ತೈಲೋತ್ಪನ್ನಗಳ ಬೆಲೆ ಏರಿಕೆ ವಿರುದ್ಧ ಐವನ್ ನೇತೃತ್ವದಲ್ಲಿ ಪ್ರತಿಭಟನಾ ಆಂದೋಲನ

Update: 2018-09-07 10:08 GMT

ಮಂಗಳೂರು, ಸೆ.7: ಪೆಟ್ರೋಲ್, ಡೀಸೆಲ್ ಹಾಗೂ ಅಡುಗೆ ಅನಿಲಗಳ ಬೆಲೆ ಏರಿಕೆಯಾಗುತ್ತಿರುವುದನ್ನು ವಿರೋಧಿಸಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ನೇತೃತ್ವದಲ್ಲಿ ಪ್ರತಿಭಟನಾ ಆಂದೋಲನ ನಡೆಯಲಿದೆ.

ವಿವಿಧ ಸಂಘಟನೆಗಳ ಸಹಭಾಗಿತ್ವದಲ್ಲಿ ನಡೆಯಲಿರುವ ಆಂದೋಲನದ ಕುರಿತಾದ ಕರಪತ್ರವನ್ನು ಇಂದು ಸಂಘಟನೆಗಳ ಪ್ರಮುಖರ ಉಪಸ್ಥಿತಿಯಲ್ಲಿ ಐವನ್ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ಬೆಲೆ ಏರಿಕೆ ಕುರಿತಂತೆ ಇಂದು ಸಂಜೆ 5 ಗಂಟೆಗೆ ಉರ್ವಾ ಮಾರುಕಟ್ಟೆ ಬಳಿಯಿಂದ ವಿವಿಧ ಪ್ರದೇಶಗಳಲ್ಲಿ ಜನಜಾಗೃತಿ ಸಭೆಗಳನ್ನು ನಡೆಸಲಾಗುವುದು ಎಂದರು.

ತೈಲ ಉತ್ಪನ್ನಗಳನ್ನು ಜಿಎಸ್‌ಟಿಗೊಳಪಡಿಸಬೇಕು ಎಂದು ಆಗ್ರಹಿಸಿದ ಅವರು, ಕೇಂದ್ರ ಸರಕಾ ಬೆಲೆ ಏರಿಕೆಯನ್ನು ತಡೆಯಲು ವಿಫಲವಾಗಿ ಕಾರ್ಪೊರೇಟ್ ಕಂಪೆನಿಗಳಿಗೆ ದೇಶದ ಸಂಪತ್ತಿನ ಲೂಟಿಗೆ ಅವಕಾಶ ಕಲ್ಪಿಸಿದೆ ಎಂದು ಆರೋಪಿಸಿದರು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲಗಳ ಬೆಲೆ ಕಡಿಮೆ ಆಗಿದ್ದರೂ ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆ ಗಗನಕ್ಕೇರಿದೆ. 2014ರಲ್ಲಿ ಕಚ್ಚಾ ತೈಲ ಬೆಲೆ ಬ್ಯಾರಲ್ ಒಂದಕ್ಕೆ 108.26 ಡಾಲರ್‌ಗಳಿದ್ದು, ಅಂದು ಪೆಟ್ರೋಲ್ 65 ರೂ. ಗರಿಷ್ಠ ಬೆಲೆಯಾಗಿತ್ತು. ಇಂದು ಬ್ಯಾರಲೊಂದಕ್ಕೆ 63 ಡಾಲರ್‌ಗಳಿದ್ದು, ಪೆಟ್ರೋಲ್ ದರ 81.63 ರೂ.ಗಳಿವೆ. ಕಳೆದ ನಾಲ್ಕು ವರ್ಷಗಳಿಂದ ಸಂಗ್ರಹಿಸಿದ ತೆರಿಗೆ ಹಣವನ್ನು ಯಾವ ಉದ್ದೇಶಕ್ಕಾಗಿ ಬಳಸಲಾಗಿದೆ ಎಂಬ ಮಾಹಿತಿ ಇಲ್ಲ. ಸೀಮೆಎಣ್ಣೆ ಮುಕ್ತ ಮಾಡಿದ ಸರಕಾರ 2014ರಲ್ಲಿ 400 ರೂ.ಗಳಿದ್ದ ಗ್ಯಾಸ್ ಸಿಲಿಂಡರ್ ಬೆಲೆಯನ್ನು ಇದೀಗ 813 ರೂ.ಗೆ ಏರಿಕೆ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ 12 ಬಾರಿ ಕೇಂದ್ರ ಅಬಕಾರಿ ಸುಂಕದಲ್ಲಿ ಹೆಚ್ಚಳವಾಗಿದೆ. ಅಂಕಿಅಂಶಗಳ ಪ್ರಕಾರ 15 ಹೊರ ದೇಶಗಳಿಗೆ 34 ರೂ.ಗೆ ಪೆಟ್ರೋಲ್ ಹಾಗೂ 37 ರೂ.ಗೆ ಡೀಸೆಲನ್ನು 27 ಹೊರ ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಇದಕ್ಕೆ ಕೇಂದ್ರ ಸರಕಾರ ಉತ್ತರಿಸಬೇಕು ಎಂದು ಅವರು ಒತ್ತಾಯಿಸಿದರು.

