಪು: ಒಳಚರಂಡಿ ಕಾಮಗಾರಿಗೆ ಅಕ್ಟೋಬರ್ 15ರ ಗಡುವು

Update: 2018-09-06 18:39 GMT

ಕಾಪು,ಸೆ.6: ಕಾಪು ಪೇಟೆಯಲ್ಲಿ ಒಳಚರಂಡಿ ಮಂಡಳಿಯ ಅಪೂರ್ಣ ಕಾಮಗಾರಿಯನ್ನು ಅಕ್ಟೋಬರ್ 15ರೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಕಾಪು ಪುರಸಭೆಯ ಸದಸ್ಯರು ಎಚ್ಚರಿಸಿದರು. 

ಗುರುವಾರ ಕಾಪು ಪುರಸಭೆಯ ಸಭಾಂಗಣದಲ್ಲಿ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ಇಲ್ಲದಿದ್ದಲ್ಲಿ ಸಾರ್ವಜನಿಕರನ್ನು ಸೇರಿಸಿಕೊಂಡು ಪಕ್ಷಾತೀತವಾಗಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದರು. 

ಒಳಚರಂಡಿ ಮಂಡಳಿ ಅಧಿಕಾರಿಗಳನ್ನು ಕರೆಯಿಸಿ ಮಾತುಕತೆ ನಡೆಸಿ ನಾನೇ ಮುತುವರ್ಜಿ ವಹಿಸಿ ಕಾಮಗಾರಿ ಪೂರ್ಣಗೊಳಿಸಲು ಪ್ರಯತ್ನಿಸುವುದಾಗಿ ಮುಖ್ಯಾಧಿಕಾರಿ ರಾಯಪ್ಪ ಹೇಳಿದರು.

ಎಸ್‍ಟಿಪಿಗೆ ಸೂಕ್ತ ಸ್ಥಳ ಗುರುತಿಸದೆ ಅವೈಜ್ಞಾನಿಕವಾಗಿ ಕಾಮಗಾರಿ ಮಾಡಿರುವುದರಿಂದ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದರಿಂದ ಅನೇಕ ಅಪಘಾತ ನಡೆದು ತೊಂದರೆಗಳಾಗಿವೆ. ಪೇಟೆಯನ್ನು ಯಥಾಸ್ಥಿತಿಗೆ ತರದಿದ್ದಲ್ಲಿ ಮುಂದೆ ಏನಾದರೂ ಅವಘಡ ಸಂಭವಿಸಿದರೆ ಒಳಚರಂಡಿ ಕಾಮಗಾರಿ ಗುತ್ತಿಗೆದಾರರ ವಿರುದ್ಧ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು. 

ನಗರೋತ್ಥಾನ ಯೋಜನೆಯಲ್ಲಿ ನಿರ್ಮಿಸಲುದ್ದೇಶಿಸಿರುವ ಕಾಪು ಮೀನು ಮಾರುಕಟ್ಟೆ ಲೋಕೋಪಯೋಗಿ ಇಲಾಖೆಯಿಂದ ಹದಿನೈದು ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಅವರ ಗಮನಕ್ಕೆ ತಂದು ಅದನ್ನು ಕೆಡಹಲು ಮುಂದಾಗಬೇಕು. ಇಲ್ಲವಾದಲ್ಲಿ ಸಮಸ್ಯೆ ಎದುರಾಗಲಿದೆ ಎಂದು ಅರುಣ್ ಶೆಟ್ಟಿ ಗಮನ ಸೆಳೆದರು.

ಕೊಳಚೆ ನೀರು ರಸ್ತೆಯಲ್ಲಿ ನಿಂತು ಜನರಿಗೆ ತೊಂದರೆಯಾದಾಗ ಅದನ್ನು ಸರಿಪಡಿಸಲು ಹೋದಾಗ ಕಂದಾಯ ಅಧಿಕಾರಿಗಳ ಮೂಲಕ ತಡೆವೊಡ್ಡಿದ್ದ ಮಲ್ಲಾರು ವಾರ್ಡ್‍ನ ಪೂರ್ಣಿಮಾ ಭಕ್ತ ಎಂಬವರು ಪರಂಬೋಕು ಕೆರೆಯನ್ನು ಒತ್ತುವರಿ ಮಾಡಿ ಬಂಗ್ಲೆ ನಿರ್ಮಿಸಿದ್ದಾರೆ. ಅನಧಿಕೃತವಾದ ಈ ಕಟ್ಟಡವನ್ನು ನೆಲಸಮ ಮಾಡಬೇಕು ಎಂದು ವಿರೋಧ ಪಕ್ಷದ ನಾಯಕ ಅರುಣ್ ಶೆಟ್ಟಿ ಪಾದೂರು ಆಗ್ರಹಿಸಿದರು.