ಪ್ರತಿಭಟನಾ ಆಂದೋಲನದ ಅಂಗವಾಗಿ ಎರಡು ದಿನ ವಿವಿಧ ಕಡೆಗಳಲ್ಲಿ ಜನಜಾಗೃತಿ ಸಭೆಗಳು ನಡೆದು, 8ರಂದು ಸಂಜೆ 4 ಗಂಟೆಗೆ ಹಂಪನಕಟ್ಟೆಯಲ್ಲಿ ಪ್ರಚಾರಾಂದೋಲನ ನಡೆಯಲಿದೆ. 28 ವಿವಿಧ ಸಂಘಟನೆಗಳು ಈ ಆಂದೋಲನದಲ್ಲಿ ಪಾಲ್ಗೊಳ್ಳಲಿವೆ. ಸೆ.10ರಂದು ಹಂಪನಕಟ್ಟೆ ಸರ್ಕಲ್‌ನಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಬೆಳಗ್ಗೆ 10 ಗಂಟೆಗೆ ಪ್ರತಿಭಟನಾ ಮೆರವಣಿಗೆ, ಜಿಲ್ಲಾಧಿಕಾರಿ ಕಚೇರಿ ಬಳಿ ಸಭೆ ನಡೆಯಲಿದೆ ಎಂದು ಅವರು ತಿಳಿಸಿದರು.

ಅಲ್ಲಲ್ಲಿ ಜಾಗೃತಿ ಸಭೆ

ಇಂದು ಸಂಜೆ 5 ಗಂಟೆಗೆ ಉರ್ವಾ ಮಾರುಕಟ್ಟೆ ಬಳಿ, 6 ಗಂಟೆಗೆ ಉರ್ವಾ ರಿಕ್ಷಾ ನಿಲ್ದಾಣದ ಬಳಿ, 7 ಗಂಟೆಗೆ ಕುದ್ರೋಳಿ ಜೋಡುಪಳ್ಳಿ ಬಳಿ, 8 ಗಂಟೆಗೆ ಬಂದರು ಪೊಲೀಸ್ ಠಾಣೆ ಬಳಿ, 8:30ಕ್ಕೆ ಕಂದಕ್ ಪೇಟೆಯಲ್ಲಿ ಜನಜಾಗೃತಿ ಸಭೆ ನಡೆಯಲಿದೆ.

ಸೆ.8ರಂದು ಸಂಜೆ 6 ಗಂಟೆಗೆ ರೈಲ್ವೆ ನಿಲ್ದಾಣ ಕುದ್ರೋಳಿ ಸರ್ಕಲ್ ಬಳಿ, 7 ಗಂಟೆಗೆ ಕೆಎಂಸಿ ಅತ್ತಾವರ ಆಸ್ಪತ್ರೆ ಬಳಿ, 8 ಗಂಟೆಗೆ ಮಹಾಕಾಳಿಪಡ್ಪು, 8:30ಕ್ಕೆ ವೆಲೆನ್ಸಿಯಾ ಸರ್ಕಲ್, 9 ಗಂಟೆಗೆ ಕಂಕನಾಡಿ ಮೈದಾನದ ಬಳಿಕ ಸಭೆಯನ್ನು ನಡೆಸಲಾಗುವುದು ಎಂದು ಐವನ್ ಡಿಸೋಜ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ದಯಾನಾಥ ಕೋಟ್ಯಾನ್, ನಾಗೇಂದ್ರ ಕುಮಾರ್, ನ್ಯಾಯವಾದಿ ದಿನಕರ ಶೆಟ್ಟಿ, ಪುನೀತ್ ಶೆಟ್ಟಿ ಹಾಗೂ ಇತರರು ಉಪಸ್ಥಿತರಿದ್ದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News