ಒತ್ತುವರಿ ತೆರವು ಮಾಡಲು ಅವರಿಗೆ ನೋಟಿಸ್ ನೀಡಲಾಗುವುದು.  ಈ ವಿಷಯದಲ್ಲಿ ಸದಸ್ಯರಾರು ಹಸ್ತಕ್ಷೇಪ ಮಾಡಬಾರದು ಎಂದು ಮುಖ್ಯಾಧಿಕಾರಿ ತಿಳಿಸಿದರು.

ಪುರಸಭೆಯ ಘನತ್ಯಾಜ್ಯ ನಿರ್ವಹಣಾ ಘಟಕ ಎಲ್ಲೂರಿನಲ್ಲಿ  ನಿರ್ಮಾಣಕ್ಕೆ ಐದು ಮಂದಿ ಮಾತ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಘಟಕ ನಿರ್ಮಾಣ ಹಾಗೂ ಅದರ ಬಗ್ಗೆ ಎಲ್ಲೂರಿನಲ್ಲಿ ಕಳೆದೆರಡು ದಿನಗಳ ಹಿಂದೆ ನಡೆದ ಸಾರ್ವಜನಿಕ ಸಭೆಯಲ್ಲಿ ವಿರೋಧ ವ್ಯಕ್ತ ಪಡಿಸಿದ ಮಂದಿ ಕಾಪುವಿನ ಮೂವತ್ತು ಸೆಂಟ್ಸ್ ಸ್ಥಳದಲ್ಲಿ ಪುರಸಭೆ ನಿರ್ವಹಿಸುತ್ತಿರುವ ಘಟಕದ ಬಗ್ಗೆ ಮನವರಿಕೆ ಮಾಡಿಕೊಳ್ಳಲಿ ಎಂದು ಮುಖ್ಯಾಧಿಕಾರಿ ರಾಯಪ್ಪ ಹೇಳಿದರು. 

ತಾಲ್ಲೂಕು ಮಟ್ಟದ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ 89 ಸಾವಿರ ರೂಪಾಯಿ ವೆಚ್ಚವಾಗಿದೆ. ಈ ಮೊತ್ತವನ್ನು ಪಾವತಿಸುವ ಬಗ್ಗೆ ಕೌನ್ಸಿಲ್ ಅನುಮೊದನೆ ನೀಡಬೇಕು ಎಂದು ಮುಖ್ಯಾಧಿಕಾರಿ ತಿಳಿಸಿದರು. ಕಾರ್ಯಕ್ರಮಕ್ಕೆ ಪುರಸಭೆ ಸದಸ್ಯರನ್ನು ಆಹ್ವಾನಿಸದೆ ಅಗೌರವ ತೋರಿದ ತಾಲ್ಲೂಕು ಆಡಳಿತದ ಖರ್ಚನ್ನು ನಾವೇಕೆ ಭರಿಸಬೇಕು ಎಂದು ಸದಸ್ಯರು ಆಕ್ಷೇಪಿಸಿದರು. ಈ ಬಗ್ಗೆ ತಹಶೀಲ್ದಾರ್ ಗಮನಕ್ಕೆ ತರಲಾಗುವುದು. ಮುಂದೆ ಹೀಗಾಗದಂತೆ ಎಚ್ಚರವಹಿಸಲು ಸೂಚಿಸಲಾಗುವುದು ಎಂದು ರಾಯಪ್ಪ ತಿಳಿಸಿದರು.

ಪುರಸಭೆ ಅಧ್ಯಕ್ಷೆ ಮಾಲಿನಿ, ಉಪಾಧ್ಯಕ್ಷ ಕೆ.ಎಚ್.ಉಸ್ಮಾನ್, ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಂತಲತಾ ಶೆಟ್ಟಿ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News